ಬರವಣಿಗೆ ಶುದ್ಧವಾಗಿರಲಿ: ಪ್ರೊ. ಪೊಲೀಸ್ಪಾಟೀಲ್
ಗದಗ: ಮನುಷ್ಯನಿಗೆ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಭಾಷಾ ಕೌಶಲ್ಯಗಳ ಅವಶ್ಯಕತೆಯಿದೆ. ಗ್ರಹಿಸುವುದು, ಮಾತನಾಡುವುದು, ಓದುವುದು, ಬರೆಯುವದು, ಚಿಂತಿಸುವುದು - ಇವುಗಳಲ್ಲಿ ಬರವಣಿಗೆಯ ಕಲೆ ಕಷ್ಟಪಟ್ಟು ಕಲೆಯುವಂತದ್ದು. ನಮ್ಮ ಬರವಣಿಗೆ ಶುದ್ಧವಾಗಿರಬೇಕು ಎಂದು ಮುಂಡರಗಿ ಕ.ರಾ. ಬೆಲ್ಲದ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ. ಆರ್.ಎಲ್. ಪೊಲೀಸ್ಪಾಟೀಲ್ ಹೇಳಿದರು.
ಅವರು ನಗರದ ಜ. ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹಯೋಗದಲ್ಲಿ ಗದಗ ಜಿಲ್ಲಾ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ನೇತೃತ್ವದಲ್ಲಿ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ಅಭಿವೃದ್ಧಿ ಭಾಷಾ ಕಾರ್ಯಾಗಾರದಲ್ಲಿ 'ಬರವಣಿಗೆ ಕೌಶಲ್ಯ' ಕುರಿತು ವಿಶೇಷ ಉಪನ್ಯಾಸ ನೀಡಿದರು. ಬರವಣಿಗೆಯಲ್ಲಿ ವಿಧಗಳಿವೆ, ಹೇಗೋ ಬರೆದರೆ ಆಗದು. ಯಾವ ರೀತಿ ಬರೆಯಬೇಕು, ಪೆನ್ನನ್ನು ಹಿಡಿಯುವ ಪದ್ಧತಿ ಹೇಗೆ? ಓದುವ ರೀತಿ, ಶಬ್ದಗಳ ಉಚ್ಚಾರಣೆ ಹೇಗೆ? ಚಾಕ್ಷುಷ ಕೌಶಲ್ಯ, ಅಕ್ಷರ ವಿನ್ಯಾಸ ಕೌಶಲ್ಯ, ಪದಜೋಡಣೆ ಕೌಶಲ್ಯ, ಲೇಖನ ಚಿಹ್ನೆಗಳ ಕೌಶಲ್ಯ, ವಾಕ್ಯ ರಚನಾ ಕೌಶಲ್ಯ, ಇತರ ಬರವಣಿಗೆ ಕೌಶಲ್ಯ, ಸಾಲುಗಳ ಅಂತರ, ಅಕ್ಷರಗಳ ಗಾತ್ರ, ಶಿರೋನಾಮೆ ಮತ್ತು ಉಪಶಿರೋನಾಮೆಗಳ ಕುರಿತು ಚಿತ್ರದ ಮೂಲಕ ವಿವರಿಸಿದರು. ಪ್ರಾ. ಬಿ.ಬಿ. ಗೌಡರ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಕೆ.ವಿ. ಬಾಗಲಕೋಟೆ, ಪರಿಷತ್ ಉಪಾಧ್ಯಕ್ಷ ಡಾ. ಪ್ರಭು ಗಂಜಿಹಾಳ, ಕನ್ನಡ ಸಂಘದ ಕಾರ್ಯದರ್ಶಿ ಎಚ್.ಎಚ್. ಕಾರ್ಯದರ್ಶಿ ಎಚ್.ಎಚ್. ಕುರಿ ಉಪಸ್ಥಿತರಿದ್ದರು. ಪ್ರೊ. ಶಕುಂತಲಾ ಸಿಂಧೂರ ಪಾಲ್ಗೊಂಡಿದ್ದರು. ಭೀಮವ್ವ ತಳವಾರ ಪ್ರಾರ್ಥಿಸಿದರು. ಡಾ. ರಾಜಶೇಖರ ದಾನರಡ್ಡಿ ಸ್ವಾಗತಿಸಿದರು. ಪ್ರೊ. ಸಿ.ಎಂ. ಕಾಳಣ್ಣವರ ಕಾರ್ಯಕ್ರಮ ನಿರೂಪಿಸಿದರು. ಎಚ್.ಎಚ್. ಕುರಿ ವಂದಿಸಿದರು.