6ರಿಂದ 12ರ ವರೆಗೆ ಎನ್ನೆಸ್ಸೆಸ್ ಶಿಬಿರ: ಕಾಮನಹಳ್ಳಿ
ಗದಗ: ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಭಾರತದ ಮಹತ್ವ ಸಾರುವ ಹಿನ್ನೆಲೆಯಲ್ಲಿ ಸದೃಢ ಭಾರತಕ್ಕೆ ಸದೃಢ ಯುವಕರು ದ್ಯೇಯೋದ್ಯೇಶದೊಂದಿಗೆ ನಗರದ ಕೆಎಸ್ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಆಶ್ರಯದಲ್ಲಿ ಅ. 6ರಿಂದ 12ರ ವರೆಗೆ ತಾಲೂಕಿನ ನರಸಾಪುರ ಗ್ರಾಮದಲ್ಲಿ ಎನ್ನೆಸ್ಸೆಸ್ ವಿಶೇಷ ಶಿಬಿರ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಪ್ರೊ ಎಂ.ಎನ್. ಕಾಮನಹಳ್ಳಿ ಹೇಳಿದರು.
ಗುರುವಾರ ನಗರದ ಮಹಾವಿದ್ಯಾಲಯದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಬದುಕಿನ ಚಿಂತನೆ ಹಾಗೂ ಅಭಿವೃದ್ಧಿ ಕುರಿತು ಯುವ ಸಮಾಜದಲ್ಲಿ ಪ್ರಾಮುಖ್ಯತೆ ಒದಗಿಸುವ ನಿಟ್ಟಿನಲ್ಲಿ ವಿಶೇಷ ಶಿಬಿರ ಆಯೋಜಿಸಲಾಗಿದ್ದು, ಶಿಬಿರದಲ್ಲಿ ಗ್ರಾಮದ ರಸ್ತೆ ದುರಸ್ತಿ, ನೈರ್ಮಲೀಕರಣ ವ್ಯವಸ್ಥೆ, ಸಸಿ ನೆಡುವ ಮೂಲಕ ಅರಣ್ಯೀಕರಣಕ್ಕೆ ಆದ್ಯತೆ, ಗ್ರಾಮ ಸಮೀಕ್ಷಾ ಕಾರ್ಯ, ಗ್ರಾಮೀಣ ಜನರಲ್ಲಿ ಆರೋಗ್ಯ ಕುರಿತು ತಿಳಿವಳಿಕೆ ಹಾಗೂ ಕಾನೂನು ಅರಿವು, ಸಹಕಾರ ಸಂಘಗಳ ಉಪಯೋಗ ಮತ್ತು ಗ್ರಾಮ ಸ್ವಚ್ಛತೆಗೆ ವಿದ್ಯಾರ್ಥಿಗಳಿಂದ ಶ್ರಮದಾನ ಹಾಗೂ ಪ್ರತಿದಿನ ಸಂಜೆ ಸಾಂಸ್ಕೃತಿಕ ಮತ್ತು ಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮಸ್ಥರಲ್ಲಿ ಪ್ರಸ್ತುತ ವಿದ್ಯಮಾನಗಳ ಕುರಿತು ಅರಿವು ಮೂಡಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಕುರಿತು ಚಿಂತನೆ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ.
ಅ. 6ರಿಂದ 12ರ ವರೆಗೆ ಪ್ರತಿದಿನ ಸಂಜೆ 6ಕ್ಕೆ ವಿವಿಧ ವಿಷಯಗಳ ಕುರಿತು ಕಾರ್ಯಕ್ರಮ ಆಯೋಜಿಸಲಾಗಿದ್ದು, 7ರಂದು ಸಮಾಜ ನಿರ್ಮಾಣದಲ್ಲಿ ಯುವಕರ ಹಾಗೂ ಮಾಧ್ಯಮಗಳ ಪಾತ್ರ, 8ರಂದು ಪರಿಸರ ಹಾಗೂ ಆರೋಗ್ಯ ರಕ್ಷಣೆ, 9ರಂದು ಮಹಿಳಾ ಸಬಲೀಕರಣದಲ್ಲಿ ಶಿಕ್ಷಣದ ಪಾತ್ರ, 10ರಂದು ಕೃಷಿ ಅಭಿವೃದ್ಧಿ ಹಾಗೂ ಆಹಾರ ಭದ್ರತೆ, 11ರಂದು ಗ್ರಾಮೀಣ ಬದುಕಿನಲ್ಲಿ ಸಣ್ಣ ಉಳಿತಾಯದ ಪಾತ್ರ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, 12ರಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ.
6ರಂದು ಸಂಜೆ 5ಕ್ಕೆ ನರಸಾಪುರ ವೀರೇಶ್ವರ ಮಠದ ಚಂದ್ರಶೇಖರ ಶ್ರೀಗಳ ಸಾನ್ನಿಧ್ಯದಲ್ಲಿ ಧಾರವಾಡ ಕವಿವಿಯ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ. ಡಿ.ಜಿ. ಹಾಜವಗೋಳ ಶಿಬಿರ ಉದ್ಘಾಟಿಸಲಿದ್ದಾರೆ. ಕೆಎಸ್ಎಸ್ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ಅಧ್ಯಕ್ಷತೆ ವಹಿಸುವರು. ಜಿಪಂ ಸದಸ್ಯೆ ಚಂಬವ್ವ ಪಾಟೀಲ, ತಾಪಂ ಸದಸ್ಯೆ ಸುಮತಿ ಹುಯಿಲಗೋಳ, ಹಾತಲಗೇರಿ ಗ್ರಾಪಂ ಅಧ್ಯಕ್ಷೆ ದ್ಯಾಮವ್ವ ಮುರ್ಲಾಪುರ, ಉಪಾಧ್ಯಕ್ಷ ಕೆ.ವೈ. ಪಾಟೀಲ, ಸದಸ್ಯ ಹೇಮಂತಗೌಡ ಪಾಟೀಲ, ಕೆ.ಸಿ. ಹಿರೇಮಠ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್.ಎಫ್. ಜಕಬಾಳ, ಕೆ.ಎಸ್. ಕಳಕಣ್ಣವರ, ಎನ್.ಬಿ. ದೇಸಾಯಿ, ಯಲ್ಲಪ್ಪ ಡೊಕ್ಕೆಣ್ಣವರ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರೊ. ವಿ.ಎಚ್.ಕೊಳ್ಳಿ, ಡಾ. ಎನ್.ಎಂ. ಅಂಬಲಿಯವರ, ಡಾ. ಎಸ್.ಎಚ್. ವೆಂಕಟಾಪುರ, ಪ್ರೊ. ಎಚ್.ಎಂ. ಮುನಿಸೊಣ್ಣೆಗೌಡ, ಪ್ರೊ. ಸಿ.ಸಿ. ಅಮಾತೆಣ್ಣವರ ಉಪಸ್ಥಿತರಿದ್ದರು.