ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗದಗ ಸಂಗೀತ ಕ್ಷೇತ್ರದ ಕೈಲಾಸ

Vishwanath S
Updated On : 3 Oct 2013, 11:19 am

ಕನ್ನಡಪ್ರಭ ವಾರ್ತೆ, ಗದಗ, ಅ. 2
ಗದಗ ಜಿಲ್ಲೆ ಸಂಗೀತ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಪಂಚಾಕ್ಷರಿ ಗವಾಯಿಗಳು, ಡಾ. ಪುಟ್ಟರಾಜ ಶ್ರೀಗಳು, ಭೀಮಸೇನ ಜೋಶಿ ಸೇರಿದಂತೆ ಹಲವು ಸಂಗೀತ ವಿದ್ವಾಂಸರನ್ನು ಈ ನಾಡಿಗೆ ಕೊಡುಗೆಯಾಗಿ ನೀಡುವ ಮೂಲಕ ಜಿಲ್ಲೆ ಸಂಗೀತ ಕ್ಷೇತ್ರದ ಕೈಲಾಸವಾಗಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.
ಅವರು ನಗರದ ಕೆ.ಎಚ್. ಪಾಟೀಲ್ ಸಭಾಭವನದಲ್ಲಿ ಬುಧವಾರ ಕರ್ನಾಟಕ ಗಾನಕಲಾ ಪರಿಷತ್, ರಾಮಕೃಷ್ಣ ವಿವೇಕಾನಂದಾಶ್ರಮ, ಕೆ.ಎಚ್. ಪಾಟೀಲ್ ಪ್ರತಿಷ್ಠಾನದ ಆಶ್ರಯದಲ್ಲಿ 44ನೇ ಹಿರಿಯ ಸಂಗೀತ ಹಾಗೂ 26ನೇ ಯುವ ಸಂಗೀತ ವಿದ್ವಾಂಸರ ರಾಜ್ಯಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.   ಸರ್ವ ಧರ್ಮ ಸಹಿಷ್ಣುತೆಗೆ ಹೆಸರಾದ ಅವಳಿ ನಗರದಲ್ಲಿ ಜರುಗಿದ ಸಂಗೀತ ವಿದ್ವಾಂಸರ ಸಮ್ಮೇಳನ ಜಾತಿ, ಮತ, ಭಾಷಾ ಪರಿಧಿಯನ್ನು ಮೀರಿ ಸೌಹಾರ್ದ ಗಟ್ಟಿಗೊಳಿಸಿದೆ. ಸಂಗೀತ ಕ್ಷೇತ್ರಕ್ಕೆ ಪ್ರಾಶಸ್ತ್ಯ ದೊರಕಿಸುವಲ್ಲಿ ಗಾನಕಲಾ ಪರಿಷತ್ ಸೇರಿದಂತೆ ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಸಂಗೀತ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು ಸಂಗೀತ ಕ್ಷೇತ್ರಕ್ಕೆ ಮಾರಕವಾಗಿದೆ. ಸಂಗೀತ ಕಲಾವಿದರನ್ನು ಶಿಕ್ಷಕ ಹುದ್ದೆಗೆ ನೇಮಕ ಮಾಡಿಕೊಳ್ಳಲು ಬೇಕಾದ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಆಗ್ರಹಿಸಬೇಕಿದೆ ಎಂದರು.
ಬಿರುದು, ಸನ್ಮಾನ: ಕಾರ್ಯಕ್ರಮದಲ್ಲಿ 44ನೇ ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನಾಧ್ಯಕ್ಷೆ ಡಾ. ಎಚ್.ಎಸ್. ಅನಸೂಯಾ ಕುಲಕರ್ಣಿ ಅವರಿಗೆ ಗಾನಕಲಾಭೂಷಣ ಹಾಗೂ 26ನೇ ಯುವ ಸಂಗೀತ ವಿದ್ವಾಂಸರ ಸಮ್ಮೇಳನಾಧ್ಯಕ್ಷ ಎಲ್.ವಿ. ಮುಕುಂದ ಅವರಿಗೆ ಗಾನಕಲಾಶ್ರೀ ಬಿರುದು ಪ್ರದಾನ ಮಾಡಿ ಗೌರವಿಸಲಾಯಿತು. ಡಾ. ಜೆ.ಎ. ಕುಮಾರಸ್ವಾಮಿ, ಕೆ.ಪಿ. ಉಪಾದ್ಯಾಯ, ಎನ್. ಅನಂತಪದ್ಮನಾಭರಾವ್, ಎಚ್.ಎಸ್. ಕೃಷ್ಣಮೂರ್ತಿ, ಅರವಿಂದ ಹುಯಿಲಗೋಳ, ಪಂ. ರಘುನಾಥ ನಾಕೋಡ, ಗೋದೋಬಾಯಿ ಜೋಶಿ, ಶೋಭಾ ಹುಯಿಲಗೋಳ, ಪಾರ್ವತಿದೇವಿ ಮಾಳೆಕೊಪ್ಪಮಠ, ಕಿರಣ ಹಾನಗಲ್, ನಾರಾಯಣ ಹಿರೇಕೊಳಚಿ, ಸುಕೃಸಾಬ್ ಮುಲ್ಲ, ಸಣ್ಣಮಲಕಪ್ಪ ಭಜಂತ್ರಿ, ಯಲ್ಲಪ್ಪ ಮೂಲಿಮನಿ, ಶಕ್ತಿ ಪಾಟೀಲ, ಕವಿ ಕುಮಾರವ್ಯಾಸ ಪೀಳಿಗೆಯ ವೆಂಕಟೇಶ ಗುರುನಾಥ ಪಾಟೀಲ ಮುಂತಾದವರನ್ನು ಸನ್ಮಾನಿಸಲಾಯಿತು.  ಸಾನ್ನಿಧ್ಯವನ್ನು ರಾಮಕೃಷ್ಣ ವಿವೇಕಾನಂದಾಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀ, ತುಮಕೂರು ವಿವೇಕಾನಂದಾಶ್ರಮದ ವೀರೇಶಾನಂದ ಸರಸ್ವತಿ ಶ್ರೀ ವಹಿಸಿದ್ದರು. ಅಧ್ಯಕ್ಷತೆಯನ್ನು ಗಾನಕಲಾ ಪರಿಷತ್ ಅಧ್ಯಕ್ಷ ಆರ್.ಕೆ. ಪದ್ಮನಾಭ ವಹಿಸಿದ್ದರು. ರಾಜ್ಯ ಮಾಹಿತಿ ಹಕ್ಕು ಆಯುಕ್ತ ಡಾ. ಶೇಖರ ಸಜ್ಜನರ ಉಪಸ್ಥಿತರಿದ್ದರು. ಮಾಜಿ ಶಾಸಕ ಡಿ.ಆರ್.ಪಾಟೀಲ ಸ್ವಾಗತಿಸಿದರು. ಚಂದ್ರಶೇಖರ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಬೆಳಗ್ಗೆ ನಗರದ ವೀರೇಶ್ವರ ಪುಣ್ಯಾಶ್ರಮದಿಂದ ಕೆ.ಎಚ್. ಪಾಟೀಲ್ ಸಭಾಭವನದ ವರೆಗೆ ನಗರ ಸಂಕೀರ್ತನೆ ಕಾರ್ಯಕ್ರಮ ಜರುಗಿತು. ಅನಂತರ ಜರುಗಿದ ತ್ಯಾಗರಾಜ ಸ್ವಾಮಿಗಳ ಪಂಚರತ್ನ ಕೃತಿಗಳ ಗೋಷ್ಠಿ ಗಾಯನದಲ್ಲಿ ಸುಮಾರು 100ಕ್ಕೂ ಅಧಿಕ ಸಂಗೀತ ಕಲಾವಿದರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement