ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮಸ್ಯೆಗಳ ಆಗರ ನರೇಗಲ್ಲ ಸಂತೆ

Vishwanath S
Updated On : 6 Oct 2013, 11:33 am

ನರೇಗಲ್ಲ: ನಿತ್ಯ ಅಡುಗೆ ಮಾಡಲು ಅವಶ್ಯಕ ತರಕಾರಿಗಳನ್ನು ಕೊಳ್ಳಲು ನರೇಗಲ್ಲ ಪಟ್ಟಣದ ಸಾರ್ವಜನಿಕರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ರೋಗಗಳಿಗೆ ತುತ್ತಾಗುವ ಈ ದಿನಗಳಲ್ಲಿ ಶುದ್ಧ ನೀರು, ಗಾಳಿ, ಆಹಾರ ಸಿಗದ ಸಂದರ್ಭದಲ್ಲಿ ನರೇಗಲ್ಲ ಪಟ್ಟಣದ ಜನರಿಗೆ ಶುದ್ಧ ತರಕಾರಿಗಳನ್ನು ಕೊಳ್ಳುವ ಭಾಗ್ಯ ಇಲ್ಲದಂತಾಗಿದೆ. ಇಲ್ಲಿರುವ ಸಂತೆಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಹ ವಾತಾವರಣ ನಿರ್ಮಾಣವಾಗಿದೆ.
ನಿತ್ಯ ಸಾವಿರಾರು ಜನರು ವ್ಯಾಪಾರ, ಕಚೇರಿಗಳಿಗೆ ಸುತ್ತಲಿನ ಸುಮಾರು 10 ಹಳ್ಳಿಗಳಿಂದ ಪಟ್ಟಣಕ್ಕೆ ಆಗಮಿಸುತ್ತಿದ್ದರೂ ಕೂಡ ಇಲ್ಲಿ ಒಂದು ನಿರ್ದಿಷ್ಟ ಸಂತೆ ಮಾರುಕಟ್ಟೆ ಇಲ್ಲದಿರುವುದು ಇಲ್ಲಿನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸುತ್ತಲಿನ ಗ್ರಾಮಗಳಿಗೆ ಸಮೀಪದ ಪ್ರಮುಖ ಪಟ್ಟಣವೆಂದರೆ ನರೇಗಲ್ಲ. ಇಲ್ಲಿ ರೈತರು, ನೌಕರರು, ವ್ಯಾಪಾರಸ್ಥರಿಂದ ಪ್ರತಿದಿನ ತರಕಾರಿಗಳನ್ನು ಕೊಳ್ಳಲು ಸಾಧ್ಯವಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಪಟ್ಟಣವು ಸುಮಾರು ದಶಕಗಳ ಹಿಂದೆ ಸ್ಥಾಪಿತವಾಗಿದ್ದು ಹಿಂದಿನ ರಾಜರ ಆಡಳಿತ ಕಾಲದಲ್ಲಿ ಇದೊಂದು ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಅಂಥ ವಾಣಿಜ್ಯ ಕೇಂದ್ರದಲ್ಲಿ ಒಂದು ಸೂಕ್ತ ಸಂತೆ ಮಾರುಕಟ್ಟೆ ಇಲ್ಲದಿರುವುದು ವಿಷಾದನೀಯ.
ಸೋಮವಾರಕ್ಕೊಮ್ಮೆ ಸಂತೆ: ನರೇಗಲ್ಲಿನ ಕೇಂದ್ರ ಭಾಗವಾದ ಗಣೇಶನ ಗುಡಿ ಮುಂದಿನ ಆವರಣದಿಂದ ಹಳೇ ಬಸ್ ನಿಲ್ದಾಣದವರೆಗೆ ಪ್ರತಿ ಸೋಮವಾರಕ್ಕೊಮ್ಮೆ ನಡೆಯುವ ಸಂತೆಯಲ್ಲಿ 5 ಸಾವಿರಕ್ಕೂ ಅಧಿಕ ವ್ಯಾಪಾರಸ್ಥರು ತರಕಾರಿಗಳನ್ನು ಕೊಳ್ಳಲು ಸುತ್ತಲಿನ ಹಳ್ಳಿಗಳಾದ ತೋಟಗಂಟಿ, ದ್ಯಾಂಪುರ, ಮಲ್ಲಾಪುರ, ಬೂದಿಹಾಳ, ಕೊಚಲಾಪುರ, ಯಲಬುರ್ಗಾ ತಾಲೂಕಿನ ತೊಂಡಿಹಾಳ, ಬಂಡಿಹಾಳ, ಬಿನ್ನಾಳ, ಹಂಚಿನಾಳ ಇನ್ನೂ ಸುತ್ತಲಿನ ಅನೇಕ ಹಳ್ಳಿಗಳಿಂದ ಮಾರುಕಟ್ಟೆಗೆಂದು ಸಾವಿರಾರು ಗ್ರಾಹಕರು ಆಗಮಿಸುತ್ತಾರೆ. ಆದರೆ, ಇಲ್ಲಿ ವ್ಯಾಪಾರಸ್ಥರು ವ್ಯಾಪಾರ ಮಾಡಲು ಅವಶ್ಯಕವಾದಷ್ಟು ಜಾಗವಿಲ್ಲ. ಹೀಗಾಗಿ ಬರುವ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಮಾರುಕಟ್ಟೆ ಇಲ್ಲ. ಪಟ್ಟಣದ ಕೇಂದ್ರ ಭಾಗವಾಗಿದ್ದರಿಂದ ಮತ್ತು ಊರಿನ ಅಗಸಿ ಬಾಗಿಲಿನ ಹತ್ತಿರ ಸಂತೆ ಮಾರುಕಟ್ಟೆ ನಡೆಸುತ್ತಿದ್ದು, ಸಾರ್ವಜನಿಕರು ಹಾಗೂ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಪರಿಹಾರವೆನ್ನುವಂತೆ ಸಂತೆ ಬಜಾರನ್ನು ಬೇರೆ ಕಡೆ ಸೂಕ್ತ ಜಾಗದಲ್ಲಿ ರೈತರು, ಸಾರ್ವಜನಿಕರಿಗೆ ತೊಂದರೆಯಾಗದ ಪ್ರದೇಶದಲ್ಲಿ ನಿರ್ಮಿಸಬೇಕಾಗಿದೆ. ಪ್ರತಿ ಸೋಮವಾರಕ್ಕೊಮ್ಮೆ ಸಂತೆ ನಡೆಯುತ್ತಿದ್ದು, ಇನ್ನಿತರೆ ದಿನಗಳಲ್ಲಿ ತರಕಾರಿ ಬೇಕಿದ್ದಲ್ಲಿ ಸುಮಾರು 30 ಕಿಮೀ ದೂರದ ಗದಗ ಅಥವಾ ಗಜೇಂದ್ರಗಡಕ್ಕೆ ಹೋಗಿ ಸಂತೆ ಮಾಡಬೇಕಾಗಿದೆ.
ರಸ್ತೆ ಸಂಚಾರಕ್ಕೆ ತೊಂದರೆ: ರಸ್ತೆ ಸಣ್ಣದಾಗಿರುವುದರಿಂದ ರಸ್ತೆ ಮೇಲೆ ವ್ಯಾಪಾರಿಗಳು ತರಕಾರಿ ಇಟ್ಟುಕೊಂಡು ಕೂತರೆ ಸಾರ್ವಜನಿಕರಿಗೆ ಓಡಾಡಲು ರಸ್ತೆ ಇಲ್ಲದೆ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತದೆ. ಸಂಜೆ ವೇಳೆ ರೈತರು ತಮ್ಮ ಕೆಲಸ ಮುಗಿಸಿಕೊಂಡು ಇದೇ ದಾರಿಯಲ್ಲಿ ಮನೆಗೆ ತೆರಳಬೇಕಾಗಿರುವುದರಿಂದ ರೈತರ ಎತ್ತುಗಳು ಜನಸಂಖ್ಯೆ ಕಂಡು ಗಾಬರಿಗೊಂಡು ವ್ಯಾಪಾರಸ್ಥರ ಮೇಲೆ ಹರಿಹಾಯ್ದು ಹೋಗುತ್ತವೆ ಎನ್ನುವುದು ಕೂಡ ಇಲ್ಲಿಗೆ ಬರುವ ವ್ಯಾಪಾರಿಗಳ ದೂರಾಗಿದೆ.
ಮಳೆಗಾಲದಲ್ಲಂತೂ ನಿರ್ದಿಷ್ಟ ಮಾಳಿಗೆಯಿಲ್ಲದೆ ಹೊರಾಂಗಣದಲ್ಲಿ ತರಕಾರಿ ಹಚ್ಚಿರುವ ಸಂದರ್ಭ ಮಳೆಯಾದರೆ ವ್ಯಾಪಾರಿಗಳಿಗೆ ಖರೀದಿಸಿದ ಮಾಲು ಹಾಳಾಗಿ ಹೋಗುತ್ತವೆ.
ಊರಿನ ಕೆಲ ಮುಖಂಡರಿಗೆ ಕೇಳಿದಾಗ ಇದು ಈಗೀನ ಸಂತೆ ಬಜಾರ ಅಲ್ರೀ, ಆಗ ಸ್ವಲ್ಪ ಜನಸಂಖ್ಯೆಗೆ ಉಪಯೋಗ ಆಗುವಂತೆ ಊರಿನ ಮಧ್ಯಭಾಗದಲ್ಲಿ ಇರಲಿ ಅಂತ ನಿರ್ಮಿಸಿದ್ದು, ಈಗ ಊರು ದೊಡ್ಡದಾಗೈತಿ ಅದಕ್ಕ ಸಂತೆ ಬಜಾರನೂ ದೊಡ್ಡದು ಮಾಡ್ಬೇಕು ಅಂಥ ಅಭಿಪ್ರಾಯಪಟ್ಟರು. ಪ್ರತಿದಿನ ಸಂತೆ ಮಾರುಕಟ್ಟೆ ನಡೆಯುವಂತೆ ಮಾಡಲು ಒಂದು ಸೂಕ್ತ ಪ್ರದೇಶದಲ್ಲಿ ಸಂತೆಗೆ ಸ್ಥಳ ನಿರ್ಮಾಣ ಮಾಡಬೇಕು ಮತ್ತು ಸಂತೆ ಮಾರುಕಟ್ಟೆಗೆ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ನರೇಗಲ್ ಮತ್ತು ಸುತ್ತಲಿನ ಗ್ರಾಮಗಳ ಸಾರ್ವಜನಿಕರ ಆಗ್ರಹವಾಗಿದೆ.


-ನಿಂಗರಾಜ ಬೇವಿನಕಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement