ಕುಬೇರಪ್ಪ ಕ್ಷುಲ್ಲಕ ರಾಜಕಾರಣಿ: ಲಮಾಣಿ
ಶಿರಹಟ್ಟಿ: ಬಿಜಾಪುರ ಮಹಿಳಾ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಆರ್.ಎಂ. ಕುಬೇರಪ್ಪ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಹೊರಟ್ಟಿಯವರ ವಿರುದ್ಧ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ತಾಲೂಕು ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರು ಶಿಕ್ಷಕರ ಸಮಸ್ಯೆ ಈಡೇರಿಸಿಲ್ಲ ಎಂಬ ಹೇಳಿಕೆ ಶುದ್ಧ ಸುಳ್ಳು. ಸುಮಾರು 40 ವರ್ಷಗಳ ಕಾಲ ಶಿಕ್ಷಕರ ಪರ ಕೆಲಸ ಮಾಡಿದ್ದಾರೆ. ಶಿಕ್ಷಕ ಸಮುದಾಯಕ್ಕೆ ಅವರು ನೀಡಿದ ಕೊಡುಗೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಕುಬೇರಪ್ಪ ಸುಳ್ಳು ಹೇಳಿಕೆ ನೀಡಿರುವುದು ಖಂಡನಾರ್ಹ. ಕುಬೇರಪ್ಪನವರು ಇಂತಹ ಕೀಳು ಮಟ್ಟದ ರಾಜಕೀಯ ಮಾಡಬಾರದು. ಒಂದು ವೇಳೆ ಹೊರಟ್ಟಿಯವರು ಶಿಕ್ಷಕರ ಪರ ಕಾಳಜಿ ತೋರಿಸುತ್ತಿಲ್ಲ, ಅವರ ಬಗ್ಗೆ ಕಳಕಳಿ ಹೊಂದಿಲ್ಲ ಎಂದಿದ್ದೇ ಆದಲ್ಲಿ ಹೊರಟ್ಟಿಯವರು ವಿಧಾನಪರಿಷತ್ ಸದಸ್ಯರಾಗಿರುತ್ತಿರಲಿಲ್ಲ. ಶಿಕ್ಷಕರ ಹಿತ ಕಾಯಲು ಹೊರಟ್ಟಿ ಶ್ರಮಿಸುತ್ತಿರುವುದರಿಂದಲೇ ಶಿಕ್ಷಕರು ನಿರಂತರವಾಗಿ ಅವರನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡುತ್ತಿದ್ದಾರೆ.
ಕಿಡಿ ಕಾರಿದರು: ಶಿಕ್ಷಕರು ಬುದ್ಧಿವಂತ ಮತದಾರರು, ಅವರಿಗೆ ಯಾರನ್ನು ಆಯ್ಕೆ ಮಾಡಬೇಕೆಂಬ ಅರಿವಿದೆ. ಕೈಯಲ್ಲಿ ಆಗದವ ಮೈಯೆಲ್ಲ ಪರಚಿಕೊಂಡ ಎನ್ನುವ ಮಾತಿನಂತೆ, ಹೊರಟ್ಟಿಯವರ ವಿರುದ್ಧ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕುಬೇರಪ್ಪ ಭ್ರಮನಿರಸನರಾಗಿದ್ದಾರೆ. ಇದು ಕುಬೇರಪ್ಪನವರ ವ್ಯಕ್ತಿತ್ವವನ್ನೂ ನಿರ್ಧರಿಸುತ್ತದೆ. ಅವರೊಬ್ಬರ ಕ್ಷುಲ್ಲಕ ರಾಜಕಾರಣಿ ಎಂದು ಲಮಾಣಿ ಕಿಡಿಕಾರಿದ್ದಾರೆ.
ಹೊರಟ್ಟಿಯವರು ತಮ್ಮ ಪುತ್ರನ ಪರಿಚಯ ಮಾಡಿಕೊಡಲು ಸಭೆ ಕರೆದಿದ್ದಾರೆ ಎಂದು ಕುಬೇರಪ್ಪನವರು ಹೇಳಿರುವುದು ಹಾಸ್ಯಾಸ್ಪದವಾಗಿದೆ. ರಾಜ್ಯದ ಜನತೆಗೆ ಹೊರಟ್ಟಿಯವರ ಪುತ್ರನ ಪರಿಚಯವಿದೆ. ಶಿಕ್ಷಕರ ಚಿಂತನ-ಮಂಥನ ಸಲುವಾಗಿ ಸಭೆ ಕರೆದಿದ್ದರು. ಹೊರಟ್ಟಿಯವರು ಹುಟ್ಟು ಹೋರಾಟಗಾರರಾಗಿದ್ದು, ನಿರಂತರ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿ ಅವರ ಜತೆಯಲ್ಲೇ ಬೆರೆತವರಾಗಿದ್ದಾರೆ. ಬಹುಶಃ ಕುಬೇರಪ್ಪ ಯಾರೆಂದು ರಾಜ್ಯದ ಜನತೆಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಕುಬೇರಪ್ಪನವರು ಶಿಕ್ಷಕರ ಸಮಸ್ಯೆಗೆ ಹೋರಾಟ ಮಾಡಿದ ಉದಾಹರಣೆಯೇ ಇಲ್ಲ. ತಮ್ಮ ಶಿಕ್ಷಣ ಸಂಸ್ಥೆಯಲ್ಲಿಯೇ ಶಿಕ್ಷಕರನ್ನು ಕಡೆಯಾಗಿ ಕಾಣುವ ಕುಬೇರಪ್ಪ ಶಿಕ್ಷಕ ಸಮುದಾಯದ ಹಿತ ಕಾಪಾಡಲು ಹೇಗೆ ಸಾಧ್ಯ? ಚುನಾವಣೆ ಬಂದಾಗ ಶಿಕ್ಷಕರ ಬಗ್ಗೆ ಕಣ್ಣೀರುಸುರಿಸುವ ಕುಬೇರಪ್ಪ, ಪೇಪರ್ ಟೈಗರ್. ಬರೀ ಪತ್ರಿಕಾ ಹೇಳಿಕೆ ನೀಡಿ ಕುಬೇರಪ್ಪನವರು ಮಾಯವಾಗುತ್ತಾರೆ ಎಂದು ಲೇವಡಿ ಮಾಡಿರುವ ಅವರು, ಹೊರಟ್ಟಿಯವರ ವ್ಯಕ್ತಿತ್ವ, ಶಿಕ್ಷಕರ ಬಗ್ಗೆ ಅವರಲ್ಲಿರುವ ಕಾಳಜಿ ನೋಡಿಯೇ ಸತತ 6 ಬಾರಿ ವಿಧಾನಪರಿಷತ್‌ಗೆ ಆರಿಸಿ ಕಳಿಸಿದ್ದಾರೆ ಎಂದು ವಿ.ವಿ. ಅಮರಶೆಟ್ಟರ್, ಎಂ.ಎನ್. ಗೋನಾಳ, ಎನ್.ಎನ್. ನೆಗಳೂರ, ರಮೇಶ ನವಲೆ, ಡಿ.ಎಫ್. ಹಿತ್ತಲಮನಿ, ವಿ.ಪಿ. ಮನ್ಸೂರ, ಮುತ್ತು ಹಿರೇಮಠ, ಎಫ್.ಎಂ. ಹಳ್ಳೆಮ್ಮನವರ, ಎಸ್.ಎಸ್. ಪಾಟೀಲ ಮತ್ತಿತರರು ತಿಳಿಸಿದ್ದಾರೆ.