ಮರ ಬೆಳೆಸಿ ಹಸಿರು ಉಳಿಸಿ: ಜಾಲಿಹಾಳ
ಗಜೇಂದ್ರಗಡ: ಇಂದು ನೈಸರ್ಗಿಕ ಸಂಪತ್ತು ಕಲುಷಿತಗೊಂಡು ಪರಿಸರದ ಮೇಲೆ ದುಷ್ಪರಿಣಾಮ ಬೀರುವುದರೊಂದಿಗೆ ಜೀವ ಸಂಕುಲಕ್ಕೆ ಮಾರಕವಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ಸ್ವಚ್ಛತೆಯ ಜತೆಗೆ ಮರ ಬೆಳಸಿ ಹಸಿರು ಸಂಪತ್ತು ಉಳಿಸುವಲ್ಲಿ ಮುಂದಾಗಬೇಕು ಎಂದು ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ ಹೇಳಿದರು. ಸ್ಥಳೀಯ ದಂಡಿನ ದುರ್ಗಾದೇವಿ ದೇಗುಲ ಆವರಣದಲ್ಲಿ ಬುಧವಾರ ಗಾಂಧಿ ಜಯಂತಿ ನಿಮಿತ್ತ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಸ್ವಚ್ಛತಾ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಸಿರು ಸೃಷ್ಟಿಯ ಕೊಡುಗೆಯಾಗಿದ್ದು, ಇಂತಹ ಪರಿಸರ ಉಳಿವಿಗಾಗಿ ಆಡಳಿತ ಜತೆ ಸಮುದಾಯ ಕೈಜೋಡಿಸಬೇಕು. ಜತೆಗೆ ಪರಿಸರ ಅರಣ್ಯ ಸಂಪತ್ತಿನ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕಾಯಕಕ್ಕೆ ಸಂಘಟನೆಗಳು ಶ್ರಮಿಸಬೇಕು ಎಂದರು. ಪುರಸಭೆ ಸದಸ್ಯ ಚಂದ್ರಶೇಖರ ಚಳಗೇರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಪಟ್ಟಣದ ಕಾಲಕಾಲೇಶ್ವರ ವೃತ್ತ, ಜೋಡುರಸ್ತೆ, ದುರ್ಗಾ ವೃತ್ತ, ಬಸವೇಶ್ವರ ವೃತ್ತದಿಂದ ಮೈಸೂರ ಮಠದವರೆಗೆ ಸಂಸ್ಥೆಯ 6 ಒಕ್ಕೂಟದ ಇನ್ನೂರಕ್ಕೂ ಅಧಿಕ ಸದಸ್ಯರು ಜಾಥಾದಲ್ಲಿ ಪಾಲ್ಗೊಂಡು ಸಾರ್ವಜನಿಕರಲ್ಲಿ ಪರಿಸರ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿದರು. ವಲಯ ಮೇಲ್ವಿಚಾರಕ ಲೋಹಿತ ಎಚ್, ಪುರಸಭೆ ಸದಸ್ಯೆ ವಿಜಯಲಕ್ಷ್ಮೀ ಚಟ್ಟೆರ, ಪುಷ್ಪಾವತಿ ಭಾಂಡಗೆ, ಟಿ. ಬಸವರಾಜ, ಶಿಲ್ಪಾ ಟಿ ಮುಂತಾದವರು ಉಪಸ್ಥಿತರಿದ್ದರು.