ಉಚಿತ ಆರೋಗ್ಯತಪಾಸಣಾ ಶಿಬಿರ
ಗದಗ: ಗದಗ-ಬೆಟಗೇರಿ ಸಾರ್ವಜನಿಕರ ಕ್ಷೇಮಾಭಿವೃದ್ಧಿ ಸಂಘ, ಧನ್ವಂತರಿ ಸೇವಾ ಸಂಘ ಹಾಗೂ ಶಾಂತೇಶ್ವರ ವಿವಿಧೋದ್ದೇಶಗಳ ಸಮಗ್ರ ಸೇವಾ ಸಂಘದ ಆಶ್ರಯದಲ್ಲಿ ಡಿ. 1ರಂದು ನಗರದ ಪಾರ್ಶ್ವನಾಥ ನಗರದ ಬುಳ್ಳಾ ಬಿಲ್ಡಿಂಗ್ನಲ್ಲಿರುವ ಡಾ. ಶಿವಶಂಕರ ಪೂಜಾರ ದವಾಖಾನೆಯಲ್ಲಿ ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯ ವರೆಗೆ ಏರ್ಪಡಿಸಲಾಗಿದ್ದು, ಇದರ ಸದುಪಯೋಗವನ್ನು ಸರ್ವ ಸದಸ್ಯರು ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
ಡಿ. 2ರಿಂದ ಅನಿರ್ದಿಷ್ಟ ಹೋರಾಟ
ಗದಗ: ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘಟನೆಯು ಡಿ. 2 ರಿಂದ ರಾಜ್ಯ ಮಟ್ಟದ ಅನಿರ್ದಿಷ್ಟ ಅವಧಿ ಹೋರಾಟವನ್ನು ಹಮ್ಮಿಕೊಂಡಿದೆ. ಬಿಸಿಯೂಟ ಯೋಜನೆಯ ಖಾಸಗೀಕರಣ ವಿರೋಧಿಸಿ, ಕನಿಷ್ಠ ಕೂಲಿ ಜಾರಿಗೆ ಒತ್ತಾಯಿಸಿ ಹಾಗೂ ಕೆಲಸದ ಕಾಯಮಗೊಳಿಸಲು ಆಗ್ರಹಿಸಿ 45ನೇ ಭಾರತೀಯ ಕಾರ್ಮಿಕ ಸಮ್ಮೇಳನದ (ಐಎಲ್ಸಿ) ಶಿಫಾರಸುಗಳ ಜಾರಿಗಾಗಿ, ಬಿಸಿಯೂಟ ನೌಕರರ ಬಗ್ಗೆ ಗಂಭೀರತೆ ಇಲ್ಲದ ಶಿಕ್ಷಣ ಇಲಾಖೆಯ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಅಡುಗೆಯನ್ನು ಬಂದ್ ಮಾಡದೇ ಹೋರಾಟಕ್ಕೆ ಭಾಗವಹಿಸಬೇಕು. ಡಿ. 1ರ ಸಂಜೆ 5 ಗಂಟೆಗೆ ಗದಗ-ಬೆಟಗೇರಿಯ ನಗರಸಭೆಯ ಗಾರ್ಡನ್ಗೆ ಬರಬೇಕಾಗಿದ್ದು, ಕಾರಣ ಅಕ್ಷರ ದಾಸೋಹ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸುವಂತೆ ಅಕ್ಷರ ದಾಸೋಹ ನೌಕರರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಹೇಶ ಹಿರೇಮಠ ತಿಳಿಸಿದ್ದಾರೆ.
ಮೂಲಸೌಲಭ್ಯ ನೀಡಿ: ಪ್ರತಿಭಟನೆ
ನರಗುಂದ: ಪಟ್ಟಣದಲ್ಲಿ ಸುಮಾರು 70 ವರ್ಷಗಳಿಂದ ವಾಸವಾಗಿರುವ ತಮಗೆ ಸರ್ಕಾರ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಪಟ್ಟಣದ ಪುರಸಭೆ ಕಾರ್ಯಾಲಯದ ಎದುರು ಭಂಗಿ ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಿದರು.
ಇಲ್ಲಿಯ ದಂಡಾಪುರದಲ್ಲಿ 50 ವರ್ಷಗಳ ಹಿಂದೆಯೇ ಸರ್ಕಾರ ಮನೆ ಕಟ್ಟಿಸಿಕೊಟ್ಟಿದೆ. ಆದರೆ ಆ ಮನೆಗಳನ್ನು ನಮಗೆ ಹಸ್ತಾಂತರಿಸಿಲ್ಲ. ಈಗ ಆ ಮನೆಗಳು ಕುಸಿದು ಬೀಳುವ ಸ್ಥಿತಿಯಲ್ಲಿವೆ. ನಮ್ಮ ಕುಟುಂಬದ ಸದಸ್ಯರು ಯಾವುದೇ ರೀತಿಯ ಕೆಲಸವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಇದರಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ನಮ್ಮ ಮಕ್ಕಳಿಗೆ ದಿನನಿತ್ಯದ ಊಟ, ಶಾಲೆಗೆ ಕಳಿಸಲು ಸಾಧ್ಯವಾಗದೇ ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಜಾಗದ ಹಕ್ಕುಪತ್ರ ನೀಡಿ, ಸುಸಜ್ಜಿತ ಮನೆ ಕಟ್ಟಿಸಿಕೊಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.
ಪುರಸಭೆಯಲ್ಲಿ ದಿನಗೂಲಿ ಕೆಲಸವನ್ನು ಕಾಯಂಗೊಳಿಸಬೇಕು. ಭಂಗಿ ಕುಟುಂಬದಲ್ಲಿರುವ ನಿರುದ್ಯೋಗ ಮಹಿಳೆಯರಿಗೆ ಮತ್ತು ಯುವಕರಿಗೆ ಉದ್ಯೋಗ ನೀಡಿ, ನಮ್ಮ ಮಕ್ಕಳ ಸರ್ವತೋಮಖ ಶಿಕ್ಷಣಕ್ಕೆ ಸರ್ಕಾರ ಅನುಕೂಲ ಕಲ್ಪಿಸಿಕೊಡಬೇಕು ಎಂದು ಪುರಸಭೆ ಅಧಿಕಾರಿ ರಾಜಶೇಖರ ಅವರಿಗೆ ಮನವಿ ಸಲ್ಲಿಸಿದರು.
ವಾಣಿ ಭಂಗಿ, ಲಕ್ಷ್ಮೀ, ಮುತ್ತಪ್ಪ, ಭೀಮವ್ವ, ನಾಗವೇಣಿ, ಮಾರೆವ್ವ ಭಂಗಿ, ರೂಪಾ ಭಂಗಿ, ಪದ್ಮ ಭಂಗಿ, ರಾಜು, ನಾಗರಾಜ, ಪದ್ಮಾ ಶಿವಪುರ, ಸ್ಫೂರ್ತಿ, ಸ್ವಾತಿ, ಜಯಶ್ರೀ ಮುಂತಾದವರು ಪಾಲ್ಗೊಂಡಿದ್ದರು.