ನೆರೆ ಅಧ್ಯಯನ ತಂಡಕ್ಕೆ ಗದಗ ಜಿಲ್ಲೆ ಕಾಣಲಿಲ್ಲವೇ?
ಗದಗ: ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ (ಸೆಪ್ಟೆಂಬರ್) ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿ ಬೆಳೆ, ಆಸ್ತಿ, ರಸ್ತೆ ಸೇರಿದಂತೆ ರು. 25 ಕೋಟಿಗೂ ಹೆಚ್ಚಿನ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿತ್ತು. ಇಷ್ಟೊಂದು ಪ್ರಮಾಣದ ಹಾನಿ ಸಂಭವಿಸಿದರೂ ಈಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ನೆರೆ ಅಧ್ಯಯನ ತಂಡ ಮಾತ್ರ ಗದಗ ಜಿಲ್ಲೆಗೆ ಅದೇಕೆ ಭೇಟಿ ನೀಡಲಿಲ್ಲ ಎನ್ನುವುದು ಜಿಲ್ಲೆಯ ಸಕಲರನ್ನೂ ಗಂಭೀರವಾಗಿ ಕಾಡುತ್ತಿದೆ.
ಕೇಂದ್ರ ಅಧ್ಯಯನ ತಂಡ ಬರುವ ಪೂರ್ವದಲ್ಲಿಯೇ ಸೆ. 18ರಂದು ಜಿಲ್ಲಾಡಳಿತ ಭವನದಲ್ಲಿ ವಿಶೇಷ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಆಸ್ತಿ ಹಾಗೂ ಜೀವ ಹಾನಿಯ ಕುರಿತು ಮಾಹಿತಿ ಪಡೆದು, ಸದ್ಯದಲ್ಲಿಯೇ ಕೇಂದ್ರ ನೆರೆ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಲಿದೆ. ಅದರ ಪೂರ್ವದಲ್ಲಿಯೇ ಸರ್ಕಾರಕ್ಕೆ ನಿಖರ ಅಂಕಿ ಅಂಶಗಳು ಅವಶ್ಯಕ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.
ವಾಡಿಕೆಗಿಂತ ಹೆಚ್ಚಿನ ಮಳೆ: ಜಿಲ್ಲೆಯ ಅಂಕಿ ಸಂಖ್ಯಾ ವಿಭಾಗದ ಮಾಹಿತಿ ಆಧಾರದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 147.8 ಮಿ.ಮೀ (ವಾಡಿಕೆ 137.4 ಮಿ.ಮೀ.) ಮಳೆಯಾಗಿದೆ. ರೈತರ ಬೆಳೆ ಹಾನಿ ಹಾಗೂ ಸಾರ್ವಜನಿಕರ ಆಸ್ತಿ ಪಾಸ್ತಿ ಹಾನಿಗೆ ಕಾರಣವಾಗಿದೆ. ಇದರೊಟ್ಟಿಗೆ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳು ಸೇರಿದಂತೆ ಒಟ್ಟು 2 ಲಕ್ಷ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಒಟ್ಟು ಬಿತ್ತನೆಯ ಶೇ. 8ರಷ್ಟು ಬೆಳೆ ಹಾನಿಯಾಗಿದೆ.
ಹಾನಿಯ ಅಂದಾಜು: ಸೆ. 18ರಂದು ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲೆಯಲ್ಲಿ 8 ಕೋಟಿಯಷ್ಟು ಸಾರ್ವಜನಿಕ ಆಸ್ತಿ ಹಾನಿ, 12 ಕೋಟಿಯಷ್ಟು ಬೆಳೆ ಹಾನಿ ಹಾಗೂ 5 ಕೋಟಿಯಷ್ಟು ರಸ್ತೆ ಹಾಗೂ ಸೇತುವೆ ಸೇರಿದಂತೆ ಒಟ್ಟು 25 ಕೋಟಿಗೂ ಹೆಚ್ಚಿನ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಈ ಹಾನಿಯ ಅಂದಾಜು ಪ್ರತಿಯನ್ನೇ ಸರ್ಕಾರಕ್ಕೆ ರವಾನಿಸಲಾಗಿದೆ. ಆದರೆ, ಸೆ. 25ರಿಂದ ರಾಜ್ಯಕ್ಕೆ ಭೇಟಿ ನೀಡಿದ್ದ ಹಿರಿಯ ಅಧಿಕಾರಿ ಶ್ರೀವಾಸ್ತವ ನೇತೃತ್ವದ ತಂಡ ಮಾತ್ರ ಗದಗ ಜಿಲ್ಲೆಗೆ ಭೇಟಿ ನೀಡಲಿಲ್ಲ.
ಜಿಲ್ಲಾಡಳಿತವೇ ಗದಗ ಜಿಲ್ಲೆಯಲ್ಲಿ ಆಗಿರುವ ಹಾನಿ ಹಾಗೂ ಜೀವ ಹಾನಿಯ ಬಗ್ಗೆ ನಿಖರವಾದ ವರದಿಯನ್ನು ನೀಡಿದರೂ ಕೇಂದ್ರ ನೆರೆ ಅಧ್ಯಯನ ತಂಡಕ್ಕೆ ಇದು ಹಾನಿ ಅನ್ನಿಸಿಲ್ಲವೋ ಅಥವಾ ಸರ್ಕಾರದ ಮೇಲೆ ಒತ್ತಡ ತರುವಲ್ಲಿ ಅಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೋ ತಿಳಿಯದಾಗಿದೆ.
-ಶಿವಕುಮಾರ ಕುಷ್ಟಗಿ