ನರೇಗಲ್‌ಗೆ 15 ದಿನಕ್ಕೆ ನೀರು
ಕನ್ನಡಪ್ರಭ ವಾರ್ತೆ, ನರೇಗಲ್ಲ, ಅ. 3
ಮಹಿಳೆ ತಾಳ್ಮೆಗೆ ಹೆಸರಾದವಳು, ಅಂಥ ಮಹಿಳೆಯರು ಇಂದು ನರೇಗಲ್ಲ ಪಟ್ಟಣ ಪಂಚಾಯಿತಿಗೆ ಬಂದು ನೀರಿಗಾಗಿ ಗೋಗರೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರೆ ಅದು ಯಾವ ಮಟ್ಟದ್ದಿರಬಹುದು ನೀವೇ ಕಲ್ಪಿಸಿಕೊಳ್ಳಿ. ಹೌದು, ಮೊದಮೊದಲು ಪ್ರತಿದಿನ ನಂತರ 2 ದಿನಕ್ಕೊಮ್ಮೆ ಹಾಗೂ ಸದ್ಯದ ದಿನಮಾನಗಳಲ್ಲಿ ಪ್ರತಿ 3 ದಿನಕ್ಕೊಮ್ಮೆ ಸ್ಥಳೀಯ ಎಲ್ಲ ಓಣಿಯಲ್ಲೂ ನೀರು ಬಿಡುವ ವ್ಯವಸ್ಥೆ ಪಪಂ ರೂಢಿಸಿಕೊಂಡಿದೆ.
ಹೀಗಾಗಿ ಸಾರ್ವಜನಿಕರು ತಮಗೆ ಮೂರು ದಿನಕ್ಕೆ ಅವಶ್ಯಕವಿರುವ ನೀರನ್ನು ಶೇಖರಿಸಿಟ್ಟುಕೊಂಡು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಹೊಂದಾಣಿಕೆಯಾಗಿರುತ್ತಾರೆ. ಆದರೆ, ಈಗ ಈ ಪದ್ಧತಿ ಬೇರೆಯಾಗಿ ಹೋಗಿದೆ. 15-20 ದಿನಗಳಿಗೆ ಪಟ್ಟಣದ ಹಲವು ಓಣಿಯಲ್ಲಿ ನೀರು ಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅನಧಿಕೃತ ನಳ: ಪಟ್ಟಣದಲ್ಲಿ ಹೆಚ್ಚಾನು ಹೆಚ್ಚು ನಳ(ನಲ್ಲಿ)ಗಳು, ಅನಧಿಕೃತವಾಗಿವೆ. ಅವುಗಳ ಬಗ್ಗೆ ಮುಖ್ಯಾಧಿಕಾರಿಗಳಾಗಲಿ ಅಥವಾ ಸಂಬಂಧಿಸಿದವರಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಇಂತಹ ನಳಗಳನ್ನು ಮೊದಲು ಸ್ಥಗಿತಗೊಳಿಸಿ, ನ್ಯಾಯಯುತವಾಗಿ ಬಿಲ್ಲನ್ನು ತುಂಬುವವರಿಗೆ ಸಮಯಕ್ಕನುಸಾರವಾಗಿ ನೀರು ದೊರೆಯುವಂತೆ ಮಾಡಿ ಎಂಬುದು ಪಪಂ ನಿವಾಸಿಗಳ ಅಳಲಾಗಿದೆ.
6-7 ಕೊಳವೆಬಾವಿಗಳು: ನರೇಗಲ್ಲ ವ್ಯಾಪ್ತಿಯಲ್ಲೇ 6-7 ಕೊಳವೆ ಬಾವಿಗಳಿದ್ದಾಗಲೂ ಸಹಿತ ಅವುಗಳಿಂದ ಅವಶ್ಯಕ ನೀರನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ನರೇಗಲ್ಲದಲ್ಲಿ ಎಷ್ಟು ಜನಸಂಖ್ಯೆಯಿದೆ, ಅವರಿಗೆ ಎಷ್ಟು ಪ್ರಮಾಣದ ನೀರಿನ ಅವಶ್ಯಕತೆಯಿದೆ ಎಂಬುದನ್ನು ಅಭಿಯಂತರು ಸಿದ್ಧಪಡಿಸಿಕೊಂಡು ಅದಕ್ಕೆ ಸೂಕ್ತ ಪರಿಹಾರ ಕೈಗೊಳ್ಳಬೇಕು. ಆದರೆ ಅದನ್ನು ಕೈಗೊಳ್ಳಲು ನರೇಗಲ್ಲ ಪಪಂ ಅಭಿಯಂತರೇ ಇಲ್ಲ. ಗದಗದಿಂದ ಕಾಟೆವಾಲೆ ಎನ್ನುವ ಅಭಿಯಂತರರನ್ನು 3 ದಿನಗಳ ಡೆಪ್ಯುಟೇಷನ್ ಮಾಡಿದ್ದರೂ ಅವರು ಬರುತ್ತಿಲ್ಲ.
ಟಿಸಿ, ಮೋಟರ್ ದುರಸ್ತಿ: ನೀರನ್ನು ಏಕೆ ಬಿಟ್ಟಿಲ್ಲ ಎಂದು ಸಾರ್ವಜನಿಕರು ಕೇಳಿದ ಪ್ರಶ್ನೆಗೆ ಮೇಲಿಂದ ಮೇಲೆ ಟಿಸಿ ಸುಡುತ್ತೆ, ಮೋಟರ್ ಸುಡುತ್ತೆ, ವಿದ್ಯುತ್ ಅಭಾವದಿಂದ ಎಂದು ಸಂಬಂಧಪಟ್ಟ ಅಧಿಕಾರಿಗಳು ಒಂದಿಲ್ಲೊಂದು ಕಾರಣ ಕೊಡುತ್ತಲೇ ಸಮಯ ದೂಡುತ್ತಿದ್ದಾರೆ. ಅಲ್ಲದೇ ಸ್ಥಳೀಯ 11ನೇ ವಾರ್ಡ್‌ನಲ್ಲಿ 20 ದಿನಗಳಿಂದ ನೀರು ಬಂದಿಲ್ಲ, ಹೀಗಾದರೆ ಹೇಗೆ ಇಲ್ಲಿ ಜೀವನ ನಡೆಸುವುದು ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಈಚೆಗೆ ಒಂದು ಬಾರಿ ಟಿಸಿ ಸುಟ್ಟಿತ್ತು. ಈಗ 2 ದಿನಗಳ ಹಿಂದೆ ವಿದ್ಯುತ್ ಅಭಾವವಾಗಿತ್ತು. ಅಲ್ಲದೇ ಈಗಿರುವ ಕೊಳವೆ ಬಾವಿಗಳಲ್ಲಿ ನೀರು ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ. ಹೀಗಾಗಿ ನೀರಿನ ಸಮಸ್ಯೆ ಉಂಟಾಗಿದೆ. ನರೇಗಲ್ಲ ಪಪಂನಲ್ಲಿ ರೆವೆನ್ಯೂ ಇನ್‌ಸ್ಪೆಕ್ಟರ್, ಪ್ರಥಮದರ್ಜೆ ಸಹಾಯಕ, ಅಭಿಯಂತರ ಹಾಗೂ ಆರೋಗ್ಯಾಧಿಕಾರಿಗಳ ಹುದ್ದೆಗಳು ಖಾಲಿ ಇದ್ದು, ಇದರಿಂದಾಗಿ ನೀರು ಪೂರೈಕೆಯಲ್ಲಿ ತೊಂದರೆಯುಂಟಾಗಿದೆ. ಕೂಡಲೇ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವೆ.
ಟ ಐ.ಕೆ. ಗುಡದಾರಿ, ನರೇಗಲ್ಲ ಪಪಂ ಮುಖ್ಯಾಧಿಕಾರಿ
ಸಾಮಾನ್ಯವಾಗಿ 1 ವರ್ಷದಿಂದ ನಮ್ಮ ಓಣ್ಯಾಗ ಅಲ್ಪ ಸ್ವಲ್ಪ ನೀರ್ ಬರತಿತ್ರಿ, ಆದ್ರ ಈ 20 ದಿನದಾಗ ಒಂದ ಹನಿ ನೀರೂ ಬಂದಿಲ್ಲ, ಅದರಾಗ ಇದು ಪಕ್ಷಮಾಸ, ಇಲ್ಲಿ ದೇವರು, ಮಡಿ, ಶ್ರಾದ್ಧ ಮುಂತಾದವುಗಳ ನಿಮಿತ್ತ ನೀರು ಅವಶ್ಯಕಾಗತ್ತ ಆದರ, ಇಂಥ ಸಮಯದಾಗ ನೀರಿಲ್ಲಂದ್ರ ಹ್ಯಾಂಗ ಮಾಡೋದು ತಿಳಿವಲ್ದರಿ.
ಟ ವಿನಾಯಕ ಗ್ರಾಮಪುರೋಹಿತ, ಶ್ರೀಪಾದ ಜೋಶಿ , ಆಶಾಬಾಯಿ ಕುಲಕರ್ಣಿ, ಇಂದಿರಾಬಾಯಿ ಕುಲಕರ್ಣಿ, ಸುಲೋಚನಾ ಪಡಿಯಪ್ಪನವರ, ದ್ರಾಕ್ಷಾಯಣಿ ಹಿರೇಮಠ,
11ನೇ ವಾರ್ಡಿನ ನಿವಾಸಿಗಳು.
ನಾವು ಪಪಂಗೆ ಪ್ರವೇಶ ಮಾಡುವುದೇ ವಿಳಂಬವಾಗಿದೆ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಮುಗಿದಿದ್ದು, 21 ದಿನವಾದರೂ ಒಮ್ಮೆ ಯಾದರೂ ಸಭೆ ಕರೆದಿಲ್ಲ. ಈ ಕುರಿತು ಕೂಡಲೇ ಪಪಂ ಅಧಿಕಾರಿಗಳೊಂದಿಗೆ ಎಲ್ಲ ಸದಸ್ಯರು ಚರ್ಚಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ.
- ಅಂದಪ್ಪ ಮಡಿವಾಳರ
11ನೇ ವಾರ್ಡನ ಪಪಂ ಸದಸ್ಯ
-ನಿಂಗರಾಜ ಬೇವಿನಕಟ್ಟಿ