ಸಂಭಾಜಿ ಪಾಟೀಲ ಗಡಿಪಾರಿಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ನ. 27
ಕನ್ನಡಿಗರನ್ನು ಕೆಣಕುವ ಹೇಳಿಕೆ ನೀಡುತ್ತಿರುವ ಎಂಇಎಸ್ ಶಾಸಕ ಸಂಭಾಜಿರಾವ್ ಪಾಟೀಲ್ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು, ಮರಾಠಿಗರು ಮತ್ತು ಕನ್ನಡಿಗರು ನೆಮ್ಮದಿಯಿಂದ ಸಹಬಾಳ್ವೆ ನಡೆಸುತ್ತಿರುವಾಗ ವಿನಾಕಾರಣ ಕರ್ನಾಟಕದ ವಿರುದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಎಂಇಎಸ್ ಪುಂಡರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಶಿರಹಟ್ಟಿ ತಾಲೂಕು ಕರವೇ ಅಧ್ಯಕ್ಷ ಶರಣು ಗೋಡಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ನಾಡಕಚೇರಿಯಲ್ಲಿ ಉಪತಹಸೀಲ್ದಾರರಿಗೆ ಕರವೇ ಹಾಗೂ ಮಹಾಕವಿ ಪಂಪ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಬುಧವಾರ ಮನವಿ ಅರ್ಪಿಸಿ ಅವರು ಮಾತನಾಡಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮರಾಠಿ ಭಾಷೆಯಲ್ಲಿ ಮಾತನಾಡಿ ಕನ್ನಡಿಗರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ. ಅಲ್ಲದೆ ಎಂಇಎಸ್ನ ನಾಲ್ವರು ಶಾಸಕರಿದ್ದರೆ ಕರ್ನಾಟಕದ ಶವಯಾತ್ರೆ ನಡೆಸುತ್ತಿದ್ದೆ ಎನ್ನುವ ಉದ್ಧಟತನದ ಹೇಳಿಕೆ ನೀಡಿ ಕರ್ನಾಟಕದ 6 ಕೋಟಿ ಜನರನ್ನು ಅವಮಾನ ಮಾಡಿದ್ದಾರೆ ಎಂದು ಹೇಳಿದರು. ಈ ಕುರಿತು ಅವರು ಕರ್ನಾಟಕದ ಜನತೆಯಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ನೇತೃತ್ವದಲ್ಲಿ ರಾಜ್ಯದ ಎಲ್ಲ ಕಾರ್ಯಕರ್ತರು ಸೇರಿ ತಕ್ಕ ಪಾಠ ಕಲಿಸುತ್ತೇವೆ. ಇಲ್ಲವೇ ನಾವೆ ನಿಮ್ಮನ್ನು ಮಹಾರಾಷ್ಟ್ರಕ್ಕೆ ಓಡಿಸಬೇಕಾಗುತ್ತದೆ ಎಂದರು. ಕನ್ನಡಿಗರ ತಾಳ್ಮೆ ಕೆಣಕುತ್ತಿರುವ ಸಂಭಾಜಿ ಪಾಟೀಲ್ ಅವರ ಶಾಸಕತ್ವ ಅನರ್ಹಗೊಳಿಸುವ ದಿಟ್ಟತನ ನಿಲುವನ್ನು ಕರ್ನಾಟಕ ಸರ್ಕಾರ ತೆಗೆದುಕೊಳ್ಳಬೇಕು ಎಂದರು.
ಮಹಾದೇವಪ್ಪ ಗಡೇದ, ಶಂಕರ ಬೂದಿಹಾಳ, ವಾಸು ಗೋಸಾವಿ, ಶಿವಲಿಂಗಯ್ಯ ಹೊತಗಿಮಠ, ಈರಣ್ಣ ಮುಳಗುಂದ, ಬಸವರಾಜ ಹಿರೇಮನಿ, ಸಂತೋಷ ಹೂಗಾರ, ಕುಮಾರಗೌಡ ಪಾಟೀಲ, ಗಂಗಾಧರ ಗೋಡಿ, ಅಶೋಕ ಸೂರಣಗಿ, ನಾಗರಾಜ ಸೂರಣಗಿ, ಪ್ರಕಾಶ ಕೊಂಚಿಗೇರಿಮಠ, ಪ್ರಕಾಶ ಮುಳಗುಂದ ಹಾಗೂ ಪಟ್ಟಣದ ಮಹಾಕವಿ ಪಂಪ ಸಾಹಿತ್ಯ ವೇದಿಕೆ ವೇದಿಕೆಯ ಅಧ್ಯಕ್ಷ ನಾಗರಾಜ ಹಣಗಿ, ಗೌರವಾಧ್ಯಕ್ಷ ಅಶೋಕ ಸೊರಟೂರ, ಕಾರ್ಯದರ್ಶಿ ಬಸವರಾಜ ಬಾಳೇಶ್ವರಮಠ, ಖಜಾಂಚಿ ಮಲ್ಲು ಕಳಸಾಪುರ ಮುಂತಾದವರು ಹಾಜರಿದ್ದರು.