2 ತಿಂಗಳಲ್ಲಿ ಹೊಸ ಗಾಂಧಿ ಮೂರ್ತಿ ಪ್ರತಿಷ್ಠಾಪಿಸಿ
ಮುಂಡರಗಿ: ಪಟ್ಟಣದ ಪುರಸಭೆ ಆವರಣದಲ್ಲಿ ಹಲವು ವರ್ಷಗಳ ಹಿಂದಿನ ಗಾಂಧಿ ಮೂರ್ತಿಯಿದ್ದು, ಅದು ತನ್ನ ಸುಂದರ ರೂಪವನ್ನು ಕಳೆದುಕೊಂಡಿದೆ. ಆದ್ದರಿಂದ ಅದನ್ನು ಇನ್ನೆರಡು ತಿಂಗಳಿನಲ್ಲಿ ಬದಲಾವಣೆ ಮಾಡಬೇಕೆಂದು ತಾಲೂಕು ಕನ್ನಡಕ್ರಾಂತಿ ಸೇನೆ ಅಧ್ಯಕ್ಷ ಮಂಜುನಾಥ ಮುಧೋಳ ಹೇಳಿದರು.
ಅವರು ಗಾಂಧಿಜಯಂತಿಯ ಅಂಗವಾಗಿ ಬುಧವಾರ ಸ್ಥಳೀಯ ಪುರಸಭೆ ಆವರಣದಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ಹೂಮಾಲೆ ಹಾಕಿ ಮಾತನಾಡಿದರು.
ಈ ಸಂದರ್ಭ ಕನ್ನಡಕ್ರಾಂತಿ ಸೇನೆಯ ಮುಖಂಡ ಮಂಜುನಾಥ ಇಟಗಿ, ಕನ್ನಡ ಜನಾಭಿವೃದ್ದಿ ವೇದಿಕೆ ಅಧ್ಯಕ್ಷ ದೇವಪ್ಪ ಇಟಗಿ, ಕೃಷ್ಣ ರಾಮೇನಹಳ್ಳಿ, ರಾಮು ಡೊಣ್ಣಿ, ವೀರೇಶ ಹಡಗಲಿ, ಮಾರುತಿ ಅಳವಂಡಿ, ಸುರೇಶ ಕೆಂಚೂಡಿ, ನಾಗರಾಜ ಕೋಳಿ, ನೀಲಪ್ಪ ಡೊಣ್ಣಿ, ಮುಂಜುನಾಥ ಕುಂಬಾರ, ವಿಶ್ವನಾಥ ಕುಂಬಾರ, ಜಗದೀಶ ಇದ್ದರು.
ಗಾಂಧೀಜಿ ಚಿಂತನೆ ಸಾರ್ವಕಾಲಿಕ
ರೋಣ: ಪರಕೀಯರ ಕಪಿಮುಷ್ಟಿಯಿಂದ ಭಾರತವನ್ನು ಬಂಧ ಮುಕ್ತಮುಕ್ತಗೊಳಿಸಲು ಅಹಿಂಸಾ ಮಾರ್ಗ ಅನುಸರಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳು ಮತ್ತು ಚಿಂತನೆಗಳ ಸಾರ್ವಕಾಲಿಕವಾಗಿವೆ ಎಂದು ಕಾಂಗ್ರೆಸ್ ಯುವ ಮುಖಂಡ ಮಿಥುನ್ ಪಾಟೀಲ ಹೇಳಿದರು.
ಅವರು ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಬುಧವಾರ ಮಹಾತ್ಮಾ ಗಾಂಧೀಜಿಯವರ 145ನೇ ಜಯಂತಿ ಆಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಪುರಸಭೆ ಸದಸ್ಯ ಮಂಜುನಾಥ ಹಾಳಕೇರಿ, ಖಾದರ್ಸಾಭ ಸಂಕನೂರ, ಶಿವಪ್ಪ ಕರಿಲಿಂಗಣ್ಣವ, ಶರಣಪ್ಪ ದೊಡ್ಡಮನಿ, ಕಾಂಗ್ರೆಸ್ ಮುಖಂಡ ವಿ.ಬಿ. ಸೋಮನಕಟ್ಟಿ, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಂಗು ನವಲಗುಂದ, ಶಿವು ಹುಲ್ಲೂರ, ಸುರೇಶ ಜಗ್ಗಲ, ಅಜೀಜ ಯಲಿಗಾರ, ಬಸವರಾಜ ಕೊಳ್ಳಿ, ಅಶೋಕ ಗಡಗಿ, ಮುತ್ತಣ್ಣ ಬಡಿಗೇರ, ಬಸವರಾಜ ನವಲಗುಂದ ಇದ್ದರು.
6ರಂದು ಮಾಸಿಕ ಸಭೆ
ಗದಗ: ಅ. 6ರಂದು ಸಂಜೆ 7ಕ್ಕೆ ಬೆಟಗೇರಿ ಘಟಕದ ಪಂಚಮಸಾಲಿ ಸಮಾಜದ ಸಭೆಯನ್ನು ಬೆಟಗೇರಿಯ ತೆಗ್ಗಿನಪೇಟಿ ಓಣಿಯ ನಾಡಕಚೇರಿ ಹಿಂದಿರುವ ಕಲ್ಮೇಶ್ವರ ದೇವಸ್ಥಾನದ ಹತ್ತಿರ ಕರೆಯಲಾಗಿದೆ. ಸಭೆಯಲ್ಲಿ ಲಿಂಗಧಾರಣಾ ಸಮಾರಂಭದ ಖರ್ಚು ವೆಚ್ಚ, ಅ. 23ರಂದು ಚನ್ನಮ್ಮಳ ವಿಜಯೋತ್ಸವ ಆಚರಣೆ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಗುವುದು. ಕಾರಣ ಬೆಟಗೇರಿಯ ಪಂಚಮಸಾಲಿ ಬಾಂಧವರು ಸಭೆಗೆ ಆಗಮಿಸಿ ಸಲಹೆ, ಸೂಚನೆಗಳನ್ನು ನೀಡುವಂತೆ ಕಾರ್ಯದರ್ಶಿ ಮಹೇಶ ಕರಬಿಷ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರಿಯರನ್ನು ಗೌರವದಿಂದ ಕಾಣಿ
ಗದಗ: ಹಿರಿಯ ನಾಗರಿಕರನ್ನು ನಾವು ಗೌರವದಿಂದ ಕಾಣಬೇಕು ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ ಹೇಳಿದರು. ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಂದು ಜೀವಿಗೂ ಮುಪ್ಪಾವಸ್ಥೆ ಬಂದೇ ಬರುತ್ತದೆ. ಸನಾತನ ಧರ್ಮದ ತಳಹದಿಯಲ್ಲಿ ಹಿರಿಯರಿಗೆ ಗೌರವ ಕೊಡುವುದು ಇದೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುವವರು ತಂದೆ-ತಾಯಿ ಹಿರಿಯರನ್ನು ನೋಡಿಕೊಳ್ಳಲಾಗುತ್ತಿಲ್ಲ. ಸಮಾಜದಲ್ಲಿ ಹಿರಿಯ ಬಗ್ಗೆ ಅಸಡ್ಡೆ ಮನೋಭಾವ ಇರಬಾರದು. ಹಿರಿಯ ನಾಗರಿಕರನ್ನು ಜೋಪಾನವಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಸರ್ಕಾರವು ಅನೇಕ ಅವಕಾಶಗಳನ್ನು ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಮಾಡುತ್ತಿದೆ ಎಂದರು. ಡಿ.ಬಿ. ಬಡಿಗೇರ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷ ಹನುಮಪ್ಪ ಇಂಗಳಹಳ್ಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಚ್.ಎಸ್. ಪರಮೇಶ್ವರಪ್ಪ, ಗೋಡಬೋಲೆ, ಪ್ರೊ. ಕೆರಿಮನಿ, ಬ್ಯಾಳಿ, ಮತ್ತಿಕಟ್ಟಿ ಇತರರಿದ್ದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಎನ್. ಮೂಲಿಮನಿ ಸ್ವಾಗತಿಸಿದರು. ವರದಾ ಕೋಲಕರ ವಂದಿಸಿದರು.
ಗಾಂಧಿ ಜಯಂತಿ ಆಚರಣೆ
ಗದಗ: ಬುಧವಾರ ಸ್ಥಳೀಯ ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಕಾರ್ಯಾಲಯದಲ್ಲಿ ಮಹಾತ್ಮಾ ಗಾಂಧಿ ಜಯಂತಿ ಆಚರಿಸಲಾಯಿತು.
ವೇದಿಕೆ ಕಾರ್ಯಾಧ್ಯಕ್ಷ ಪಿ. ಸುಬ್ರಹ್ಮಣ್ಯ ರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಎಸ್.ಎಸ್. ರಡ್ಡೇರ, ರಾಜ್ಯ ಗೌರವಾಧ್ಯಕ್ಷ ಅಕ್ಬರ ಅಲಿ ಬೇಗ, ರಾಜ್ಯ ಎಸ್ಸಿ ಘಟಕದ ಅಧ್ಯಕ್ಷ ರಾಮಣ್ಣ ಬಳ್ಳಾರಿ, ರಾಜ್ಯ ಕಾರ್ಯದರ್ಶಿ ಎನ್.ಕೆ. ಕೊರ್ಲಹಳ್ಳಿ, ಜಿ.ಬಿ. ಹಿರೇಮಠ, ಅಬ್ದುಲ್ಖಾದರ ಗಡಾದ, ಪರುಶುರಾಮ ಸಾತಪುತೆ, ಎಂ.ಬಿ. ನರಗುಂದ, ಎಂ.ಎಸ್. ಪರ್ವತಗೌಡ್ರ, ಎಂ.ಪಿ. ನದಾಫ ಉಪಸ್ಥಿತರಿದ್ದರು.
ಏಕತೆ, ಶೀಲತೆ ಗಾಂಧೀಜಿ ಮೂಲಮಂತ್ರ: ಕಂಠಿ
ನರೇಗಲ್ಲ: ನಮ್ಮ ದೇಶದ ಸ್ವಾತಂತ್ರಕ್ಕಾಗಿ ಸತತ ಪರಿಶ್ರಮಿಸಿ ಪ್ರಾಣ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳಲ್ಲಿ ಮಹಾತ್ಮಾ ಗಾಂಧೀಜಿ ಮೊದಲಿಗರು. ಏಕತೆ ಹಾಗೂ ಶೀಲತೆಗಳು ಇವರ ಮೂಲಮಂತ್ರ ಎಂದು ಉಪನ್ಯಾಸಕ ಪ್ರೊ.ಎಸ್.ಎಸ್. ಕಂಠಿ ಹೇಳಿದರು.
ಅವರು ಸ್ಥಳೀಯ ಅನ್ನದಾನೇಶ್ವರ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಘಟಕಗಳಡಿಯಲ್ಲಿ ಬುಧವಾರ ಆಯೋಜಿಸಿದ್ದ ಗಾಂಧಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರೊ. ಸಿ.ಜಿ. ಹುಡೇದಗಡ್ಡಿ ಮಾತನಾಡಿದರು. ಜಿ.ಜಿ. ಕೋಟಿ, ಎಸ್.ವಿ. ಸವಣೂರ, ಎನ್.ಕೆ. ಬೇವಿನಕಟ್ಟಿ, ಬಿ.ಎಸ್. ಕಳಕೊಣ್ಣವರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಎನ್ಎಸ್ಎಸ್ ಘಟಕದ ಅಧಿಕಾರಿ ಆರ್.ಎಸ್. ನೀಲಗುಂದ ಸ್ವಾಗತಿಸಿದರು. ಎನ್.ಎಸ್.ಎಸ್ 'ಬಿ' ಘಟಕದ ಅಧಿಕಾರಿ ಪ್ರೊ.ಎಂ.ಆರ್. ಶಿವರಾಂ ನಿರೂಪಿಸಿ, ವಂದಿಸಿದರು.
ಕೃಷಿ ಕೂಲಿಕಾರರ ಧರಣಿ ಹಿಂದಕ್ಕೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಅ. 3
ನಿವೇಶನ ಮಂಜೂರಾತಿ ಹಾಗೂ ಬಗರ ಹುಕುಂ ಸಾಗುವಳಿ ಸಕ್ರಮಕ್ಕೆ ಒತ್ತಾಯಿಸಿ ಕೃಷಿ ಕೂಲಿಕಾರರು ವಿಶೇಷ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಕಳೆದೆರೆಡು ದಿನದಿಂದ ನಡೆಸುತ್ತಿದ್ದ ಅನಿರ್ದಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಅಧಿಕಾರಿಗಳ ಲಿಖಿತ ಭರವಸೆ ಹಿನ್ನೆಲೆಯಲ್ಲಿ ಗುರುವಾರ ಹಿಂಪಡೆಯಲಾಯಿತು.
ಸ್ಥಳಕ್ಕೆ ರೋಣ ತಹಸೀಲ್ದಾರ್ ಎ.ಜಿ. ಪಂಡಿತ್ ತಾಪಂ ಅಧಿಕಾರಿಗಳು, ಕುಂಟೋಜಿ, ಗೋಗೇರಿ, ರಾಜೂರು ಮತ್ತು ರಾಂಪುರ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಆಗಮಿಸಿ ಧರಣಿ ಸ್ಥಳದಲ್ಲಿಯೆ ಧರಣಿ ನಿರತರ ಬೇಡಿಕೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಪ್ರತಿಭಟನಾ ನಿರತರು ತಮ್ಮ ತೊಂದರೆ ಮತ್ತು ಅಹವಾಲುಗಳನ್ನು ಹೇಳಿದರು. ಸಭೆಯಲ್ಲಿ ಹಲವಾರು ವಿಷಯಗಳ ಕುರಿತು ಗಂಭೀರ ಚರ್ಚೆ ನಡೆಯಿತು. ನಂತರ ಹೋರಾಟಗಾರರ ಬೇಡಿಕೆ ಕುರಿತು ಲಿಖಿತ ಭರವಸೆ ನೀಡಿ, ಈ ಎಲ್ಲ ವಿಷಯ ಕುರಿತು ಚರ್ಚಿಸಲು ಅ. 15ರಂದು ಸಂಘಟಕರ ಸಭೆ ಕರೆಯಲಾಗುವುದು ಎಂದರು.
ಎಂ.ಎಸ್. ಹಡಪದ, ಪೀರು ರಾಠೋಡ, ಮಾರುತಿ ಚಿಟಗಿ, ಬಿ.ಎಸ್. ಶೀಲವಂತರ ಕಳಕೇಶ ಉಕ್ಕಿಸಲ, ಮಾತನಾಡಿದರು. ಸಕ್ರಪ್ಪ ಮಾಳೋತ್ತರ, ಬಾಲಕೃಷ್ಣ ಜಾಡಬಂಡಿ, ಶಿವಾನಂದ ಭೋಸಲೆ, ಶರಣಯ್ಯ ಸೂಗೀರಯ್ಯನಮಠ, ಎಚ್ಚರಪ್ಪ ಬಡಿಗೇರ, ಕರಿಯಪ್ಪ ಗುರಿಕಾರ, ಫಕೀರಪ್ಪ ಸೊಬರದ, ಕಳಕಪ್ಪ ಹೊಸಮನಿ, ತುಳಚವ್ವ ರಾಠೋಡ, ಲಕ್ಷ್ಮವ್ವ ಮಾಳೊತ್ತರ, ನೀಲವ್ವ ಗುರಿಕಾರ, ಕರಿಯಪ್ಪ ಮಾದರ, ಉಮೇಶ ಹೊಸಮನಿ ಇತತರು ಪಾಲ್ಗೊಂಡಿದ್ದರು.
ಸಾಹಿತ್ಯದಿಂದ ಮಾನಸಿಕ ನೋವು ನಿವಾರಣೆ
ಗದಗ: ಸಾಹಿತ್ಯವು ಮನಸ್ಸಿನ ನೋವನ್ನು ಮರೆಸಿ ಉತ್ತೇಜನ ನೀಡಬಲ್ಲ ಉತ್ತಮ ಸಾಧನವಾಗಿದೆ ಎಂದು ಗದಗ-ಬೆಟಗೇರಿ ರೋಟರಿ ಕ್ಲಬ್ ಅಧ್ಯಕ್ಷ ಡಾ ಪ್ರದೀಪ ಉಗಲಾಟದ ಹೇಳಿದರು.
ಸ್ಥಳೀಯ ರೋಟರಿ ಐಕೇರ್ ಸೆಂಟರ್ನಲ್ಲಿ ಈಚೆಗೆ ಜರುಗಿದ ರೋಟರಿ ಕ್ಲಬ್ನ ಸಾಪ್ತಾಹಿಕ ಸಭೆಯಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ದಿನದ ಕೆಲಸಗಳ ಜಂಟಾಟದಲ್ಲಿ ಮಾನಸಿಕವಾಗಿ ನಾವು ನೆಮ್ಮದಿ ಪಡೆಯಲು ಸಾಹಿತ್ಯ ಸಂಗೀತವೇ ದಿವ್ಯ ಔಷಧವಾಗಿದೆ. ಪ್ರತಿಯೊಬ್ಬರಲ್ಲೂ ಒಂದೊಂದು ಸೃಜನಾತ್ಮಕತೆ ಇರುತ್ತದೆ. ಅದಕ್ಕಾಗಿ ಸೂಕ್ತ ವೇದಿಕೆ ಬೇಕಷ್ಟೇ ಎಂದರು.
ಗದಗ ಕಸಾಪ ಕಾರ್ಯದರ್ಶಿ ಕವಿತಾ ದಂಡಿನ, ಮಹಿಳೆಯರ ಮೇಲಿನ ದೌರ್ಜನ್ಯ, ಗದುಗಿನ ಭೀಷ್ಮಕೆರೆ ಕುರಿತು ಕವನ ವಾಚಿಸಿದರು. ಡಾ ಉಮೇಶ ಪುರದ ಪ್ರಾಸ್ತಾವಿಕ ಮಾತನಾಡಿದರು. ಮಂಜುಳಾ ಹಾಗೂ ಪ್ರೊ ವಿನಾಯಕ ಕಮತದ, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎ.ಎಂ. ಗೌಡರ, ಡಾ ಶೇಖರ ಸಜ್ಜನರ, ಜಿ.ಬಿ. ಪಾಟೀಲ, ಎಸ್.ಎಫ್. ಬೆನಕಣ್ಣವರ, ಬಿ.ಪಿ. ಕಾಮತ್, ವಿ.ಎಸ್. ಯಳಮಲಿ, ಅರವಿಂದಸಿಂಗ್ ಬ್ಯಾಳಿ ಮುಂತಾದವರು ಉಪಸ್ಥಿತರಿದ್ದರು. ಡಾ ಜ್ಯೋತಿಶ್ರೀ ಕಮತ ಪರಿಚಯಿಸಿದರು. ಉಮೇಶ ಬಾರಕೇರ ನಿರೂಪಿಸಿ, ವಂದಿಸಿದರು.
ಇಂದು ಶಿವಾನುಭವ
ನರಗುಂದ: ತಾಲೂಕಿನ ಬೆಳ್ಳೇರಿ ಗ್ರಾಮದ ಶಿವಾನಂದ ಮಠ ಮತ್ತು ಬಳ್ಳಲಿಂಗೇಶ್ವರ ಮಂದಿರದಲ್ಲಿ 14ನೇ ಮಾಸಿಕ ಶಿವಾನುಭವ ಕಾರ್ಯಕ್ರಮವು ಅ. 4ರ ಶುಕ್ರವಾರ ಸಂಜೆ 7ಕ್ಕೆ ಜರುಗಲಿದೆ. ಬೆಳ್ಳೇರಿ-ಕಲಹಾಳ ಶಿವಾನಂದ ಮಠದ ಬ್ರಹ್ಮನಿಷ್ಠ ಸಚ್ಚಿದಾನಂದ ಶ್ರೀಗಳು, ಕಲಬುರ್ಗಿ ಗುರು ಬಸವ ಯೋಗಾಶ್ರವುದ ಯೋಗಿನಿ ಪ್ರಭುಶ್ರೀ ತಾಯಿ, ಬೆಳ್ಳೇರಿ-ಕಲಹಾಳ ಶಿವನಾಂದ ಮಠದ ಬಸವಾನಂದ ಶ್ರೀಗಳು, ಡಾ. ಎಚ್.ಟಿ. ಮಳಲಿ, ಶಿವಾನಂದ ಶೇಬಣ್ಣವರ, ವಾಸನ ಗ್ರಾಪಂ ಸದಸ್ಯ ಗಂಗಾಧರ ಮೇಟಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ನಾಳೆ ವಿದ್ಯುತ್ ವ್ಯತ್ಯಯ
ಗದಗ: 110 ಕೆವಿ ಬೆಳ್ಳಟ್ಟಿ ಉಪವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಅ. 5ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. 110 ಕೆವಿ ಬೆಳ್ಳಟ್ಟಿ ಉಪಕೇಂದ್ರದಿಂದ ಪೂರೈಕೆಯಾಗುವ 33 ಕೆವಿ ಸೂರಣಗಿ, 33 ಕೆವಿ ಹೊಳೆ-ಇಟಗಿ ಮತ್ತು ಎಲ್ಲ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಕಾರಣ ಸಾರ್ವಜನಿಕರು ಪ್ರಕಟಣೆ ಗಮನಿಸಿ ಸಹಕರಿಸುವಂತೆ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಂಧಿ ಗ್ರಾಮ ಸ್ವರಾಜ್ಯ ಕನಸು ನನಸಾಗಿಲ್ಲ: ಇಟಗಿ
ಮುಂಡರಗಿ: ಮಹಾತ್ಮಾ ಗಾಂಧೀಜಿ ಕೇವಲ ಸ್ವಾತಂತ್ರ್ಯಕ್ಕಾಗಿ ಮಾತ್ರ ಹೋರಾಟ ಮಾಡಲಿಲ್ಲ. ಸತ್ಯ, ಧರ್ಮ, ಅಹಿಂಸೆ, ಪ್ರಾಮಾಣಿಕತೆಗಾಗಿಯೂ ಹೋರಾಟ ಮಾಡಿದರು. ಅವರು ಕಂಡಿದ್ದ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸಿಲ್ಲ. ಬದಲಾಗಿ ಅದನ್ನು ಜಾರಿಗೆ ತರಬೇಕಾಗಿರುವ ಜನಪ್ರತಿನಿಧಿಗಳೇ ಅದನ್ನು ಮರೆತಿರುವುದು ವಿಷಾದಕರ ಎಂದು ಕನ್ನಡ ಕ್ರಾಂತಿಸೇನೆ ಮುಖ್ಯಸ್ಥ ಮಂಜುನಾಥ ಇಟಗಿ ಹೇಳಿದರು. ಬುಧವಾರ ಸ್ಥಳೀಯ ಪುರಸಭೆ ಕಾರ್ಯಾಲಯದಲ್ಲಿ ಆಯೋಜಿದ್ದ ಮಹಾತ್ಮಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ಬಹಾದ್ದೂರ್ ಶಾಸ್ತ್ರಿ ಅವರ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕನ್ನಡ ಜನಾಭಿವೃದ್ಧಿ ವೇದಿಕೆ ಅಧ್ಯಕ್ಷ ದೇವಪ್ಪ ಇಟಗಿ, ಕನ್ನಡಕ್ರಾಂತಿ ಸೇನೆ ಅಧ್ಯಕ್ಷ ಮಂಜುನಾಥ ಮುಧೋಳ ಮಾತನಾಡಿದರು. ಪುರಸಭೆ ಸದಸ್ಯ ವೀರೇಶ ಸಜ್ಜನರ, ಬಿ.ವಿ. ಕೋಳೂರ, ರವಿ ಕುಂಬಾರ, ಎಸ್.ಬಿ. ಪಾಟೀಲ, ಗಣೇಶ ಶೇಡದ, ರಣಧೀರ ಹಿರೇಮನಿ, ನಂದೀಶ ಉಪಸ್ಥಿತರಿದ್ದರು. ಎಂ.ಡಿ. ದೊಡ್ಡಮನಿ ಸ್ವಾಗತಿಸಿದರು. ಸಿ.ಎನ್. ಬಾರಕೇರ ವಂದಿಸಿದರು.