ಸಂಘಟನೆಯಿಂದ ಸಮಾಜ ಸುಧಾರಣೆ
ಕನ್ನಡಪ್ರಭ ವಾರ್ತೆ, ನರಗುಂದ, ಅ. 3
ರಾಜ್ಯದಲ್ಲಿ ಬಹುಸಂಖ್ಯಾತ ಜನಸಂಖ್ಯೆ ಹೊಂದಿರುವುದು ಪಂಚಮಸಾಲಿ ಸಮಾಜ ಬಾಂಧವರು. ಆದರೆ ಸಂಘಟನೆ ಕೊರತೆಯಿಂದ ಸುಧಾರಣೆಗೆ ಹಿನ್ನಡೆಯಾಗುತ್ತಿದೆ. ಸಮಾಜ ಸುಧಾರಣೆಗೆ ಸಂಘಟನೆ ಅತ್ಯವಶ್ಯಕ ಎಂದು ಕೂಡಲ ಸಂಗಮ ಪೀಠದ ಜ. ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ಅವರು ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಂಚಮಸಾಲಿ ಸಮಾಜದ ತಾಲೂಕು ಮಟ್ಟದ ಸಭೆಯಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮಾಜಿಯ 190ನೇ ವಿಜಯೋತ್ಸವ ಹಾಗೂ ಸಮಾಜದ ಸಂಘಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಸಿಗಬೇಕಾದ ಗೌರವ, ಮಾನ್ಯತೆ, ಮೀಸಲಾತಿಯಿಂದ ವಂಚಿತವಾಗಿದೆ. ಸಂಘಟನೆ ಮೂಲಕ ಸಮಾಜವನ್ನು ಅಭಿವೃದ್ಧಿ ದಿಕ್ಕಿನತ್ತ ಮುಖಂಡರು ಕೊಂಡೊಯ್ಯಬೇಕು ಎಂದರು.
ಅ. 24ರಂದು ಪಟ್ಟಣದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮಾಜಿಯ 190ನೇ ವಿಜಯೋತ್ಸವ ಆಚರಣೆ ಮಾಡಬೇಕಾಗಿದೆ. ಇದಕ್ಕೆ ಬೇಕಾದ ಸಂಪನ್ಮೂಲ ಕ್ರೋಡೀಕರಿಸಲು ಪ್ರತಿಯೊಬ್ಬ ಸಮಾಜ ಬಾಂಧವರು ಸಹಕರಿಸಬೇಕಾಗಿದೆ ಎಂದರು.
ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಚನ್ನಬಸಪ್ಪ, ಎಫ್.ಆರ್. ಪಾಟೀಲ್, ವಿ.ಜಿ. ಸುಕಂದ, ಸಂಗಪ್ಪ ಪೂಜಾರ, ಮಹೇಶ ಹಟ್ಟಿ, ರಾಚನಗೌಡ್ರ, ಎಸ್.ಡಿ. ಕೊಳ್ಳಿ, ಎಂ.ಎಸ್. ಕುಸಗಲ್, ಪ್ರಕಾಶ ಭೂಮಣ್ಣವರ, ಅಶೋಕ ಸಾಲೂಟಿಗಿ, ಫಕೀರಗೌಡ ಫಕೀರಗೌಡ್ರ, ಹೊನ್ನಪ್ಪಗೌಡ ಪಾಟೀಲ, ಕಲ್ಲನಗೌಡ ಪಾಟೀಲ, ಯಲ್ಲಪ್ಪ ಗುಗ್ಗರಿ, ಮರಿಗೌಡ ಕಲೂತಿ ಉಪಸ್ಥಿತರಿದ್ದರು.