ಎಂಇಎಸ್ ಶಾಸಕರ ಸದಸ್ಯತ್ವ ರದ್ದುಗೊಳಿಸಿ
ಗಜೇಂದ್ರಗಡ: ಬೆಳಗಾವಿಯಲ್ಲಿ ಕನ್ನಡಿಗರ ಭಾವನೆ ಕೆರಳಿಸುವಂತಹ ಹೇಳಿಕೆ ನೀಡಿರುವ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಹಾಗೂ ಅರವಿಂದ ಪಾಟೀಲರ ಶಾಸಕತ್ವ ಅನರ್ಹಗೊಳಿಸಿ ರಾಜ್ಯದಿಂದ ಗಡಿಪಾರು ಮಾಡಲು ಆಗ್ರಹಿಸಿ ಕರವೇ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ವಿಶೇಷ ತಹಸೀಲ್ದಾರ್ ಮೂಲಕ ವಿಧಾನಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಕರವೇ ತಾಲೂಕು ಅಧ್ಯಕ್ಷ ಶರಣಪ್ಪ ಪೂಜಾರ ಮಾತನಾಡಿ, ಉತ್ತರ ಕರ್ನಾಟಕದ ಜನತೆಯ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಬೆಳಗಾವಿಯಲ್ಲಿ ನಡೆದಿರುವ ಅಧಿವೇಶನದಲ್ಲಿ, ಈ ಮೂರ್ಖ ಶಾಸಕ ಸಂಭಾಜಿ ಪಾಟೀಲ ತನ್ನ ವ್ಯಾಘ್ರಮುಖ ಅನಾವರಣಗೊಳಿಸಿ ಉತ್ತಮ ಬಾಂಧವ್ಯದಿಂದ ಜೀವನ ಸಾಗಿಸುತ್ತಿರುವ ಕನ್ನಡಿಗರು ಮತ್ತು ಮರಾಠಿಗರ ಮಧ್ಯೆ ಭಾಷಾ ವೈಷಮ್ಯ ಬೀಜ ಬಿತ್ತಲು ಮುಂದಾಗಿರುವುದು ಖಂಡನೀಯ. ಇಂಥ ನಾಡ ದ್ರೋಹಿಗಳನ್ನು ಕೂಡಲೇ ರಾಜ್ಯದಿಂದ ಹೊರದೂಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ವಿಶೇಷ ತಹಸೀಲ್ದಾರ್ ಸಿ.ಎಂ. ಕಲಹಾಳ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಕಳಕಪ್ಪ ಜಾಡಬಂಡಿ, ಮುತ್ತಣ್ಣ ಲಕ್ಕಲಟ್ಟಿ, ಅಲ್ಲಾಭಕ್ಷಿ ಮಚ್ಚಾಲಿ, ಬಸವರಾಜ ಅಂಗಡಿ, ಪಾಂಡುರಂಗ ಶೀಲವೇರಿ, ಬಿ.ಎ. ಅಂಗಡಿ, ಬುಡ್ಡಾ, ಸಂತೋಷ ಕಂದಗಲ್, ಮದನ ಕಲಾಲ, ಇಮಾಮ ಢಾಲಾಯತ, ರಮೇಶ ಕಲಾಲ ಮುಂತಾದವರು ಉಪಸ್ಥಿತರಿದ್ದರು.
--
ನೂತನ ತಾಲೂಕು ಭರವಸೆ ಈಡೇರಿಸಿ
ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಗಜೇಂದ್ರಗಡ ನಗರವನ್ನು ತಾಲೂಕು ಕೇಂದ್ರವನ್ನಾಗಿ 2013-14 ನೇ ಸಾಲಿನ ರಾಜ್ಯ ಮುಂಗಡ ಪತ್ರದಲ್ಲಿ ಘೋಷಣೆ ಮಾಡಿ ನೂತನ ತಾಲೂಕು ಆಡಳಿತವನ್ನು ಹಂತ ಹಂತವಾಗಿ ಜಾರಿಗೆ ತರುವುದಾಗಿ ಭರವಸೆ ನೀಡಿರುವುದನ್ನು ಸಂಸ್ಥೆಯಿಂದ ಸ್ವಾಗತಿಸುತ್ತೇವೆ. ನೂತನ ತಾಲೂಕು ರಚನೆ ಸಂದರ್ಭದಲ್ಲಿ ಜಿಲ್ಲೆಯ ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ನೂತನ ತಾಲೂಕುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ತೀವ್ರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲರಿಗೆ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ ಮತ್ತು ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.