ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬೆಳದಡಿ ಗ್ರಾಪಂನಿಂದ ಅವ್ಯವಹಾರ: ಆರೋಪ

Vishwanath S
Updated On : 4 Oct 2013, 11:02 am

ಗದಗ: ತಾಲೂಕಿನ ಬೆಳದಡಿ ಗ್ರಾಪಂ ವ್ಯಾಪ್ತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರಿ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳಿಂದ ಸುಮಾರು ರು. 3 ಕೋಟಿ ಅವ್ಯವಹಾರ ನಡೆದಿದ್ದು, ಜಿಲ್ಲಾಡಳಿತ ತಕ್ಷಣ ಬೆಳದಡಿ ಗ್ರಾಪಂ ಸೂಪರ್‌ಸೀಡ್ ಮಾಡುವ ಮೂಲಕ ತಪ್ಪಿತಸ್ಥರಿಂದ ಹಣ ಮರುಪಾವತಿ ಮಾಡಿ, ಸೂಕ್ತ ಕ್ರಮ ಜರುಗಿಸುವಂತೆ ಅಖಿಲ ಭಾರತ ಬಂಜಾರಾ ಸಂಘದ ತಾಲೂಕು ಅಧ್ಯಕ್ಷ ಮೋತಿಲಾಲ ಮಾಳಗಿಮನಿ ಆಗ್ರಹಿಸಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯಾದ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಎನ್.ಆರ್.ಇ.ಜಿ.ಎ) ಸುಮಾರು ರು. 29 ಲಕ್ಷ ಅವ್ಯವಹಾರವಾಗಿದ್ದು, 60 ಜನ ಮೃತಪಟ್ಟವರ ಹೆಸರಲ್ಲಿ ಮತ್ತು ಗೋವಾದಲ್ಲಿ ವಾಸವಾಗಿರುವವರ ಹೆಸರಲ್ಲಿ, ಅಲ್ಲದೇ ನಗರದ ಕೆನರಾ ಬ್ಯಾಂಕ್‌ನಲ್ಲಿ ಉತ್ತಮ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ಹೆಸರಲ್ಲಿ ಖೊಟ್ಟಿ ಜಾಬ್‌ಕಾರ್ಡ್‌ಗಳನ್ನು ನಿರ್ಮಿಸಿ ಸರ್ಕಾರದ ಹಣವನ್ನು ನುಂಗಿಹಾಕಿದ್ದು, ವಿವಿಧ ವಸತಿ ಯೋಜನೆಗಳಲ್ಲಿ ಮನೆಯನ್ನು ನಿರ್ಮಿಸದೇ ಇರುವ ಫಲಾನುಭವಿಗಳ ಹೆಸರಲ್ಲಿ ರು. 3.55 ಲಕ್ಷ ಅವ್ಯವಹಾರ ನಡೆದಿದೆ.
ಗ್ರಾಮದಲ್ಲಿ ನಿರ್ಮಿಸಬೇಕಿದ್ದ ಶೌಚಾಲಯಗಳಲ್ಲಿಯೂ ರು. 1.20 ಲಕ್ಷಗಳ ಭ್ರಷ್ಟಾಚಾರ ಜರುಗಿದ್ದು, ಅಧಿಕಾರಿಗಳು, ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಖೊಟ್ಟಿ ಫಲಾನುಭವಿಗಳು ಒಟ್ಟಾಗಿ ನೈಜ ಫಲಾನುಭವಿಗಳಿಗೆ ದೊರೆಯಬೇಕಾಗಿದ್ದ ಸರ್ಕಾರದ ಹಣ ನುಂಗಿ ಹಾಕಿದ್ದಾರೆ. ಈ ಕುರಿತು ಈಗಾಗಲೇ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ, ಜಯಕುಮಾರ ಬ್ಯಾಳಿ, ಮುತ್ತಣ್ಣ ಅನ್ವಾಲದ, ಸಿದ್ದು ಅಂದಾನಗೌಡ್ರ, ನಜೀರಅಹ್ಮದ ಪೆಂಡಾರಿ, ನಿಂಗನಗೌಡ ಪಾಟೀಲ, ಮುತ್ತು ನಾಯ್ಕರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement