ಸ್ಲಂ ಜನರು ಜಾಗ್ರತರಾಗಿ: ಕೃಷ್ಣ ಪರಾಪುರ
ಗದಗ: ಗದಗ-ಬೆಟಗೇರಿ ನಗರದ ಕೊಳಚೆ ಪ್ರದೇಶಗಳು ಮೂಲ ಸೌಲಭ್ಯ ವಂಚಿತ ಪ್ರದೇಶಗಳಾಗಿದ್ದು, ಸ್ಲಂ ನಿವಾಸಿಗಳು ಸಂಘಟಿತರಾಗಿ ಯೋಜನೆಗಳ ಬಗ್ಗೆ ಅರಿತು, ಜಾಗ್ರತರಾದಾಗ ಮಾತ್ರ ಸ್ಲಂ ಪ್ರದೇಶಗಳು ಅಭಿವೃದ್ಧಿ ಕಾಣಲು ಸಾಧ್ಯ ಎಂದು ನಗರಸಭೆ ಸದಸ್ಯ ಕೃಷ್ಣ ಪರಾಪುರ ಹೇಳಿದರು.
ಅವರು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಈಚೆಗೆ ನಗರದ ಸಮಿತಿಯ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ಲಂ ಕಾಯ್ದೆ ಮಾಹಿತಿ ಹಕ್ಕು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಲಂ ಪ್ರದೇಶದ ಗುಡಿಸಲುಗಳಲ್ಲಿ ಬಡಜನರು ಯಾವುದೇ ಸೌಲಭ್ಯವಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದು, ಸರ್ಕಾರ ವಸತಿ ಯೋಜನೆ ಮತ್ತು ಮೂಲ ಸೌಲಭ್ಯ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಅಧಿಕಾರಿಗಳು ಸಮರ್ಪಕವಾಗಿ ಅವಶ್ಯವಿರುವ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ ಮಾತನಾಡಿ, ಸ್ಲಂ ಸಮಿತಿಯು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಸ್ಲಂ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಅನೇಕ ಸ್ಲಂ ಜನರ ಪರವಾದ ರಚನಾತ್ಮಕ ಕಾರ್ಯಕ್ರಮಗಳು ನಡೆಸುವ ಮೂಲಕ ಅವರ ಸಮಸ್ಯೆಗಳ ಕುರಿತು ಹೋರಾಟ ನಡೆಸುತ್ತಾ ಬಂದಿದ್ದೇವೆ. ನಿದ್ರಾವಸ್ಥೆಯಲಿರುವ ಅಧಿಕಾರಿಗಳಿಗೆ ನಮ್ಮ ಸ್ಲಂಜನರ ಹೋರಾಟಗಳ ಮೂಲಕ ಕಣ್ಣು ತೆರೆಯುವ ಕಾರ್ಯ ನಡೆಸಲಾಗಿದೆ. ಇದಕ್ಕೆ ಸ್ಲಂಜನರ ಸಹಕಾರವೇ ಕಾರಣ. ಆದ್ದರಿಂದ ಮುಂದಿನ ದಿನಮಾನಗಳಲ್ಲಿ ನಗರದಲ್ಲಿ ವಾಸಿಸುತ್ತಿರುವ ವಸತಿ ರಹಿತರ ಮತ್ತು ಸ್ಲಂ ಪ್ರದೇಶದ ನಿವಾಸಿಗಳ ಹಕ್ಕೊತ್ತಾಯಗಳಿಗಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಅನ್ಯಾಯಕ್ಕೆ ಒಳಗಾದ ಬಡಕುಟುಂಬಗಳಿಗೆ ನ್ಯಾಯ ಸಿಗುವವರಿಗೂ ಹೋರಾಟ ನಡೆಸಲಾಗುವುದು. ಸ್ಲಂಜನರು ಮುಂದಿನ ಹೋರಾಟಗಳಿಗೆ ಸಜ್ಜಾಗಬೇಕೆಂದು ಕರೆ ನೀಡಿದರು.
ಸ್ಲಂ ಸಮಿತಿ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಮಾನ್ವಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಸ್ಲಂ ಸಮಿತಿಯ ಅಧ್ಯಕ್ಷ ಅಶೋಕ ಮ್ಯಾಗೇರಿ ಮಾತನಾಡಿದರು. ಸ್ಲಂ ಮಹಿಳಾ ಸಮಿತಿ ಅಧ್ಯಕ್ಷ ಉಮಾದೇವಿ ಕಾತರಕಿ, ಕಾರ್ಯದರ್ಶಿ ತಿಪ್ಪವ್ವ ಮುಟಗಾರ, ಅಶೋಕ ಕುಸಬಿ, ಯಲ್ಲಪ್ಪ ರಾಮಗಿರಿ, ಸಹಜಾನಬಿ ಕರ್ನಾಚಿ, ಆರತಿ, ಅಮೀನಸಾಬ್ ಕಳಸಾಪುರ, ಮಮ್ತಾಜಬೇಗಂ ಮಕಾಂದಾರ, ಇಬ್ರಾಹಿಂ ಮುಲ್ಲಾ, ರಸೂಲಸಾಬ್ ಮುಳಗುಂದ, ಸಲೀಂ ಬಳ್ಳಾರಿ, ಅಬುಬಕ್ಕರ್ ಮಕಾಂದಾರ, ಮೆಹರುನ್ನಿಸ್ಸಾ ಢಾಲಾಯತ, ಮಲೇಶಪ್ಪ ಕಲಾಲ, ಗೌರಮ್ಮ ಶಿರಗುಪ್ಪಿ, ನಜಮುನ್ನಿಸಾ ಮುರಗೋಡ, ವಿಶಾಲಕ್ಷ್ಮಿ ಹಿರೇಗೌಡ್ರ, ಫಾತೀಮಾ ರೋಣದ, ರಾಧಾ ಬೋಡಗಲ್ಲ, ಪರವೀನ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು. ಯುವ ಸಮಿತಿ ಅಧ್ಯಕ್ಷ ಶರೀಫ ಬಿಳೆಯಲಿ ನಿರೂಪಿಸಿದರು. ಯುವ ಸಮಿತಿ ಮುಖಂಡ ಅನಿಲ ಕಾಳೆ ವಂದಿಸಿದರು.
--