ಗ್ರಾಪಂ ವಂಚನೆ: ಮಾಜಿ ಸೈನಿಕರಿಗಿಲ್ಲ ನಿವೇಶನ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಗದಗ, ಅ. 1
ದೇಶಕ್ಕಾಗಿ ತಮ್ಮ ಅಮೂಲ್ಯ ಜೀವನ ಪಣಕ್ಕಿಟ್ಟು ದೇಶ ಕಾಯುವ ಸೈನಿಕರು ನಿವೃತ್ತರಾಗಿ ಮನೆಗೆ ಬಂದಾಗ ಅವರಿಗೆ ವಿವಿಧ ರೀತಿಯ ಸೌಲಭ್ಯ ನೀಡುವುದು ನಮ್ಮ ಆದ್ಯ ಕರ್ತವ್ಯ, ಆದರೆ, ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ 53ಕ್ಕೂ ಹೆಚ್ಚು ಸೈನಿಕರಿದ್ದಾರೆ. ಅದರಲ್ಲಿಯೂ 2002 ಜುಲೈ 26ರಂದು ಕಾರ್ಗಿಲ್ನಲ್ಲಿ ನಡೆದ ಯುದ್ಧದಲ್ಲಿ ಪಾಲ್ಗೊಂಡಿದ್ದರು, ಅಂತಹ ಸೈನಿಕರಿಗೆ ಕಾರ್ಗಿಲ್ ವಿಜಯದ ಸಂಕೇತವಾಗಿ ಜಮೀನು ನೀಡುವ ಘೋಷಣೆ ಮಾಡಿದ್ದ ಲಕ್ಕುಂಡಿ ಗ್ರಾಮ ಪಂಚಾಯಿತಿ ಆಡಳಿತ ವರ್ಗ ಏಳು ವರ್ಷವಾದರೂ ಸೈನಿಕರಿಗೆ ಜಮೀನು ನೀಡದೇ ಮಾತಿಗೆ ತಪ್ಪಿ, ಸೈನಿಕರನ್ನು ಕಡೆಗಣಿಸಿದೆ.
ಠರಾವು: ಐತಿಹಾಸಿಕವಾಗಿ ದೇಶದಲ್ಲಿಯೇ ದೊಡ್ಡ ಸ್ಥಾನ ಹೊಂದಿರುವ ಲಕ್ಕುಂಡಿ ಗ್ರಾಮ ದೇಶ ಸೇವೆಯಲ್ಲಿಯೂ ವಿಶೇಷ ಕೊಡುಗೆ ನೀಡಿದೆ. ಲಕ್ಕುಂಡಿ ಗ್ರಾಮದಿಂದಲೇ 53ಕ್ಕೂ ಹೆಚ್ಚು ಯುವಕರು ದೇಶ ಸೇವೆಯಲ್ಲಿ ಕಾರ್ಯನಿರತರಾಗಿದ್ದಾರೆ. ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಆಡಳಿತ ವರ್ಗ 2002 ಕಾರ್ಗಿಲ್ ಯುದ್ಧ ವಿಜಯದ ಸಂಕೇತವಾಗಿ ಗ್ರಾಮದ ಸೈನಿಕರೆಲ್ಲರಿಗೂ ಒಂದೇ ಕಡೆ ಮನೆ ನಿರ್ಮಿಸಿ ಕೊಡುವ ಉದ್ದೇಶದಿಂದ 2004ರಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಠರಾವು ಪಾಸು ಮಾಡಿತು.
ಸೈಟ್ ಪಡೆಯುವ ಭಾಗ್ಯವಿಲ್ಲ: ಗ್ರಾಮದ ಹೊರವಲಯದಲ್ಲಿ ಆಶ್ರಯ ಮನೆ ನಿರ್ಮಾಣಕ್ಕೆಂದು ಖರೀದಿಸಿದ್ದ ಏಳು ಎಕರೆ ಜಮೀನಿನಲ್ಲಿ ಎರಡು ಎಕರೆ ಜಮೀನನ್ನು ಸೈನಿಕರ ವಸತಿಗೃಹ ನಿರ್ಮಾಣಕ್ಕೆಂದು ಮೀಸಲಿಡಲಾಯಿತು. ಈ ಎರಡು ಎಕರೆ ಜಮೀನಿನಲ್ಲಿ ಅಭಿಯಂತರರಿಂದ ಸೈಟ್ನ ಅಳತೆ ಮಾಡಿಸಿ ಮೂಲಸೌಲಭ್ಯ ಸೇರಿದಂತೆ 44 ಸೈನಿಕರಿಗೆ ನಿವೇಶನ ಗುರುತಿಸಿ ನಕ್ಷೆ ತಯಾರಿಸಲಾಯಿತು. ಇದಾಗಿ ಏಳು ವರ್ಷ ಗತಿಸುತ್ತಾ ಬಂದರೂ ಸೈನಿಕರಿಗೆ ಸೈಟ್ ಪಡೆಯುವ ಭಾಗ್ಯ ಒದಗಿ ಬಂದಿಲ್ಲ.
2007-08ರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಕೆ.ಎಸ್. ಪೂಜಾರ ಸೈನಿಕರ ಬಗ್ಗೆ ವಿಶೇಷ ಕಾಳಜಿ ವಹಿಸಿ 2004ರಲ್ಲಿ ನೀಡಲಾಗಿದ್ದ ಜಮೀನಿನಲ್ಲಿ ಗುರುತಿಸಲಾಗಿದ್ದ 44 ಸೈಟ್ಗಳನ್ನು ಸೈನಿಕರ ಹೆಸರಲ್ಲಿ ನೀಡಲು ಠರಾವು ಬರೆಸಿದ್ದರು. ನಂತರ ಬದಲಾದ ಅಧ್ಯಕ್ಷರಿಂದ ಅಷ್ಟೇನೂ ಸೈನಿಕರ ಕಡೆ ಗಮನ ಹರಿಸಿದ ಕಾರಣ ಮನೆ ನಿರ್ಮಾಣದ ಕನಸು ನೆನೆಗುದಿಗೆ ಬಿದ್ದಿದೆ ಎಂಬುದು ಸೈನಿಕರ ಅಳಲು.
ಠರಾವು ಯಾವಾಗ: 4-9-2004ರಂದು ಲಕ್ಕುಂಡಿ ಗ್ರಾಮ ಪಂಚಾಯಿತಿಯ 3ನೇ ಸಾಮಾನ್ಯ ಸಭೆಯಲ್ಲಿ ಹಾಜರಿದ್ದ 23 ಸದಸ್ಯರು ಸೈನಿಕರಿಗೆ ನಿವೇಶನ ನೀಡಲು ಸರ್ವಾನುಮತದ ಒಪ್ಪಿಗೆ ನೀಡಿ ಠರಾವು ಅಂಗೀಕರಿಸಿದರು. 4-7-2007ರಂದು ಮತ್ತೊಮ್ಮೆ ಗ್ರಾಪಂ ಸದಸ್ಯರೆಲ್ಲರೂ ಸಾಮಾನ್ಯ ಸಭೆಯಲ್ಲಿ ಸೈನಿಕರಿಗೆ 30್ಢ40 ಸೈಟ್ಗಳನ್ನು ನೀಡಲು ತೀರ್ಮಾನಿಸಿದರು. 44 ಫಲಾನುಭವಿ ಸೈನಿಕರನ್ನು ಸಹ ಗುರುತಿಸಿ ಮತ್ತೊಮ್ಮೆ ಠರಾವು ಪಾಸು ಮಾಡಿದರು. ಠರಾವು ಪತ್ರಿಯನ್ನು 22-5-2007ರಂದು ಗ್ರಾಮ ಪಂಚಾಯಿತಿಯು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ರವಾನಿಸಿತು. ಕಾರ್ಯನಿರ್ವಾಹಕ ಅಧಿಕಾರಿ ಪ್ರತಿ ಉತ್ತರವಾಗಿ ಪ್ರಸ್ತಾವನೆಯನ್ನು ರಾಜೀವ್ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸೂಚಿಸಿ ಸುಮ್ಮನಾದರು.
ವಿಶೇಷತೆ: ಇಲ್ಲಿಯ ಸೈನಿಕರು ಸಾಮಾನ್ಯರೇನಲ್ಲ. ಬರೀ ದೇಶ ಕಾಯುವ ಕಾರ್ಯಕ್ಕೆ ಮಾತ್ರ ಸೀಮಿತರಾಗದೇ ಶಾಂತಿ ಸೇನಾ ಪಡೆಯಲ್ಲಿಯೂ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಇದು ಭಾರತದಲ್ಲಿ ಮಾತ್ರವಲ್ಲದೇ ಯುನೈಟೆಡ್ ನೇಷನ್ ಆರ್ಗನೈಜೇಶನ್ನಿಂದ ದಕ್ಷಿಣ ಆಫ್ರಿಕಾದ ಕಾಂಗೋ ಮತ್ತು ಇಸ್ರೇಲ್ ದೇಶಗಳಲ್ಲಿ ರವಿರಾಜ ಹೊಸಮನಿ, ಮಂಜುನಾಥ ಮುಸ್ಕಿನಭಾವಿ, ಹುಚ್ಚಿರಪ್ಪ ಕುಂಬಾರ, ಶರಣಯ್ಯ ಗಂಧದ ಸೇವೆ ಸಲ್ಲಿಸಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಪರಸಪ್ಪ ಗುಂಡಳ್ಳಿ ಸೇರಿ ಹತ್ತಕ್ಕೂ ಹೆಚ್ಚು ಜನ ಪಾಲ್ಗೊಂಡ ವಿಶೇಷತೆ ಹೊಂದಿದ್ದಾರೆ.
ಇಂದು ಸತ್ಯಾಗ್ರಹ
ನಮಗೆ ನಿವೇಶನ ನೀಡುವ ನಿಟ್ಟಿನಲ್ಲಿ ಅನಗತ್ಯ ವಿಳಂಬವಾಗುತ್ತಿದ್ದು, ಈ ಕುರಿತು ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅದನ್ನು ಖಂಡಿಸಿ, ಅಕ್ಟೋಬರ್ 2ರಂದು ಮಹಾತ್ಮಾ ಗಾಂಧೀಜಿ ಅವರ ಜಯಂತ್ಯುತ್ಸವ ದಿನದಂದು ಸೈನಿಕರು ನಿವೇಶನಕ್ಕಾಗಿ ಸತ್ಯಾಗ್ರಹ ಪ್ರಾರಂಭಿಸಲು ನಿರ್ಧರಿಸಲಾಗಿದೆ.
- ಪರಸಪ್ಪ ಗುಂಡಳ್ಳಿ, ದತ್ತಣ್ಣ ಜೋಶಿ,
ಮಾಜಿ, ಹಾಲಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ, ಕಾರ್ಯದರ್ಶಿ