ಮೌಲ್ಯಯುತ ಶಿಕ್ಷಣ ಅಗತ್ಯ
ಕನ್ನಡಪ್ರಭ ವಾರ್ತೆ, ರೋಣ, ಅ. 2
ಶಿಕ್ಷಣ ರಂಗದಲ್ಲಿ ನೈತಿಕತೆ ಕಡಿಮೆಯಾಗುತ್ತಿದ್ದು, ಶಿಕ್ಷಕರು ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ನಿವೃತ್ತ ಪ್ರಾಚಾರ್ಯ ಎ.ಎಫ್. ಹಿರೇಮಠ ಹೇಳಿದರು.
ಮಂಗಳವಾರ ಪಟ್ಟಣದ ರಾಜೀವ್‌ಗಾಂಧಿ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ(ಬಿಇಡಿ)ದಲ್ಲಿ ಜರುಗಿದ ಪ್ರಸಕ್ತ ಸಾಲಿನ ಪ್ರಶಿಕ್ಷಣಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭದಲ್ಲಿ ಮಾತನಾಡಿದರು.
ಔದ್ಯೋಗಿಕ, ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮುಂತಾದ ಕ್ಷೇತ್ರಗಳ ಪ್ರಗತಿಗೆ ಶಿಕ್ಷಣ ಅತ್ಯಂತ ಮುಖ್ಯವಾಗಿದೆ. ಶಿಕ್ಷಣ ಮನುಷ್ಯನನ್ನು ಆದರ್ಶಮಯ ವ್ಯಕ್ತಿಯನ್ನಾಗಿ ನಿರ್ಮಿಸುತ್ತದೆ. ಹೀಗಾಗಿ, ದೇಶದ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.
ನಿವೃತ್ತ ಪ್ರಾಚಾರ್ಯ ಎಸ್.ವಿ. ಪತ್ರಿಮಠ ಪಾರಿತೋಷಕ ವಿತರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮಿಥುನ್ ಪಾಟೀಲ ಹಾಗೂ ಆಡಳಿತಾಧಿಕಾರಿ ಬಿ.ಎಫ್. ಚೇಗರಡ್ಡಿ ಮಾತನಾಡಿದರು.
2011-12ನೇ ಸಾಲಿನ ಬಿಇಡಿ ಯಲ್ಲಿ ಕಾಲೇಜ್‌ಗೆ ಪ್ರಥಮ ಸ್ಥಾನ ಪಡೆದ ಸುಜಾತಾ ಹಟ್ಟಿಯನ್ನು ಸನ್ಮಾನಿಸಲಾಯಿತು. ಎಸ್.ಆರ್. ಐಹೊಳೆ ವಾರ್ಷಿಕ ವರದಿ ವಾಚನ ಮಾಡಿದರು. ಡಾ. ಎಲ್.ಆರ್. ರಡ್ಡೇರ, ಆರ್.ಬಿ. ಗಿರಡ್ಡಿ, ಎಸ್.ಎನ್. ಶಿವರಡ್ಡಿ, ಎಚ್.ಆರ್. ದೊಡ್ಡಮನಿ, ಎಸ್.ಎಸ್. ಗೋದಿ, ಎಸ್.ಎಸ್. ಗೌಡರ, ಜಿ.ವಿ. ವೀರಾಪುರ, ಸಿದ್ದಪ್ಪ.ಪಿ, ಜಿ.ಎನ್. ನಾಯಕ, ಎಸ್.ಎನ್. ಹಟ್ಟಿ, ಸುಧಾ ಅಂಗಡಿ, ಚನ್ನಮ್ಮ ಚವಡಿ ಉಪಸ್ಥಿತರಿದ್ದರು. ಮಹಾತೆಂಶ ಭೋವಿ ನಿರೂಪಿಸಿದರು. ಮಹೇಶ ಅಚ್ಚಿನಗೌಡ್ರ ವಂದಿಸಿದರು.