15 ದಿನಗಳಿಂದ ಬೀದಿ ದೀಪವಿಲ್ಲ
ನರೇಗಲ್ಲ: ನರೇಗಲ್ಲ ಪಟ್ಟಣದ ದತ್ತಾತ್ರೇಯ ದೇವಸ್ಥಾನ ಹತ್ತಿರವಿರುವ ಬಡಾವಣೆಯಲ್ಲಿನ ನಿವಾಸಿಗಳಿಗೆ 15 ದಿನಗಳಿಂದ ಬೀದಿ ದೀಪಗಳಿಲ್ಲದೇ ಪರದಾಡುವಂತಾಗಿದ್ದು, ಇದರಿಂದ ಸಾರ್ವಜನಿಕರು, ಅದರಲ್ಲೂ ವೃದ್ದರು, ಮಕ್ಕಳು ರಾತ್ರಿ ವೇಳೆ ನಡೆದಾಡುವುದೇ ಕಷ್ಟಕರವಾಗಿದ್ದು, ಮೊದಲೇ ಗ್ರಾಮೀಣ ಪ್ರದೇಶದಲ್ಲಿ ಲೋಡ್ಶೆಡ್ಡಿಂಗ್ನಿಂದ ಕಂಗೆಟ್ಟಿರುವ ಸಾರ್ವಜನಿಕರಿಗೀಗ ಬೀದಿ ದೀಪಗಳಿಲ್ಲಿದೇ ಮತ್ತಷ್ಟು ಸಮಸ್ಯೆಗಳು ಉಂಟಾಗಿದ್ದು, ಎಷ್ಟೇ ಮನವಿ ಮಾಡಿದರೂ ಪಪಂ ಅಧಿಕಾರಿಗಳು ಮಾತ್ರ ಗಮನ ನೀಡುತ್ತಿಲ್ಲ.
ದತ್ತಾತ್ರೇಯ ದೇವಸ್ಥಾನ ಹತ್ತಿರವಿರುವ ಸಂದಿಯೊಂದರಲ್ಲಿ ಮೂರು ಪ್ರಮುಖ ಬೀದಿ ದೀಪದ ಕಂಬಗಳಿದ್ದು ಒಂದು ಕಂಬದಿಂದಲೂ ವಿದ್ಯುತ್ ಪ್ರವಹಿಸುತ್ತಿಲ್ಲ. ಅಲ್ಲಿ ಕಂಬಗಳಿವೆ. ಬಲ್ಬ್ನ ವ್ಯವಸ್ಥೆ ಇದೆ. ಆದರೆ, ಅವುಗಳಿಗೆ ವಿದ್ಯುತ್ ಪ್ರವಹಿಸುವ ತಂತಿಯೇ ಕಟ್ಟಾಗಿ ಹೋಗಿದೆ. ಇದು ನಡೆದು ಹದಿನೈದು ದಿನಗಳಾದರೂ ಹೆಸ್ಕಾಂ ಇಲಾಖೆಗೆ ತಿಳಿದಿದ್ದರೂ ತಿಳಿಯದಂತೆ ವರ್ತಿಸುತ್ತಿರುವುದು, ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದರೆ ತಪ್ಪಾಗಲಾರದು.
ವೃದ್ಧರ ಪರದಾಟ: ರಾತ್ರಿ ಹೊತ್ತಲ್ಲಿ ಓಣಿಯ ದಾರಿಯಲ್ಲಿ ನಡೆದಾಡುವ ದಾರಿಹೋಕರ ಪರಸ್ಥಿತಿ ಹೇಳತೀರದು. ಇಲ್ಲಿ ಮೊದಲೇ ಚಿಕ್ಕಸಂದಿ (ಬೀದಿ) ಬಿದ್ದ ಮನೆ ಇದೆ. ಈಗ ಬಿದ್ದ ಮನೆ ತಿಪ್ಪೆಯಂತಾಗಿದ್ದು ಅಲ್ಲಿ ಸಾಕಷ್ಟು ವಿಷ ಜಂತುಗಳು ವಾಸವಾಗಿದ್ದು, ಈ ಓಣಿಯಲ್ಲಿರುವ ಹಾಗೂ ಬೇರೆ ಕೆಲಸಗಳಿಗೆ ಇಲ್ಲಿಗೆ ಬರುವ ವೃದ್ಧರು, ಮಕ್ಕಳು ಹಾಗೂ ಅಂಗವಿಕಲರು ರಾತ್ರಿ ಹೊತ್ತಲ್ಲಿ ನಡೆದಾಡಬೇಕಾದಾಗ ಎಷ್ಟೋ ಬಾರಿ ದಾರಿ ತೋಚದಂತಾಗಿ ಬಿದ್ದು ಗಾಯ ಮಾಡಿಕೊಂಡ ಪ್ರಸಂಗಳುಂಟು. ಹೀಗಾಗಿ ಇಲ್ಲಿ ಹಾದು ಹೋಗುವ ಪ್ರತಿಯೊಬ್ಬರೂ ಹೆಸ್ಕಾಂ ಇಲಾಖೆ ಅಧಿಕಾರಿಗಳನ್ನು ಶಪಿಸಿ ಹೋಗುತ್ತಿದ್ದಾರೆ.
ಇನ್ನು ಹಲವೆಡೆ ಸಮಸ್ಯೆ: ಇದು ಕೇವಲ ಇದೊಂದು ಬೀದಿ(ಓಣಿಯ) ಸಮಸ್ಯೆಯಲ್ಲ, ಸ್ಥಳೀಯ ಚಿತ್ರಮಂದಿರದಿಂದ ಕೋಡಿಕೊಪ್ಪದ ಸರ್ಕಾರಿ ಶಾಲೆಯವರೆಗೆ ಅಹೋರಾತ್ರಿ ವಿದ್ಯುತ್ತಿಲ್ಲದೇ ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಸೈಕಲ್ ಚಾಲಕರು, ವಿಶೇಷವಾಗಿ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ತುಂಬಾ ದುಸ್ತರವಾಗಿದೆ. ಈ ಕುರಿತು ಹೆಸ್ಕಾಂ ಶಾಖಾಧಿಕಾರಿಗೆ ಕೇಳಿದರೆ ಅಲ್ಲಿ ನಾವು ವಿದ್ಯುತ್ ಕಂಬ ಹಾಗೂ ಅದಕ್ಕೆ ಸೂಕ್ತ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ ಆದರೆ, ಅದಕ್ಕೆ ಪಟ್ಟಣ ಪಂಚಾಯಿತಿಯವರು ಲೈಟ್ ಅಳವಡಿಸಿ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಬೇಕಾಗಿದೆ. ಅದು ಪಟ್ಟಣ ಪಂಚಾಯ್ತಿಯವರಿಗೆ ಸಂಬಂಧಿಸಿದ್ದು ಎಂದು ಕೈ ತೊಳೆದುಕೊಳ್ಳುತ್ತಿದ್ದು, ಇವರಿಬ್ಬರ ನಡುವೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ನಮ್ಮಲ್ಲಿ ತಂತಿ ಸ್ಟಾಕ್ ಇಲ್ಲ ಇಂಡೆಂಟ್ ಹಾಕಿದ್ದೇವೆ. ತಿಂಗಳ ಕೊನೆ ವಾರವಾಗಿರುವುದರಿಂದ ಸ್ವಲ್ಪ ವಿಳಂಬವಾಗಿದೆ. ತಂತಿ ಬಂದ ತಕ್ಷಣ ಸಂಬಂಧಿಸಿದ ಕಂಬಕ್ಕೆ ಬೀದಿ ದೀಪ ಸಂಪರ್ಕ ಮಾಡಿಸಿಕೊಡುತ್ತೇನೆ.
- ಎಂ.ವಿ. ಹೂಗಾರ, ಹೆಸ್ಕಾಂ ಇಲಾಖೆ ಅಧಿಕಾರಿ. ನರೇಗಲ್ಲ
ನಮ್ಮಲ್ಲಿ ಬಾಳಜನ ರೈತಾಪಿ ಜನರದಾರ್ರಿ, ವಯಸ್ಸಾದವ್ರು, ಅಂಗವಿಕಲ್ರು, ಬಾಳಜನ ಅದಾರ್ರಿ. ಮೊದಲಾ ನಮ್ದು ಚಿಕ್ಕ ಸಂದೈತಿ ಅಲ್ಲಿ ಅಡ್ಡಾಡಾಕ ಈಗ ಬೀದಿ ಲೈಟ್ ಹೋದಮ್ಯಾಲಂತು ಬಾಳ ತೊಂದ್ರ್ಯಾಗಾಕತ್ತೈತ್ರಿ. ಮೂರನಾಲ್ಕ ಸಲ ಹೇಳಿದ್ರು ಇನ್ನೂ ಬೀದಿದೀಪಾ ಹಚ್ಚಾಲ್ರರೀ ಏನ್ಮಾಡುದು ಒಂದು ತಿಳಿದಂಗಾಗೈತ್ರಿ.
- ಓಣಿಯ ಸಾರ್ವಜನಿಕರು
-ನಿಂಗರಾಜ ಬೇವಿನಕಟ್ಟಿ