ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಣ್ಣು ಅಕ್ರಮ ಸಾಗಾಟ

ಸಮೀಪದ ಕಾಲಕಾಲೇಶ್ವರ ಗ್ರಾಮ ಬಳಿಯ ಐತಿಹಾಸಿಕ ರುದ್ರಪಾದಗಟ್ಟಿ ಬೆಟ್ಟದ ಕೆಳಗೆ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ...

Vishwanath S
Updated On : 5 Oct 2013, 11:40 am

ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಅ. 4

ಸಮೀಪದ ಕಾಲಕಾಲೇಶ್ವರ ಗ್ರಾಮ ಬಳಿಯ ಐತಿಹಾಸಿಕ ರುದ್ರಪಾದಗಟ್ಟಿ ಬೆಟ್ಟದ ಕೆಳಗೆ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮಣ್ಣು ಅಗೆದು ಎಗ್ಗಿಲ್ಲದೇ ಸಾಗಿಸುತ್ತಿದ್ದು, ಸ್ಥಳೀಯ ಗ್ರಾಮಸ್ಥರ ಹಾಗೂ ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ರಾಜೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ಹಾಡ ಹಗಲೇ ಜೆಸಿಬಿ ಯಂತ್ರಗಳ ಮೂಲಕ ಗುಡ್ಡ ಅಗೆದು ಮಣ್ಣನ್ನು ಟ್ರ್ಯಾಕ್ಟರ್ ಮೂಲಕ ರಾಜಾರೋಷವಾಗಿ ಸಾಗಿಸಿ ಭೂ ಸಂಪತ್ತು ಲೂಟಿ ಮಾಡುತ್ತಿದ್ದರೂ ಸಂಬಂಧಿಸಿದ ಯಾವೊಬ್ಬ ಅಧಿಕಾರಿ ಇತ್ತ ಸುಳಿಯದಿರುವುದು ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಗ್ರಾಮಸ್ಥರು ದೂರಿದರು.
ಜಾನುವಾರು ಮೇವಿಗೆ ಸಂಚಕಾರ: ಸುತ್ತಲಿನ ಹಳ್ಳಿಗಳ ರೈತರ ಜಾನುವಾರುಗಳಿಗೆ ಹಸಿರು ಆಹಾರ ನೀಡುತ್ತಿದ್ದ ಬೆಟ್ಟಗಳು ಬರಗಾಲ ಸಂಜೀವಿನಿಯಾಗಿವೆ. ಜತೆಗೆ ಆಯುರ್ವೇದಿಕ ಔಷಧಿ ಗುಣ ಸಸ್ಯಗಳನ್ನು ಹೊಂದಿವೆ. ಎಲ್ಲ ಗುಡ್ಡಗಳು ಈಗ ಖಾಸಗಿಯವರ ಆಕ್ರಮಣದಿಂದ ದನ-ಕರುಗಳ ಮೇವಿಗೆ ಸಂಚಕಾರ ಎದುರಾಗಿದೆ ಅಲ್ಲದೆ ಅರಣ್ಯದಿಂದ ಕಂಗೊಳಿಸುವ ಐತಿಹಾಸಿಕ ಬೆಟ್ಟ ಗುಡ್ಡಗಳ ಸೌಂದರ್ಯ ಹಾಳಾಗುತ್ತಿರುವುದು ಈ ಭಾಗದ ದುರ್ದೈವದ ಸಂಗತಿಯಾಗಿದೆ.
ಸಾಗಾಟ ತಡೆಗೆ ನಿರ್ಲಕ್ಷ್ಯ: ಜನರ ಒಡನಾಟದಲ್ಲಿ ನಿತ್ಯ ವಿಶಾಲತೆ ಪ್ರತೀಕಗಳಂತೆ ಕಾಣುವ ಬೆಟ್ಟಗಳು ಪ್ರಕೃತಿ ಮಾತೆಯ ಕೊಡುಗೆ. ಇವುಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ ಆದ್ಯ ಕರ್ತವ್ಯ. ಆದರೆ, ಈ ಪ್ರಕ್ರಿಯೆ ಇಲ್ಲಿ ನಡೆಯದೇ ಇರುವುದು ಎದ್ದು ಕಾಣುತ್ತಿದೆ. ಐತಿಹಾಸಿಕ ರುದ್ರಪಾದಗಟ್ಟಿ ಬೆಟ್ಟದ ಕೆಳಗೆ ಅಕ್ರಮವಾಗಿ ಮಣ್ಣು ಸಾಗಾಟ ನಡೆಯುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಇಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.
ಕಾಲಕಾಲೇಶ್ವರ ಗ್ರಾಮ ಬಳಿಯ ಐತಿಹಾಸಿಕ ರುದ್ರಪಾದಗಟ್ಟಿ ಬೆಟ್ಟದ ಕೆಳಗೆ ಯಾವುದೇ ಪರವಾನಗಿ  ಇಲ್ಲದೆ ಅಕ್ರಮವಾಗಿ ಮಣ್ಣು ಅಗೆದು ಸಾಗಾಟ ಮಾಡುತ್ತಿರುವುದು ಮಾಧ್ಯಮದವರಿಂದ ತಿಳಿದು ಬಂದಿದೆ. ಕೂಡಲೇ ರಾಜೂರು ಗ್ರಾಪಂ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆಗೆ ಆದೇಶಿಸುವುದರ ಜತೆಗೆ ಖುದ್ದಾಗಿ ನಾನೇ ಸ್ಥಳಕ್ಕಾಗಮಿಸಿ ಅಕ್ರಮ ಮಣ್ಣು ಸಾಗಾಟದಲ್ಲಿ ತೊಡಗಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು.
- ಎ.ಜಿ. ಪಂಡಿತ್
ರೋಣ ತಾಲೂಕು ದಂಡಾಧಿಕಾರಿ
ರಾಜೂರು ಗ್ರಾಪಂ ವ್ಯಾಪ್ತಿಯ ಕಾಲಕಾಲೇಶ್ವರ ಗ್ರಾಮ ಬಳಿ ಇರುವ ಐತಿಹಾಸಿಕ ರುದ್ರಪಾದಗಟ್ಟಿ ಬೆಟ್ಟದ ಕೆಳಗಡೆ ಅಕ್ರಮವಾಗಿ ಮಣ್ಣು ಅಗೆದು ಸಾಗಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಸ್ಥಳಕ್ಕೆ ಧಾವಿಸಿ ಅಕ್ರಮವಾಗಿ ಮಣ್ಣು ಅಗೆದು ಸಾಗಿಸುತ್ತಿರುವವರಿಗೆ ತಾಕೀತು ಮಾಡಿ ಮಣ್ಣು ಅಗೆತ ಸ್ಥಗಿತಗೊಳಿಸಲಾಗಿದೆ. ಮತ್ತೆ ಅಕ್ರಮವಾಗಿ ಗುಡ್ಡದ ಮಣ್ಣು ಅಗೆತಕ್ಕೆ ಮುಂದಾದರೆ ಅಕ್ರಮದಲ್ಲಿ ತೊಡಗಿದವರ ವಿರುದ್ಧ ತಾಲೂಕು ಆಡಳಿತಕ್ಕೆ ದೂರು ನೀಡಲಾಗುವುದು.
- ಪರಶುರಾಮ ಚಿಲಝರಿ,
ರಾಜೂರು ಗ್ರಾಪಂ ಸದಸ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement