ಕುಟುಂಬ ರಾಜಕಾರಣಕ್ಕೆ ಹೊರಟ್ಟಿ ಹುನ್ನಾರ: ಕುಬೇರಪ್ಪ ಆರೋಪ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಅ. 4
ಮಾಜಿ ಶಿಕ್ಷಣ ಸಚಿವ ವಿಪ ಸದಸ್ಯ ಬಸವರಾಜ ಹೊರಟ್ಟಿ ಅವರು 30 ವರ್ಷಗಳಿಂದ ಶಿಕ್ಷಕರನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ವಿಪ ಸದಸ್ಯರಾಗಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಿಜಾಪುರ ಮಹಿಳಾ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ ಆರ್.ಎಂ. ಕುಬೇರಪ್ಪ ಗಂಭೀರ ಆರೋಪ ಮಾಡಿದರು.
ಗುರುವಾರ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹೊರಟ್ಟಿ ಅವರು ಸತತ 6 ಬಾರಿ ವಿಪ ಸದಸ್ಯರಾಗಿ ಆಯ್ಕೆಯಾಗಿದ್ದು, ಪ್ರತಿ ಚುನಾವಣೆಯಲ್ಲೂ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ಆಶ್ವಾಸನೆ ನೀಡುತ್ತಾ ಬಂದಿದ್ದಾರೆ. ಶಿಕ್ಷಕ ಸಮುದಾಯಕ್ಕೆ ಕಂಟಕವಾಗಿರುವ ಅನೇಕ ಸಮಸ್ಯೆಗಳು ಇನ್ನೂ ಜೀವಂತವಾಗಿದ್ದು, ಕೊನೆಗೆ ಅವರೇ ಶಿಕ್ಷಣ ಸಚಿವರಾದರೂ ಸಮಸ್ಯೆಗಳನ್ನು ಜೀವಂತವಾಗಿಟ್ಟ ಕೀರ್ತಿ ಹೊರಟ್ಟಿಯವರಿಗೆ ಸಲ್ಲುತ್ತದೆ. ಈಚೆಗೆ ಅನುದಾನ ರಹಿತ ಅವಧಿಯಲ್ಲಿ ಸೇವೆ ಸಲ್ಲಿಸಿದ ಅವಧಿಯನ್ನು ಸೇವಾ ರಕ್ಷಣೆ ಮಾಡಿ ಆರ್ಥಿಕ ಸೌಲಭ್ಯ ನೀಡುವ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಸರ್ಕಾರದ ಮೇಲ್ಮನವಿ ತಿರಸ್ಕೃತಗೊಂಡಿದ್ದು, ನ್ಯಾಯಾಲಯ ತೀರ್ಪಿನ ಬಗ್ಗೆ, ಅದರ ಸಾಧಕ-ಬಾಧಕಗಳ ಬಗ್ಗೆ ಸರ್ಕಾರ ಇನ್ನು ತೀರ್ಮಾನ ತೆಗೆದುಕೊಳ್ಳಬೇಕಾಗಿದ್ದು, ಸರ್ಕಾರದ ಆದೇಶದ ನಂತರ ಇದರಲ್ಲಿ ಶಿಕ್ಷಕರಿಗೆ ಯಾವ ಸೌಲಭ್ಯಗಳು ಸಿಗಬಹುದು.
ಆದರೆ, ಈ ತೀರ್ಪನ್ನು ನೆಪಮಾಡಿಕೊಂಡು ಹೊರಟ್ಟಿ ಮತ್ತವರ ಕೆಲವು ಅನುಯಾಯಿಗಳು ಸುಳ್ಳು ವದಂತಿ ಹಬ್ಬಿಸಿ ಈಚೆಗೆ ಹುಬ್ಬಳ್ಳಿಯಲ್ಲಿ ಸಭೆ ನಡೆಸಿ, ಶಿಕ್ಷಕರಿಗೆ, ಅನುದಾನರಹಿತ ಅವಧಿಗೆ ಕಾಲ್ಪನಿಕ ವೇತನ ಬಡ್ತಿ, ಸರೆಂಡರ್ ರಜಾ ಸೌಲಭ್ಯ ಹಾಗೂ ಬಾಕಿ ವೇತನ ಮುಂತಾದ ಅನೇಕ ಸೌಲಭ್ಯಗಳ ನೆಪ ಹೇಳಿ ಸಭೆ ಸೇರಿದಾಗ ಇದ್ದ ವಿಚಾರ ಬಿಟ್ಟು ಬೇರೆ ಮಾತನಾಡಿದ ಹೊರಟ್ಟಿ ತಮ್ಮ ಮಗ ವಸಂತ ಹೊರಟ್ಟಿಯನ್ನು ವೇದಿಕೆ ಮೇಲೆ ವೈಭವೀಕರಿಸಿ ಶಿಕ್ಷಕರಿಗೆ ಉಪನ್ಯಾಸ ಮಾಡಿರುವುದು ಇವರ ಕುಟುಂಬ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದು ಆರೋಪಿಸಿದರು.
ಈಚೆಗೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಚಿವ ಎಚ್.ಕೆ. ಪಾಟೀಲ ಇದ್ದ ಸಭೆಯಲ್ಲಿ ಶಿಕ್ಷಕರಿಗೆ ನಿಮ್ಮ ಯಾವುದಾದರೂ ಕೆಲಸ ಇದ್ದರೆ ತನ್ನಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮಗೆ ತುಂಬಾ ಬೇಕಾದವರು. ಎಲ್ಲ ಕೆಲಸ ಮಾಡಿಸುತ್ತೇನೆಂದು ಬಹಿರಂಗವಾಗಿ ಹೇಳಿರುವ ಹೊರಟ್ಟಿ ಈ ಭಾಗದ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಶಿಕ್ಷಕರ ಎಲ್ಲ ಬೇಡಿಕೆ ಈಡೇರಿಸಿ ಮತ ಹಾಕಿದ ಶಿಕ್ಷಕರ ಋಣ ತೀರಿಸುವ ಕೆಲಸ ಮಾಡಲಿ ಎಂದು ಡಾ ಆರ್.ಎಂ. ಕುಬೇರಪ್ಪ ಸಲಹೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪ್ರೊ ಬಿ.ಎಂ. ನಾಗೂರ, ಅಜ್ಜಪ್ಪ ಬಿಜ್ಜೂರ, ಕೆ.ಸಿ. ನಾಗರಜ್ಜಿ ಮುಂತಾದವರು ಉಪಸ್ಥಿತರಿದ್ದರು.