ನಂಗಾನಾಚ್: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ಗಜೇಂದ್ರಗಡ: ಮೋಜು ಮಸ್ತಿಗಾಗಿ ಮಹಿಳೆಯನ್ನು ನಗ್ನಗೊಳಿಸಿ ಮಹಿಳಾ ಸಮುದಾಯಕ್ಕೆ ಅಪಮಾನಗೊಳಿಸಿರುವ ಬೀದರ ಬಿಜೆಪಿಯ ಕೆಲ ಮುಖಂಡರ ಕೃತ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು, ಕೂಡಲೇ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಸ್ಥಳೀಯ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.
ಬೀದರನ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ, ಉಪಾಧ್ಯಕ್ಷ ಕುದುರೆ ಸೇರಿ ಬಿಜೆಪಿಯ ಇತರ ಮುಖಂಡರು ಹೈದ್ರಾಬಾದನ್ ಹೊಟೇಲ್ವೊಂದರಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ನಂಗಾನಾಚ್ ಮಾಡಿದ್ದಾರೆ ಎನ್ನುವ ಸುದ್ದಿ ಶುಕ್ರವಾರ ಬೆಳಗ್ಗೆ ಎಲ್ಲ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಕಾಲಕಾಲೇಶ್ವರ ವೃತ್ತದಲ್ಲಿ ಸೇರಿ ಬಿಜೆಪಿ ಮುಖಂಡರ ಕೃತ್ಯ ಖಂಡಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಎಂ. ಆರಗಿದ್ದಿ ಮಾತನಾಡಿ, ಮಹಿಳೆಯರ ಬಗ್ಗೆ ಡೋಂಗಿ ಭಾಷಣ ಬಿಗಿಯುವ ಬಿಜೆಪಿಯವರ ನಿಜ ಬಣ್ಣ ಬಯಲಾಗುತ್ತಿದೆ ಎಂದರು. ಎಫ್.ಎಸ್. ಕರಿದುರಗನವರ, ರವಿ ಗಡೇದವರ ಉಮೇಶ ರಾಠೋಡ ಘಟನೆ ಖಂಡಿಸಿ ಮಾತನಾಡಿದರು. ಅಜೀತ ವಂದಕುದರಿ, ಅಪ್ಪು ಮತ್ತಿಕಟ್ಟಿ, ಪರಶುರಾಮ ಕಲಾಲ, ಹುವಾಜಿ ಚಂದೂಕರ, ಶಶಿಧರ ವಕ್ಕಲರ, ಶ್ರೀಧರ ಚುಂಚಾ, ಹಸನ ತಟಗಾರ, ಬಾಬಣ್ಣಿ ನದಾಫ, ವೆಂಕಟೇಶ ಮುದಗಲ್, ನಾಸೀರ ಸುರಪುರ, ಪರಶುರಾಮ ಗುಗಲೋತ್ತರ, ಮಾರುತಿ ಬೆಟಗೇರಿ, ಕಳಕಪ್ಪ ಜಾಡಬಂದಿ, ಮುತ್ತಪ್ಪ ಲಕ್ಕಲಕಟ್ಟಿ, ಬಸು ಹೂಗಾರ, ಬಸು ಚನ್ನಿ, ಮಲ್ಲು ಮಾದರ ಇದ್ದರು.
ಮಹಿಳೆಯರ ಶೋಷಣೆಗೆ ಎಸ್ಎಫ್ಐ ಖಂಡನೆ
ಮೋಜು ಮಸ್ತಿಯಲ್ಲಿ ಮಹಿಳೆಯರನ್ನು ಶೋಷಣೆ ಮಾಡಿರುವ ಬೀದರ ಬಿಜೆಪಿ ಮುಖಂಡರನ್ನು ಬಂಧಿಸಿ, ತನಿಖೆಗೊಳಪಡಿಸಬೇಕೆಂದು ಭಾರತ್ ವಿದ್ಯಾರ್ಥಿ ಫೆಡರೇಶನ್ ನಗರ ಸಮಿತಿ ಸರ್ಕಾರಕ್ಕೆ ಒತ್ತಾಯಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸ್ಥಳೀಯ ವಿದ್ಯಾರ್ಥಿ ಮುಖಂಡರು ದೇಶದ ಸಂಸ್ಕೃತಿ ಬಗೆಗೆ ಜಪಿಸುತ್ತಿರುವ ಬಿಜೆಪಿಯ ಕರಾಳ ಮುಖ ಏನೆಂಬುದು ಆಗಾಗ ಪ್ರದರ್ಶನಗೊಳ್ಳುತ್ತಲೇ ಇದೆ. ಬಿಜೆಪಿ ಪಕ್ಷವನ್ನು ದೇಶದಲ್ಲಿ ನಿಷೇಧಿಸಬೇಕೆಂದು ಸಂಘಟನೆಯ ಜಿಲ್ಲಾಧ್ಯಕ್ಷ ಪೀರು ರಾಠೋಡ, ನಗರ ಸಮಿತಿ ಉಪಾಧ್ಯಕ್ಷ ಶಿವಾನಂದ ಭೋಸಲೆ, ಬಾಲಕೃಷ್ಣ ಜಾಡಬಂದಿ, ಶಿವಾಜಿ ಗಡ್ಡದ, ಪ್ರಕಾಶ ಹೆಳವರ ಆಗ್ರಹಿಸಿದ್ದಾರೆ.