ಕಾಲುಬೇನೆ ರೋಗ: ವೈದರ ನಿರ್ಲಕ್ಷ್ಯ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಅ. 6
ಜಾನುವಾರುಗಳು ಕಾಲು ಬೇನೆ ರೋಗದಿಂದ ಬಳಲುತ್ತಿದ್ದರೂ ಪಶು ವೈದ್ಯಾಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ನೀವು ವರ್ಷಕ್ಕೊಮ್ಮೆ ಗ್ರಾಮಕ್ಕ ಬಂದ ಭಾಷಣ ಮಾಡಿ ಹೋಗ್ತೀರಿ... ಉಳಿದ ದಿನ ನಮ್ಮ ಕಷ್ಟ ಕೇಳೋರು ಯಾರು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ಸಮೀಪದ ಕುಂಟೋಜಿ ಗ್ರಾಪಂ ವ್ಯಾಪ್ತಿಯ ಮ್ಯಾಕಲಝರಿ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಜನಸ್ಪಂದನ ಸಭೆಯಲ್ಲಿ ಜರುಗಿತು.
ಗ್ರಾಮಕ್ಕೆ ಸಾರಿಗೆ ಸೌಲಭ್ಯ ಮರೀಚಿಕೆಯಾಗಿದೆ. ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಿಸಿ 3 ವರ್ಷ ಕಳೆದಿವೆ. ಇಲ್ಲಿಯವರೆಗೂ ಯಾವೊಬ್ಬ ವೈದ್ಯರು ಇತ್ತ ಸುಳಿದಿಲ್ಲ. ಇದರಿಂದ ಗ್ರಾಮಸ್ಥರು ತೀವ್ರ ತೊಂದರೆಗೊಳಗಾಗಿದ್ದೇವೆ. ಗ್ರಾಮದಲ್ಲಿ ಮೇಲ್ಮಟ್ಟದ ನೀರು ಸಂಗ್ರಹಗಾರವಿದ್ದು, ಅದು ಶಿಥಿಲಾವಸ್ಥೆಗೆ ತಲುಪಿದೆ ಎಂದು ದೂರಿದರು.
ಹಿಂಗಾರು ಹಂಗಾಮು ಆರಂಭಗೊಂಡಿದೆ ಸರಿಯಾಗಿ ಬಿತ್ತನೆ ಬೀಜ ಸಿಗುತ್ತಿಲ್ಲ. ಈ ಕುರಿತು ಸ್ಥಳೀಯ ಆಡಳಿತ ಸರಿಯಾದ ಮಾಹಿತಿ ನೀಡುತ್ತಿಲ್ಲ. ಜತೆಗೆ ಕುಂಟೋಜಿ ಗ್ರಾಪಂ ವ್ಯಾಪ್ತಿಯಲ್ಲಿ ಕೆರೆ ಇದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಮೀನು ಸಾಕಾಣಿಕೆದಾರರ ಸಂಘವಿದ್ದರೂ ಹೊರಗಿನವರಿಗೆ ಮೀನು ಸಾಕಾಣಿಕೆಗೆ ಅವಕಾಶ ನೀಡಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಾಡಳಿತದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದ ಬಳಿಕ ರೋಣ ತಹಸೀಲ್ದಾರ್ ಎ.ಜಿ. ಪಂಡಿತ್ ಮಾತನಾಡಿ, ಸರ್ಕಾರ ನಿರ್ಮಲ ಭಾರತ ಅಭಿಯಾನ್ ಯೋಜನೆಯಡಿ ಗ್ರಾಮಸ್ಥರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಬೇಕು.
ಸರ್ಕಾರ ಶೌಚಾಲಯ ನಿರ್ಮಿಸಲು ಎರಡು ಹಂತದಲ್ಲಿ ರು. 9200 ಸಹಾಯ ಧನ ನೀಡಲಾಗುವುದು. ಜತೆಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಮುಂದಾಗಬೇಕೆಂದು ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ತಾಲೂಕಾಡಳಿತ ಮುಂದಾಗುತ್ತದೆ ಎಂದರು.
ಸಭೆಯಲ್ಲಿ ಕುಂಟೋಜಿ ಗ್ರಾಪಂ ಅಧ್ಯಕ್ಷೆ ಶಾಂತವ್ವ ಮಾಳೋತ್ತರ, ಉಪಾಧ್ಯಕ್ಷೆ ಸುನಂದಾ ಪಾಟೀಲ, ಶರಣಪ್ಪ ದೊಣ್ಣೆಗುಡ್ಡ, ಮುದಿಯಪ್ಪ ಕರಡಿ, ಶಿವಶರಣಯ್ಯ ಹಿರೇಮಠ, ಕಳಕಪ್ಪ ಡೊಳ್ಳಿನ, ಶಿವಪುತ್ರಯ್ಯ ಕಾರಡಗಿಮಠ, ಪಿಡಿಒ ಯು.ಎಸ್. ಸಿಂಗ್ಟಾಲಕೇರಿ ಕೃಷಿ, ಆರೋಗ್ಯ, ತೋಟಗಾರಿಕೆ, ಸಾರಿಗೆ, ಶಿಕ್ಷಣ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.