ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗ್ರಾಪಂ ಆದಾಯ ಮಣ್ಣು ಪಾಲು

Lingaraj Badiger
Updated On : 27 Nov 2013, 11:02 am

ಕನ್ನಡಪ್ರಭ ವಾರ್ತೆ, ರೋಣ, ನ. 26
ತಾಲೂಕಿನ ನಿಡಗುಂದಿ ಮತ್ತು ಕಳಕಾಪುರ ನಡುವೆ ನಿರ್ಮಿಸಲಾಗುತ್ತಿರುವ ಕುಡಿಯುವ ನೀರಿನ ಕೆರೆಯಲ್ಲಿ ಗರಸು ಮಣ್ಣು ಹೇರಳವಾಗಿದ್ದು, ಈ ಮಣ್ಣನ್ನು ಗ್ರಾಪಂ ಅಧ್ಯಕ್ಷ ಮತ್ತು ಕೆಲ ಸದಸ್ಯರು ಗುತ್ತಿಗೆದಾರರಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ನಿಡಗುಂದಿ ಗ್ರಾಪಂಗೆ ಬರತಕ್ಕಂತಹ ಆದಾಯಕ್ಕೆ ಕೊಕ್ಕೆ ಬಿದ್ದಂತಾಗಿದೆ ಎಂದು ಆರೋಪಿಸಿ, ಈ ಕುರಿತು ಗ್ರಾಪಂ ಆಡಳಿತ ಮತ್ತು ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ನಿಡಗುಂದಿ ಗ್ರಾಮಸ್ಥರ ಪರವಾಗಿ ಕರವೇ ಜಿಲ್ಲಾ ಉಪಾಧ್ಯಕ್ಷ ಈರಪ್ಪ ಬಿಚ್ಚೂರ ಆಗ್ರಹಿಸಿದ್ದಾರೆ.
ಈ ಕುರಿತು ಮಂಗಳವಾರ ಪಟ್ಟಣದ ತಾಪಂ ಸಭಾಭವನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಆಗಮಿಸಿದ ಗದಗ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದ ಅವರು, ನೂತನವಾಗಿ ನಿರ್ಮಿಸಲಾಗುತ್ತಿರುವ ನಿಡಗುಂದಿ ಹತ್ತಿರದ ಕೆರೆಯಲ್ಲಿನ ಗರಸು ಮಣ್ಣನ್ನು ರಸ್ತೆ ನಿರ್ಮಾಣಕ್ಕಾಗಿ ಗುತ್ತಿಗೆದಾರರಿಗೆ ಮಾರಾಟ ಮಾಡಲಾಗುತ್ತಿದೆ. ಇದು ಗ್ರಾಪಂ ವ್ಯಾಪ್ತಿಗೆ ಬರತಕ್ಕಂತಹ ವಿಷಯವಾಗಿದ್ದರಿಂದ ಇಲ್ಲಿನ ಮಣ್ಣು ಬೇರೆಡೆ ಕಳುಹಿಸಲು ಅಥವಾ ಮಾರಾಟ ಮಾಡಲು ಗ್ರಾಪಂ ಪರವಾನಗಿ ಅಗತ್ಯವಿದೆ ಎಂದು ಅನೇಕ ಬಾರಿ ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗಿ ಮಣ್ಣು ಒಯ್ಯದಂತೆ ಎಚ್ಚರಿಸಲಾಗಿದೆ.
ಆದರೂ ಗುತ್ತಿಗೆದಾರರು ಗ್ರಾಪಂ ಪರವಾನಗಿ ಪಡೆದಿದ್ದೇವೆ ಎನ್ನುತ್ತಾರೆ. ಗ್ರಾಪಂ ಅಧ್ಯಕ್ಷ ಜಗದೀಶ ಕರಡಿಯವರನ್ನು ಕೇಳಿದರೆ ಗ್ರಾಪಂನ ಸರ್ವ ಸದಸ್ಯರ ಒಪ್ಪಿಗೆ ಪಡೆದು ಮಣ್ಣು ಬೇರೆಡೆ ಕೊಡಲಾಗಿದೆ. ಇದಕ್ಕೆ ಯಾವುದೇ ಹಣ ತೆಗೆದುಕೊಂಡಿಲ್ಲ ಎನ್ನುತ್ತಾರೆ. ಗ್ರಾಪಂ ಅಧ್ಯಕ್ಷರ ಮತ್ತು ಪಿಡಿಒಗಳ ನಿಷ್ಕಾಳಜಿಯಿಂದ ಗ್ರಾಪಂಗೆ ಬರುವ ಆದಾಯಕ್ಕೆ ಕೊಕ್ಕೆ ಬಿದ್ದಂತಾಗಿದೆ.
ತನಿಖೆಗೆ ಒತ್ತಾಯ: ಕೆರೆಯ ನಿರ್ಮಾಣ ಕಾರ್ಯವು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಗರಸು ಮಣ್ಣು ಯಾವ ಭಾಗದಲ್ಲಿ ಹೆಚ್ಚಾಗಿ ದೊರೆಯುತ್ತದೆಯೋ ಆ ಭಾಗದಲ್ಲಿ ಮಾತ್ರ ತೆಗ್ಗುಗಳನ್ನು ತೊಡಲಾಗಿದೆ. ಕಪ್ಪು ಮಣ್ಣು ಇದ್ದಲ್ಲಿ ಹಾಗೆಯೇ ಬಿಡಲಾಗಿದೆ. ಇದರಿಂದ ಕೆರೆ ನಿರ್ಮಾಣ ಕಾಮಗಾರಿ ಬೇರೆಯೇ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಕೆರೆ ನಿರ್ಮಾಣದ ನೆಪದಲ್ಲಿ ಅಕ್ರಮ ಗರಸು ಮಣ್ಣು ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಈರಪ್ಪ ಬಿಚ್ಚೂರ ಲೋಕಾಯುಕ್ತರಲ್ಲಿ ಆಗ್ರಹಿಸಿದರು.
ಈ ಕುರಿತು ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ಕೆ.ಸಿ. ಅಸುಂಡಿ ಮಾತನಾಡಿ, ಈ ಕುರಿತು ನಿಡಗುಂದಿ ಗ್ರಾಪಂ ಮತ್ತು ತಾಪಂ ಅಧಿಕಾರಿಗಳನ್ನ ವಿಚಾರಿಸಿ ಮಾಹಿತಿ ಪಡೆಯಲಾಗುವುದು. ಅಗತ್ಯವಿದ್ದಲ್ಲಿ ತನಿಖೆ ಕೈಗೊಳ್ಳಲಾಗುವದು ಎಂದರು.
ಸಮುದಾಯ ಭವನದಲ್ಲಿ ಹಾಲಿನ ಕೇಂದ್ರ: ಕಲೆ, ಸಾಹಿತ್ಯ, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಬೇಕಿದ್ದ ತಾಲೂಕಿನ ಸೂಡಿ ಗ್ರಾಮದ 2ನೇ ವಾರ್ಡಿನಲ್ಲಿನ ಸಮುದಾಯ ಭವನದಲ್ಲಿ ಹಾಲಿನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡೆತಡೆಯಾಗುತ್ತಿದೆ. ಕೂಡಲೇ ಸಮುದಾಯಭವನದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುವಂತೆ ವ್ಯವಸ್ಥೆ ಕಲ್ಪಿಸುವಂತಾಗಬೇಕು ಎಂದು ಸೂಡಿ ಗ್ರಾಮದ ಎಂ.ಕೆ. ಬಾದವಾಡಗಿ ದೂರು ಸಲ್ಲಿಸಿದರು. ಭಾರತ ನಿರ್ಮಲ ಅಭಿಯಾನದಲ್ಲಿ ನಿರ್ಮಿಸಲಾದ ಶೌಚಾಲಯದ ಬಾಕಿ ಇರುವ ರು. 4500 ಸಹಾಯ ಧನವನ್ನು ನೀಡಲು ಗ್ರಾಪಂನವರು ವಿಳಂಬ ಮಾಡುತ್ತಿದ್ದಾರೆ. ಉದ್ಯೋಗ ಚೀಟಿ ಹೊಂದಿದ್ದರೂ ನಮ್ಮ ಖಾತೆಗೆ ಹಣ ಸಂದಾಯ ಮಾಡುತ್ತಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸವಡಿ ಗ್ರಾಮದ ಶಶಿಧರ ಬೆಟಗೇರಿ ಮನವಿ ಸಲ್ಲಿದರು. ಒಟ್ಟು 3 ದೂರುಗಳು ಬಂದಿದ್ದು, ಇವುಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಲೋಕಾಯುಕ್ತ ಡಿವೈಎಸ್‌ಪಿ ಕೆ.ಸಿ. ಅಸುಂಡಿ ತಿಳಿಸಿದರು. ಲೋಕಾಯುಕ್ತ ಸಿಬ್ಬಂದಿ ಮಹೇಶ ಅಯ್ಯನಗೌಡ್ರ, ನಾರಾಯಣ ತಾಯನ್ನವರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement