ನಾಳೆ ವೇದ ಗಣಿತಶಾಸ್ತ್ರ, ಅನ್ವಯತೆರಾಜ್ಯಮಟ್ಟದ ವಿಚಾರ ಸಂಕಿರಣ
ಕನ್ನಡಪ್ರಭ ವಾರ್ತೆ, ಗದಗ, ಅ. 3
ಪ್ರಸ್ತುತ ದಿನಮಾನದಲ್ಲಿ ವೇದ ಗಣಿತಶಾಸ್ತ್ರ ಹಾಗೂ ಅದರ ಅನ್ವಯತೆ ಕುರಿತ 1 ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ನಗರದ ಕೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರ ಹಾಗೂ ಭಾರತೀಯ ಅಸ್ಟ್ರೋ ಸೊಸೈಟಿ ಆಶ್ರಯದಲ್ಲಿ ಅ. 5ರಂದು ಮಹಾವಿದ್ಯಾಲಯದ ಸಭಾಭವನದಲ್ಲಿ ಏರ್ಪಡಿಸಲಾಗಿದ್ದು, ಬೆಳಗ್ಗೆ 10ಕ್ಕೆ ಗುಲ್ಬರ್ಗಾ ಕೇಂದ್ರೀಯ ವಿವಿ ಪ್ರೊ. ಎಸ್.ಎಸ್. ಭೂಸನೂರಮಠ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಕೆಎಸ್ಎಸ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ಹೇಳಿದರು.
ಗುರುವಾರ ನಗರದ ಕೆಎಸ್ಎಸ್ ಮಹಾವಿದ್ಯಾಲಯ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 150ಕ್ಕೂ ಹೆಚ್ಚು ಉಪನ್ಯಾಸಕರು ಭಾಗವಹಿಸಿ ತಮ್ಮ ಸಂಶೋಧನೆಗಳನ್ನು ಮಂಡಿಸಲಿದ್ದು, 200ಕ್ಕೂ ಅಧಿಕ ವಿದ್ಯಾರ್ಥಿಗಳು ರಾಜ್ಯದ ವಿವಿಧ ಮಹಾವಿದ್ಯಾಲಯಗಳಿಂದ ಆಗಮಿಸಿ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಚಾರ ಗೋಷ್ಠಿಯಲ್ಲಿ ವಿಜ್ಞಾನ ಮತ್ತು ವೈದಿಕ ಅಧ್ಯಯನದ ಸಾಧ್ಯತೆಗಳು, ವೇದಗಳಲ್ಲಿ ತಂತ್ರಜ್ಞಾನ, ವೇದಕಾಲದ ಗಣಿತ ಅಧ್ಯಯನಗಳು ಮತ್ತು ವೇದಗಳಲ್ಲಿ ರೇಖಾಗಣಿತ ಅಧ್ಯಯನ ವಿಷಯ ಕುರಿತು ವಿದ್ವತ್ ಪೂರ್ಣ ಪ್ರಬಂಧಗಳ ಮಂಡನೆಯಾಗಲಿದೆ.
ಗುಲ್ಬರ್ಗ ವಿವಿಯ ಗಣಿತ ವಿಭಾಗದ ಮುಖ್ಯಸ್ಥ ಪ್ರೊ. ಪಿ.ಎಸ್. ಹಿರೇಮಠ ಆಶಯ ನುಡಿ ಆಡಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ. ಎಸ್.ಎಸ್. ಚಿಂಚಲಿ, ಪ್ರೊ. ಬಿ. ಬಸನಗೌಡ, ಪ್ರೊ. ಜಿ.ವೈ. ಪಾಟೀಲ, ಡಾ. ಜಿ.ಬಿ. ಮರಳಿ ಪಾಲ್ಗೊಂಡು ವಿಶೇಷ ಪ್ರಬಂಧ ಮಂಡಿಸಲಿದ್ದಾರೆ. ಸಂಜೆ 4ಕ್ಕೆ ಜರಗುವ ಸಮಾರೋಪ ಸಮಾರಂಭದ ಅತಿಥಿಗಳಾಗಿ ಧಾರವಾಡ ಕವಿವಿ ಗಣಿತ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಎಸ್. ಬೆಂಚಳ್ಳಿ ಆಗಮಿಸಲಿದ್ದು, ಪ್ರೊ. ಬಿ. ಬಸನಗೌಡ ವಿಚಾರ ಸಂಕಿರಣದ ಸಮನ್ವಯ ಭಾಷಣ ನೀಡಲಿದ್ದಾರೆ ಎಂದರು.
ಈ ಸಂದರ್ಭ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎನ್. ಕಾಮನಹಳ್ಳಿ, ಪ್ರೊ. ವಿ.ಎಚ್. ಕೊಳ್ಳಿ, ಪ್ರೊ. ಸಿ.ಸಿ. ಅಮಾತೆಣ್ಣನವರ, ಡಾ. ಜಿ.ಪಿ. ಸಿದ್ದಾಪುರ, ಡಾ. ಎಸ್.ಎಚ್. ವೆಂಕಟಾಪುರ, ಡಾ. ಎನ್.ಎಂ.ಅಂಬಲಿಯವರ, ಪ್ರೊ. ಎಚ್.ಎಂ. ಮುನಿಸೊಣ್ಣೆಗೌಡ, ವೈ.ಬಿ. ರೇವಣಕೊಂಡಿ ಇತರರು ಪಾಲ್ಗೊಂಡಿದ್ದರು.