ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕನಕದಾಸ ಜಾತ್ಯತೀತ ತತ್ವ ಸಾರಿದ ಹರಿಕಾರ

Lingaraj Badiger
Updated On : 27 Nov 2013, 11:11 am

ಗದಗ: ಸಮಾಜದಲ್ಲಿ ಜಾತಿ-ಮತ, ವರ್ಣ ಭೇದಗಳ ವಿರುದ್ಧ ಧ್ವನಿಎತ್ತಿ ಜಗತ್ತಿಗೆ ಜಾತ್ಯತೀತ ತತ್ವ ಸಾರಿದ ಮಹಾನ ಸಂತ ಕನಕದಾಸರು ಎಂದು ಪ್ರಕಾಶ ಗಿಡ್ಡಣ್ಣವರ ಹೇಳಿದರು. ಅವರು ಈಚೆಗೆ ತಾಲೂಕಿನ ಅಂತೂರು-ಬೆಂತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 1ರಲ್ಲಿ ನಡೆದ ಕನಕದಾಸರ 526ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಿ.ಡಿ. ಹಾದಿಮನಿ, ಎಚ್.ವಿ. ಆಲೂರ, ವಿ.ಎಚ್. ಬಿಂಕದಕಟ್ಟಿ, ಜೆ.ಎಂ. ನದಾಫ ಮಾತನಾಡಿ, ಕನಕದಾಸರು ತಮ್ಮ ಜ್ಞಾನ ದಾಸೋಹವನ್ನು ಕೆಳವರ್ಗದವರಿಗೆ ಮುಟ್ಟಿಸಿ, ಜಾತಿ ವ್ಯವಸ್ಥೆಗಳ ವಿರುದ್ಧ ಹೋರಾಡಿ ಸಮಾನತೆಗೆ ಶ್ರಮಿಸಿದವರು ಎಂದರು. ಎಂ.ಬಿ. ಬಂಕದ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಸದಸ್ಯ ಶಿವರಾಯಪ್ಪ ಸೊರಟೂರ, ಎಸ್.ವಿ. ಅಂಗಡಿ, ಆರ್.ಎಂ. ಹಿರೇಮಠ, ಜಿ.ಜಿ. ಲಿಂಗರಡ್ಡಿ, ಆರ್.ಬಿ. ಕಟ್ಟಿಮನಿ, ವೈ.ಎ. ನರಗುಂದ, ಕೆ.ಪಿ. ದೂದನಕರ ಮುಂತಾದವರು ಹಾಜರಿದ್ದರು. ಕನಕದಾಸರ ಶ್ರೇಷ್ಠತೆ ಹಾಗೂ ಮೌಲ್ಯಗಳ ಕುರಿತು ಬುಡನಬಿ ಮುಲ್ಲಾನವರ, ಜಯಮ್ಮ ಪೂಜಾರ ಅಂಜಲಿ ಆಲೂರ ವಿದ್ಯಾರ್ಥಿಗಳು ಮಾತನಾಡಿದರು. ಶಿಕ್ಷಕಿ ಎಸ್.ವಿ.ಕೆ. ಹಿರೇಮಠ ಸ್ವಾಗತಿಸಿದರು. ಎಲ್.ಬಿ. ತಿಮ್ಮನಗೌಡ್ರ ನಿರೂಪಿಸಿದರು. ಎಸ್.ಎಚ್. ಇಳಕಲ್ ವಂದಿಸಿದರು.
ದೇವರ ಕಟ್ಟೆ ಧ್ವಂಸ: ಉದ್ವಿಗ್ನ
ಗದಗ: ಸೌಹಾರ್ದತೆ ಕದಡಲು ಕೆಲವು ಕಿಡಿಗೇಡಿಗಳು ನಡೆಸಿದ ದುಷ್ಕೃತ್ಯವು ಮಂಗಳವಾರ ಬೆಳಗಿನ ಜಾವ ನಗರ ಹೊರವಲಯದ ಗಂಗಿಮಡಿ ಪ್ರದೇಶದಲ್ಲಿ ಕೆಲಕಾಲ ಜನರ ಆತಂಕಕ್ಕೆ ಕಾರಣವಾಯಿತು. ಈ ಪ್ರದೇಶದಲ್ಲಿ ನಗರಸಭೆಯ ಮಾಲ್ಕಿ ಜಾಗೆಯಲ್ಲಿ ಇಲ್ಲಿನ ನಿವಾಸಿಗಳಿಗೆ ಮೂಲ ಸೌಲಭ್ಯ ಒದಗಿಸಲು ಸುಲಭ ಶೌಚಾಲಯ ನಿರ್ಮಾಣಕ್ಕೆ ಮೀಸಲಾಗಿರಿಸಿದ್ದ ಸ್ಥಳದಲ್ಲಿ ರಾತ್ರೋರಾತ್ರಿ ಸಿಮೆಂಟ್ ಇಟ್ಟಿಗೆಗಳಿಂದ ಸಣ್ಣ ಕಟ್ಟೆಯೊಂದನ್ನು ನಿರ್ಮಿಸಿ, ಅದರ ಮಧ್ಯದಲ್ಲಿ ಒಂದು ಕೋಮಿಗೆ ಸೇರಿದ ಧ್ವಜವೊಂದನ್ನು ನೆಡಲಾಗಿತ್ತು. ಮಂಗಳವಾರ ಬೆಳಗಿನ ಜಾವ ಯಾರೋ ದುಷ್ಕರ್ಮಿಗಳು ಇದನ್ನು ಒಡೆದು ಹಾಕಿದ ಘಟನೆ ಜರುಗಿದೆ. ಈ ಸುದ್ದಿ ಹರಡುತ್ತಿದ್ದಂತೆ ಜನ ಗುಂಪು ಗುಂಪಾಗಿ ಸೇರುತ್ತಿರುವ ವಿಷಯ ಗ್ರಾಮೀಣ ಠಾಣೆಯ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರನ್ನು ಶಾಂತಿಯುತವಾಗಿ ಚದುರಿಸುವಲ್ಲಿ ಯಶಸ್ವಿಯಾದರು. ಬಳಿಕ ಈ ಪ್ರದೇಶದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement