ಸರ್ವ ವಿಜ್ಞಾನದಲ್ಲಿ ಗಣಿತಕ್ಕೆ ಮಾತೃ ಸ್ಥಾನ
ಗದಗ: ಆಧುನಿಕ ದಿನಗಳಲ್ಲಿ ಗಣಿತ ಹಾಸುಹೊಕ್ಕಾಗಿದೆ. ಎಲ್ಲ ವಿಜ್ಞಾನದಲ್ಲಿ ಗಣಿತಕ್ಕೆ ಹೆಚ್ಚಿನ ಪ್ರಾಧಾನ್ಯತೆಯಿದ್ದು, ಸರ್ವ ವಿಜ್ಞಾನಕ್ಕೂ ಗಣಿತವು ಮಾತೃ ಸ್ಥಾನ ಹೊಂದಿದೆ ಎಂದು ಗುಲ್ಬರ್ಗಾ ಕೇಂದ್ರೀಯ ವಿವಿಯ ಹಿರಿಯ ಪ್ರಾಧ್ಯಾಪಕ ಪ್ರೊ ಎಸ್.ಎಸ್. ಭೂಸನೂರಮಠ ಹೇಳಿದರು.
ನಗರದ ಕೆಎಸ್ಎಸ್ ಮಹಾವಿದ್ಯಾಲಯದ ಸಭಾಭವನದಲ್ಲಿ ಶನಿವಾರ ಕೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರ ಹಾಗೂ ಭಾರತೀಯ ಅಸ್ಟ್ರೋ ಸೊಸೈಟಿ ಆಶ್ರಯದಲ್ಲಿ ಪ್ರಸ್ತುತ ದಿನಮಾನದಲ್ಲಿ ವೇದ ಗಣಿತಶಾಸ್ತ್ರ ಹಾಗೂ ಅದರ ಅನ್ವಯತೆ ಕುರಿತ 1 ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಬದಲಾಗುತ್ತಿರುವ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ನೂತನ ತಂತ್ರಜ್ಞಾನಗಳಾದ ಮೊಬೈಲ್, ಕಂಪ್ಯೂಟರ್, ಇಂಟರ್ನೆಟ್ ಸೌಲಭ್ಯಗಳ ಯುಗ ಪ್ರಾರಂಭವಾಗಿದ್ದು, ಕ್ರಿಯಾಶೀಲ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಕಷ್ಟು ವಿಫುಲ ಅವಕಾಶಗಳಿವೆ. ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರಸ್ತುತ ದಿನದಲ್ಲಿ ಗಣಿತದ ಮಹತ್ವ ಅತ್ಯವಶ್ಯ ಎನ್ನುವುದನ್ನು ಮನಗಾಣಬೇಕಾಗಿದೆ. ಗಣಿತ ಜ್ಞಾನದ ಕೊರತೆ ಉಂಟಾದಲ್ಲಿ ಶೈಕ್ಷಣಿಕ ಬದುಕಿಗೆ ಮಾರಕವಾಗಲಿದೆ. ಮಾನವ ಕಾಣದ್ದನ್ನು ಇತ್ತೀಚಿನ ದಶಕಗಳಲ್ಲಿ ಗಣಿತದ ಮೂಲಕ ಕಂಡುಕೊಳ್ಳಬಹುವುದಾಗಿದೆ. ಗಣಿತವಿಲ್ಲದೇ ಸಮಾಜವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಗಣಿತ ವಿಷಯ ಕಲಿತು ಅರ್ಥೈಯಿಸಿಕೊಂಡು ತಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕೆಎಸ್ಎಸ್ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ಮಾತನಾಡಿ, ವೇದಿಕ ಗಣಿತದ ಮಹತ್ವ ಯಜುರ್ವೇದದಲ್ಲಿ ಸಾರಲಾಗಿದ್ದು, ವೇದಿಕ ಗಣಿತದ ಅಧ್ಯಯನದಿಂದ ವಿದ್ಯಾರ್ಥಿಗಳಲ್ಲಿ ಕ್ರೀಯಾಶೀಲತೆ ಹೆಚ್ಚಾಗಲಿದೆ ಎಂದರು. ಗುಲ್ಬರ್ಗಾ ವಿವಿಯ ಗಣಿತ ವಿಭಾಗದ ಮುಖ್ಯಸ್ಥ ಡಾ. ಪಿ.ಎಸ್. ಹಿರೇಮಠ ಆಶಯ ನುಡಿ ಆಡಿದರು. ಪ್ರೊ. ವಿ.ಎಚ್. ಕೊಳ್ಳಿ, ಡಾ. ಜಿ.ಪಿ. ಸಿದ್ದಾಪುರ, ಪ್ರೊ. ಸಿ.ಸಿ. ಅಮಾತೆಣ್ಣವರ, ಡಾ. ಟಿ.ಎನ್. ಗೋಡಿ, ಧಾರವಾಡದ ಕವಿವಿ ಗಣಿತ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಎಸ್. ಬೆಂಚಳ್ಳಿ, ಡಾ. ಜಿ.ಎಂ. ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು. ಪ್ರಾ. ಎಂ.ಎನ್. ಕಾಮನಹಳ್ಳಿ ಸ್ವಾಗತಿಸಿದರು. ಡಾ. ಎಸ್.ಎನ್. ವೆಂಕಟಾಪುರ ಹಾಗೂ ಎಂ.ಎ. ರಾಟಿ ನಿರೂಪಿಸಿದರು.