ಮಂಗಸೂಳಿ- ಲಕ್ಷ್ಮೇಶ್ವರ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ
ಸುವರ್ಣ ವಿಧಾನಸಭೆ: ಲೋಕೋಪಯೋಗಿ ಇಲಾಖೆಯಲ್ಲಿ ಆನ್ಯುಟಿ ಪ್ಯಾಕೇಜ್ (ವರ್ಷಾಸನ) ಆಧಾರದ ಮೇಲೆ ನಿರ್ಮಿಸಿರುವ ಮಂಗಸೂಳಿ-ಲಕ್ಷ್ಮೇಶ್ವರ ರಸ್ತೆ ಕಾಮಗಾರಿಯಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರ ಆಗಿರುವುದನ್ನು ವಿಧಾನ ಮಂಡಲದ ಅಂದಾಜು ಸಮಿತಿ ಪತ್ತೆ ಹಚ್ಚಿದೆ.
ಮಾಲೀಕಯ್ಯ ಗುತ್ತೇದಾರ್ ಅಧ್ಯಕ್ಷತೆಯಲ್ಲಿ ಎಚ್.ವೈ. ಮೇಟಿ, ಶಿವಾನಂದ ಎಸ್. ಪಾಟೀಲ್, ಜೆ.ಟಿ.ಪಾಟೀಲ್, ಯಶವಂತರಾಯ ಪಾಟೀಲ್, ಶಿವಲಿಂಗೇಗೌಡ, ಕೆ.ಷಡಕ್ಷರಿ ಸೇರಿದಂತೆ 17 ಮಂದಿ ಸದಸ್ಯರನ್ನು ಹೊಂದಿರುವ ಈ ಸಮಿತಿ 2009ನೇ ಸಾಲಿನಲ್ಲಿ ಗುತ್ತಿಗೆ ನೀಡಿದ್ದ ಈ ಕಾಮಗಾರಿಯಲ್ಲಿ ಅವ್ಯವಹಾರವಾಗಿರುವುದನ್ನು ಮನಗಂಡಿದ್ದು, ಹೆಚ್ಚಿನ ತನಿಖೆ ನಡೆಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.
43 ಕಿಮೀ ಉದ್ದದ ಈ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ 113.11 ಕೋಟಿ ಕಾಮಗಾರಿಯನ್ನು ಆನ್ಯುಟಿ ಪ್ಯಾಕೇಜ್ ಅಡಿಯಲ್ಲಿ ನಡೆಸಲು ಜಿವಿಆರ್ ಹಾಗೂ ಆರ್ಎಂಎನ್ ಕನ್ಸೋರ್ಟಿಯಂ ಸಂಸ್ಥೆಗೆ ಟೆಂಡರ್ ಕರೆದು, ಕೊನೆಗೆ 266.72 ಕೋಟಿ ವೆಚ್ಚದಲ್ಲಿ 10 ವರ್ಷಗಳ ಅವಧಿಯ ಗುತ್ತಿಗೆ ನೀಡಲಾಗಿತ್ತು. ಇದಕ್ಕೆ 24 ತಿಂಗಳು ನಿರ್ಮಾಣ ಅವಧಿ ಹಾಗೂ 8 ವರ್ಷ ನಿರ್ವಹಣಾ ಅವಧಿ ನಿಗದಿ ಮಾಡಲಾಗಿತ್ತು. ಪ್ರತಿ ಆರು ತಿಂಗಳಿಗೆ 16.67 ಕೋಟಿಯನ್ನು ನಿಯಮ ಪ್ರಕಾರ ಸಂಸ್ಥೆಗೆ ಪಾವತಿಸಬೇಕಿತ್ತು. ಇದುವರೆಗೆ ಮೂರು ಕಂತುಗಳಲ್ಲಿ 49,76,11, 296ನ್ನು ಸರ್ಕಾರದ ವತಿಯಿಂದ ಪಾವತಿಸಲಾಗಿದ್ದು, ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಿದ್ದಕ್ಕಾಗಿ 22,48,46,585ನ್ನು ಬೋನಸ್ ರೂಪದಲ್ಲಿ ನೀಡಲಾಗಿದೆ. ಆದರೆ 113 ಕೋಟಿ ಯೋಜನೆಯನ್ನು ರು. 266 ಕೋಟಿಗೆ ಮಂಜೂರು ಮಾಡಿರುವ ಬಗ್ಗೆ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅದರಲ್ಲಿ ಅವ್ಯವಹಾರ ನಡೆದಿದೆ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಈ ಬಗ್ಗೆ ತನಿಖೆ ಶಿಫಾರಸು ಮಾಡಿರುವ ಜತೆಗೆ ಲೋಕೋಪಯೋಗಿ ಇಲಾಖೆಯಲ್ಲಿ ಜಾರಿಯಲ್ಲಿರುವ ಆನ್ಯುಟಿ ಪದ್ಧತಿ ರದ್ದುಗೊಳಿಸುವಂತೆ ಸಮಿತಿ ಸಲಹೆ ನೀಡಿದೆ.
ಆದ್ಯತೆ ಮೇಲೆ ಅನುದಾನ ನೀಡಿ: ಇದನ್ನು ಹೊರತುಪಡಿಸಿ ಲೋಕೋಪಯೋಗಿ ಇಲಾಖೆಗೆ ಮುಂದಿನ ವರ್ಷಗಳಲ್ಲಿ ಆದ್ಯತೆ ಆಧಾರದ ಮೇಲೆ ವಾರ್ಷಿಕ 10,000 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸಲಹೆ ನೀಡಿದೆ.
ಲೋಕೋಪಯೋಗಿ ಇಲಾಖೆ ಬಜೆಟ್ ಮ್ಯಾನುವಲ್ 50 ವರ್ಷಗಳಷ್ಟು ಹಳೆಯದಾಗಿದ್ದು, ಈ ಬಗ್ಗೆ ಸೂಕ್ತ ತಿದ್ದುಪಡಿ ಮಾಡುವಂತೆಯೂ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು, ಎಲ್ಲ ಶ್ರೇಣಿಯ ಸಿಬ್ಬಂದಿ ಭರ್ತಿಗೆ ಶಿಫಾರಸು ಮಾಡಲಾಗಿದೆ.
ರಸ್ತೆ ನಿರ್ವಹಣೆಗೆ ಹಿಂದೆ ಗ್ಯಾಂಗ್ಮನ್ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಇವರು ತಮಗೆ ನಿಗದಿಯಾದ ರಸ್ತೆಯ ನಿರ್ವಹಣೆಯನ್ನು ಮಾಡುತ್ತಿದ್ದರು. ಆದರೆ ಈಗ ಗ್ಯಾಂಗ್ಮನ್ಗಳು ಇಲ್ಲ. ಸರ್ಕಾರ ಶೀಘ್ರವಾಗಿ ಈ ಹುದ್ದೆ ಭರ್ತಿ ಮಾಡಿಕೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ದೆಹಲಿ ಕರ್ನಾಟಕ ಭವನದ ಕಾಮಗಾರಿಯಲ್ಲೂ ಲೋಪ
ಅದೇ ರೀತಿ ದೆಹಲಿ ಕರ್ನಾಟಕ ಭವನದ ಕಾಮಗಾರಿಯಲ್ಲಿ ಕೆಲವು ಲೋಪದೋಷಗಳು ಇರುವುದನ್ನು ಸಮಿತಿ ಪತ್ತೆ ಹಚ್ಚಿದೆ. ಕರ್ನಾಟಕ ಭವನದ ಮೂರು ಭವನಗಳ ಹೆಚ್ಚುವರಿ ಕಟ್ಟಡ ನಿರ್ಮಾಣ, ದುರಸ್ತಿ, ಮತ್ತಿತರ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಮೌಖಿಕ ದೂರುಗಳು ಇರುವುದರಿಂದ ಇದರ ಗುಣಮಟ್ಟದ ಬಗ್ಗೆ ವರದಿ ನೀಡವಂತೆ ಸೂಚಿಸಲಾಗಿದೆ.
ಲೋಕೋಪಯೋಗಿ ಇಲಾಖೆಯವರು ಕೈಗೊಂಡಿರುವ ಕಾಮಗಾರಿಗಳಲ್ಲಿ ಕಂಡು ಬಂದಿರುವ ಹಲವು ಲೋಪದೋಷಗಳನ್ನು ಕೂಡಲೇ ಸರಿಪಡಿಸುವ ಜತೆಗೆ ಅನುದಾನ ಮತ್ತು ವೆಚ್ಚದ ಸಂಪೂರ್ಣ ಮಾಹಿತಿಯನ್ನು ಸಮಿತಿಗೆ ಒದಗಿಸುವಂತೆ ಸೂಚಿಸಲಾಗಿದೆ.
ಕರ್ನಾಟಕ ಭವನದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊರ ಗುತ್ತಿಗೆ ಆಧಾರದ ಮೇಲೆ ಅನ್ಯ ಭಾಷಿಕರನ್ನು ನೇಮಕ ಮಾಡಿಕೊಳ್ಳುವುದು ಸರಿ ಅಲ್ಲ. ಹೀಗಾಗಿ ಇವುಗಳನ್ನು ಕಾಯಂ ಸ್ವರೂಪದ ಹುದ್ದೆಯಾಗಿ ಪರಿವರ್ತಿಸಿ ಭರ್ತಿ ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ರಾಜ್ಯದ ಎಲ್ಲ ಪ್ರಮುಖ ದಿನಪತ್ರಿಕೆಗಳಲ್ಲಿ ಕನಿಷ್ಠ ಮೂರು ಬಾರಿಯಾದರೂ ವ್ಯಾಪಕ ಪ್ರಚಾರ ನೀಡುವ ಜತೆಗೆ ಕನ್ನಡ ಬಲ್ಲವರನ್ನು ಮಾತ್ರ ನೇಮಕ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.