ಅಂಗವಿಕಲರು ಸಾಮಾನ್ಯ ಬುದ್ಧಿವಂತರಿಗಿಂತ ಮಿಗಿಲು
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಅ. 4
ಅಂಗವಿಕಲ ಮತ್ತು ಮಂದ ಬುದ್ದಿಯ ಮಕ್ಕಳನ್ನು ಕುಟುಂಬ ಹಾಗೂ ಸಮಾಜಕ್ಕೆ ಅಂಟಿದ ಶಾಪ ಎಂದು ಭಾವಿಸುವಂಥ ಭಾವನೆ ಹೋಗಬೇಕು. ಅವರು ಸಹ ಎಲ್ಲರಂತೆ ಬದುಕುವಂತಹ ವಾತಾವರಣ ಸೃಷ್ಟಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಅಭಿಪ್ರಾಯಪಟ್ಟರು.
ಪಟ್ಟಣದ ಬಿ.ಡಿ. ತಟ್ಟಿ ಮೇಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಕಿವುಡ ಮಕ್ಕಳ ವಸತಿ ಶಾಲೆಯಲ್ಲಿ ಈಚೆಗೆ ಜರುಗಿದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗವಿಲಕತೆ ಒಂದು ಶಾಪವಲ್ಲ, ಅವರಲ್ಲಿ ವಿಶೇಷ ಪ್ರತಿಭೆಯಿದ್ದು, ಬದುಕನ್ನು ಎದುರಿಸುವ ಕಲೆ ಇತರರಿಗಿಂತ ಹೆಚ್ಚು ಅವರಿಗೆ ಅರ್ಥವಾಗಿರುತ್ತದೆ. ಪಂ. ಪುಟ್ಟರಾಜ ಗವಾಯಿಗಳು ಅಂಗವಿಕಲ ಮಕ್ಕಳನ್ನು ಇಂದು ಎಲ್ಲ ಸಾಮಾನ್ಯ ಜನರಂತೆ ಬದುಕುವಂತೆ ಮಾಡಿದ ಕೀರ್ತಿ ಹೊಂದಿದ್ದಾರೆ. ಈ ದಿಸೆಯಲ್ಲಿ ಪಟ್ಟಣದ ದಿ. ತಟ್ಟಿ ಅವರ ಹೆಸರಿನಲ್ಲಿ ಅಂಗವಿಕಲ ಮಕ್ಕಳಿಗೆ ನೀಡುತ್ತಿರುವ ಉತ್ತಮ ಶಿಕ್ಷಣದಿಂದ ಅವರು ಸ್ವಾವಲಂಬಿ ಬದುಕು ಸಾಗಿಸುವಂತಾಗಿರುವುದು ಹೆಮ್ಮೆಯ ಸಂಗತಿಯಾಗಿದ್ದು, ನಿಸ್ವಾರ್ಥದಿಂದ ಕಾರ್ಯ ಮಾಡುತ್ತಿರುವ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಸೇವೆ ಶ್ಲಾಘನೀಯ ಎಂದರು.
ಡಿಜಿಎಂ ಆಯುರ್ವೇದಿಕ ಕಾಲೇಜಿನ ಪ್ರಾಚಾರ್ಯ ಡಾ ಬಿ.ಜಿ. ಪಾಟೀಲ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ ರಾಜೇಂದ್ರ ಗೊಡಬೋಲೆ, ಸಂಸ್ಥೆ ಕಾರ್ಯದರ್ಶಿ ಸೋಮಣ್ಣ ಮಹಾಜನಶೆಟ್ಟರ್ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಡಾ ಎಸ್.ಜೆ. ತಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಸಂಸ್ಥೆಯ ನಿರ್ದೇಶಕ ಡಿ.ಬಿ. ತಟ್ಟಿ, ಎಸ್.ಎ. ಮಾನ್ವಿ, ವಿಕಲಚೇತನ ಇಲಾಖೆ ಅಧಿಕಾರಿ ಬಿ.ಎನ್. ಮೂಲಿಮನಿ ಮುಂತಾದವರು ಉಪಸ್ಥಿತರಿದ್ದರು. ಎಂ. ರಾಜೇಂದ್ರ ಸ್ವಾಗತಿಸಿದರು, ಶಿಕ್ಷಕ ಎಚ್. ಮಲ್ಲಪ್ಪ ಹಾಗೂ ನಿರ್ಮಲಾ ಎಚ್. ನಿರೂಪಿಸಿದರು. ಜಿ.ಪಿ. ಪವಾರ ವಂದಿಸಿದರು.