ಸುದ್ದಿ ಸಂಕ್ಷೇಪ
ನಕಲಿ ಕಾಡ್: ಸೂಚನೆ
ಗದಗ: ಎಲ್ಲ ವರ್ಗದ ಸರ್ಕಾರಿ, ಅರೆ ಸರ್ಕಾರಿ, ಬ್ಯಾಂಕ್ ಹಾಗೂ ಖಾಸಗಿ ಉದ್ದಿಮೆಗಳ ನೌಕರರು, ಆದಾಯ ತೆರಿಗೆ ಪಾವತಿಸುವ ಸದಸ್ಯರು, ಸರ್ಕಾರಿ ಸ್ವಾಮ್ಯದ ಉದ್ಯಮಗಳು, ಮಂಡಳಿಗಳು, ನಿಗಮಗಳ ಕಾಯಂ ನೌಕರರು, ಸ್ವಾಯತ್ತ ಸಂಸ್ಥೆಯ, ಮಂಡಳಿಗಳ ನೌಕರರು, ಸಹಕಾರ ಸಂಘಗಳ ಕಾಯಂ ಸಿಬ್ಬಂದಿ, ವೃತ್ತಿಪರ ವರ್ಗಗಳು, ವೈದ್ಯರು, ಆಸ್ಪತ್ರೆಗಳ ನೌಕರರು, ವಕೀಲರು, ಲೆಕ್ಕ ಪರಿಶೋಧಕರು, ಬಹುರಾಷ್ಟ್ರೀಯ ಕಂಪನಿ, ಉದ್ದಿಮೆ, ಕೈಗಾರಿಕೆಗಳ ನೌಕರರು, ಸೈಕಲ್, ಗಾಡಿಗಳ ಮೇಲೆ ತಳ್ಳಿಕೊಂಡು, 100 ಸಿಸಿಗೆ ಮೇಲ್ಪಟ್ಟು ಇಂಧನ ಚಾಲಿತ ವಾಹನಗಳನ್ನು (ದ್ವಿಚಕ್ರ, ತ್ರಿಚಕ್ರ, ಕಾರು ಇತ್ಯಾದಿ ವಾಹನ) ಹೊಂದಿರುವ ಸದಸ್ಯರನ್ನು ಒಳಗೊಂಡ ಕುಟುಂಬ, ಅನುದಾನರಹಿತ ಕನ್ನಡ ಶಾಲೆಗಳ ನೌಕರರನ್ನು ಹೊರತುಪಡಿಸಿ, ಅನುದಾನಿತ, ಅನುದಾನರಹಿತ ಶಾಲಾ ಕಾಲೇಜುಗಳ ನೌಕರರು, ನೋಂದಾಯಿತ ಗುತ್ತಿಗೆದಾರರು, ಎಪಿಎಂಸಿ ಟ್ರೇಡರ್ಸ್, ಕಮಿಷನ್ ಏಜೆಂಟ್ಸ್, ಬೀಜ ಮತ್ತು ಗೊಬ್ಬರ ಇತ್ಯಾದಿ ಡೀಲರ್ಸ್, ಮನೆ-ಮಳಿಗೆ-ಕಟ್ಟಡಗಳನ್ನು ಬಾಡಿಗೆ ನೀಡಿ ವರಮಾನ ಪಡೆಯುವವರು. ಮೇಲ್ಕಾಣಿಸಿದವರು ಸುಳ್ಳು ಮಾಹಿತಿ ನೀಡಿ ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದಲ್ಲಿ ಕರ್ನಾಟಕ (ಅನಧಿಕೃತವಾಗಿ ಪಡಿತರ ಚೀಟಿಗಳನ್ನು ಹೊಂದುವುದನ್ನು ತಡೆಗಟ್ಟುವ) ಆದೇಶ-1977 ರ ಕಲಂ (3) ರ ಉಲ್ಲಂಘನೆಯಾಗುವುದು. ವಾರದೊಳಗೆ ಸಂಬಂಧಪಟ್ಟ ತಾಲೂಕಿನ ತಹಸೀಲ್ದಾರ್ ಕಚೇರಿಯ ಆಹಾರ ವಿಭಾಗದಲ್ಲಿ ಗದಗ ಶಹರದವರು ಪಡಿತರ ಕಚೇರಿ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಕೊಠಡಿ ಸಂಖ್ಯೆ 118ರ ಆಹಾರ ವಿಭಾಗದಲ್ಲಿ ಇರಿಸಲಾದ ಪೆಟ್ಟಿಗೆಯಲ್ಲಿ ತಮ್ಮ ಮೂಲ ರೇಷನ್ ಕಾರ್ಡ್‌ಗಳನ್ನು ಹಾಕಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ಅಂಥವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955ರ ಅಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಸರ್ಕಾರಿ ನೌಕರರಾಗಿದ್ದಲ್ಲಿ ಸೇವೆಯಿಂದ ಅಮಾನತುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಢನಂಬಿಕೆ ಇಂದಿಗೂ ಜೀವಂತ: ಡಾ. ಅರ್ಜುನ ಗೋಳಸಂಗಿ ವಿಷಾದ
ಗದಗ: ಶತಮಾನಗಳಿಂದಲೂ ಸಮಾಜದಲ್ಲಿ ಬೆಳೆದು ಬಂದಿರುವ ಮೂಢನಂಬಿಕೆ, ಕಂದಾಚಾರಗಳು ಇಂದಿಗೂ ಜೀವಂತವಾಗಿರುವುದು ದುರದೃಷ್ಟಕರ. ಮೂಢನಂಬಿಕೆಗಳು ವ್ಯಕ್ತಿಯ ಅವನತಿಗೆ ಕಾರಣವಾಗುತ್ತವೆ ಎಂದು ಡಾ. ಅರ್ಜುನ ಗೋಳಸಂಗಿ ಹೇಳಿದರು.
ಅವರು ನಗರದ ಗುರುಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗದಗ ಹಾಗೂ ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ ಗದಗ ಇವುಗಳ ಆಶ್ರಯದಲ್ಲಿ ಈಚೆಗೆ ಜರುಗಿದ ದಲಿತ ವರ್ಗ ಮತ್ತು ಮೂಢನಂಬಿಕೆ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ದಲಿತ ವರ್ಗ ಶಿಕ್ಷಣ ಪಡೆದು ಸಮಾಜಕ್ಕೆ ಅಂಟಿರುವ ಮೂಢನಂಬಿಕೆಯನ್ನು ತೊಲಗಿಸಲು ಪ್ರಯತ್ನಿಸಲು ಕರೆ ನೀಡಿದರು. ಶಿಕ್ಷಕ ಎಸ್.ಎನ್. ಬಳ್ಳಾರಿ ಮಾತನಾಡಿ, ಮೂಢನಂಬಿಕೆ ಮನುಷ್ಯನ ದೊಡ್ಡ ಶತ್ರುವಾಗಿದ್ದು, ಇಂದಿಗೂ ಕೆಲ ರೀತಿಯ ಮೂಢನಂಬಿಕೆಯಂತಹ ಸಂಪ್ರದಾಯಗಳು ಇಂದಿಗೂ ಜನರಲ್ಲಿ ಬೇರೂರಿದ್ದು, ಇದನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ ಎಂದರು. ಉದ್ಘಾಟನೆ ನೆರವೇರಿಸಿದ ಆರ್.ಎಸ್. ಪೂಜಾರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಂಚಾಲಕ ಮಾರುತಿ ಗುಡಿಮನಿ, ದಸಂಸ ನಾಯಕ ಆರ್.ಎಸ್. ಗುಜ್ಜಲ, ಬಸವರಾಜ ಕಡೇಮನಿ, ಬಿ.ಎಫ್. ಪೂಜಾರ, ಹೊಳೆಬಸಪ್ಪ ಅಕ್ಕಿ ಮುಂತಾದವರು ಮಾತನಾಡಿದರು. ವಿಜಯ ಕಲ್ಮನಿ, ಪರಶುರಾಮ ಪೂಜಾರ, ಗಣೇಶ ಹುಬ್ಬಳ್ಳಿ, ಧರ್ಮಣ್ಣ ಹೊಸಮನಿ, ಮಂಜುನಾಥ ಕೋಟ್ನಿಕಲ್ಲ, ವಿರೂಪಾಕ್ಷ ಚಲವಾದಿ, ವಿಶ್ವನಾಥ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು. ಅಂಬೇಡ್ಕರ್ ಅಧ್ಯಯನ ಕೇಂದ್ರದ ಅಧ್ಯಕ್ಷ ಸಂತೋಷ ಬಳ್ಳಾರಿ ಸ್ವಾಗತಿಸಿದರು. ಸತೀಶ ಹೂಲಿ ನಿರೂಪಿಸಿದರು. ಯುವರಾಜ ಬಳ್ಳಾರಿ ವಂದಿಸಿದರು.