ಗ್ರಾಮ ಚಾವಡಿ ಅನಾಥ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಅ. 6
ಸ್ವಾತಂತ್ರ್ಯ ಪೂರ್ವದಲ್ಲಿ ಹಲವು ನಾಯಕರು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮದಲ್ಲಿರುವ ಗ್ರಾಮ ಚಾವಡಿಯಲ್ಲಿ ಸಭೆ, ಸಮಾರಂಭ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಿದ್ದ ಅಂದಿನ ಗ್ರಾಮ ಚಾವಡಿಗಳು ಇಂದು ಅನಾಥವಾಗಿದ್ದು, ಇದಕ್ಕೆ ನಿದರ್ಶನವೆಂಬಂತೆ ಸಮೀಪದ ಜಕ್ಕಲಿ ಗ್ರಾಮದಲ್ಲಿನ ಗ್ರಾಮಚಾವಡಿ. ಇಲ್ಲಿಗೆ ಮಹಾತ್ಮಾ ಗಾಂಧೀಜಿ, ಜವಾಹರಲಾಲ ನೆಹರು ಸೇರಿದಂತೆ ಹಲವು ಹೋರಾಟಗಾರರು ಈ ಭಾಗದ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಈ ಗ್ರಾಮ ಚಾವಡಿಗೆ ಇಂದು ಅನಾಥ ಪ್ರಜ್ಞೆ ಕಾಡುತ್ತಿದೆ.
ಸ್ವಾತಂತ್ರ್ಯ ಚಳುವಳಿಗಳು ಹಾಗೂ ಕರ್ನಾಟಕ ಏಕೀಕರಣಕ್ಕೆ ಸಮೀಪದ ಜಕ್ಕಲಿ ಗ್ರಾಮದ ಕೊಡುಗೆ ಅಪಾರ. ಅಂತಹ ದೇಶಾಭಿಮಾನದ ಕಹಳೆ ಮೊಳಗಿಸಿದ ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿ ದೇಶ ಕಂಡ ಧೀಮಂತ ನಾಯಕರಲ್ಲಿ ಒಬ್ಬರು. ಸ್ವಾತಂತ್ರ್ಯ ಪೂರ್ವ ಗ್ರಾಮ ಚಾವಡಿಗಳಿಗೆ ಅಪಾರ ಗೌರವವಿತ್ತು. ಗ್ರಾಮಗಳ ವ್ಯಾಜ್ಯ ತೀರ್ಮಾನ, ಆಂಗ್ಲ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿದಾಗ ಚಾವಡಿಯ ಮೂಲಸ್ಥಳ, ಸ್ವಾತಂತ್ರ್ಯಕ್ಕೆ ಜನತೆಯನ್ನು ಜಾಗೃತಗೊಳಿಸಲು ದೇಶದ ಮಹಾನ್ ನಾಯಕರೂ ಕೂಡ ಗ್ರಾಮ ಚಾವಡಿಗೆ ಬರುತ್ತಿದ್ದರು. ಅಂಥ ಸ್ವಾತಂತ್ರ್ಯದ ಸೇನಾನಿಗಳಾದ ಮಾಹಾತ್ಮಾ ಗಾಂಧಿ, ಜವಾಹರಲಾಲ ನೆಹರು ಬಂದು ಇಲ್ಲಿ ವಿಶ್ರಮಿಸಿ ಜನತೆಯ ಸಮಸ್ಯೆಗೆ ಸ್ಪಂದಿಸಿ ಸ್ವಾತಂತ್ರ್ಯ ಹೋರಾಟದ ಕಿಚ್ಚುಹಚ್ಚಿ ಹೋದ ಸಮೀಪದ ಜಕ್ಕಲಿ ಗ್ರಾಮದ ಹೃದಯ ಭಾಗದಲ್ಲಿರುವ ಬೃಹತ್ ಗ್ರಾಮ ಚಾವಡಿ ಅನಾಥವಾಗಿ ಇಂದು ಕಾಲಗರ್ಭ ಸೇರುತ್ತಿದ್ದರೂ ಯಾರೂ ಕೂಡ ಕಣ್ಣು ತೆರೆದು ನೋಡದಿರುವುದು ವಿಷಾದದ ಸಂಗತಿ.
ಹಿನ್ನೆಲೆ: ದೇಶವನ್ನು ಆಂಗ್ಲರು ಆಳುತ್ತಿರುವ ಸಮಯ ಈ ಐತಿಹಾಸಿಕ ಗ್ರಾಮ ಚಾವಡಿ ವಿಶಾಲವಾದ ಸ್ಥಳದಲ್ಲಿ ನಿರ್ಮಾಣಗೊಂಡಿದ್ದು, ಗ್ರಾಮ ಹಾಗೂ ಸುತ್ತಲಿನ ಸಾರ್ವಜನಿಕರ ಕಲಹ, ತೊಂದರೆಗಳನ್ನು ನಿವಾರಿಸಲು ಕಳ್ಳಕಾಕರಿಗೆ ಶಿಕ್ಷೆ ವಿಧಿಸಿ ಬಂಧಿಸಿಡಲು ಇಲ್ಲಿ ಜೈಲು ಸ್ವರೂಪದ ಕೋಣೆ ಕೂಡ ಇತ್ತು. ಗ್ರಾಮಗಳಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಇಲ್ಲೆ ಇಡುವ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು, ಅಂದು ಗ್ರಾಮ ಚಾವಡಿಯು ನ್ಯಾಯ ನಿರ್ಣಯಿಸುವ ದೇವಾಲಯದಂತೆ ನಿರ್ಮಾಣಗೊಂಡಿತ್ತು. ಆದರೆ, 2009ರಲ್ಲಿ ಸುರಿದ ಭಾರಿ ಮಳೆಯಿಂದಾಗಿ, ಮಳೆರಾಯನ ಅರ್ಭಟಕ್ಕೆ ತುತ್ತಾಗಿ ಈಗ ಬಿದ್ದು ಹೋಗಿದೆ.
ಬಾಪೂಜಿ, ಜವಾಹರಲಾಲ ಭೇಟಿ
ಬಾಪೂಜಿ ಕರ್ನಾಟಕ ಪ್ರವಾಸ ಕೈಗೊಂಡಾಗ ಮಾರ್ಚ್ 3, 1934ರಂದು ಈ ಗ್ರಾಮದಲ್ಲಿ ಸ್ವಾತಂತ್ರ್ಯದ ಕಿಚ್ಚು ಹತ್ತಿದೆ ಎನ್ನುವದನ್ನು ಸ್ವತಃ ಅರಿಯಲು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ಚಾವಡಿಯಲ್ಲಿ ವಿಶ್ರಾಂತಿ ಪಡೆದಿದ್ದರು. ಅಂದು ಸಂಜೆ ಸುಮಾರು 25 ಸಾವಿರಕ್ಕೂ ಹೆಚ್ಚು ಜನತೆಯನ್ನುದ್ದೇಶಿಸಿ ಮಾತನಾಡಿದ್ದರು. ಅಲ್ಲದೇ ಜವಾಹರಲಾಲ ನೆಹರೂ ಕರ್ನಾಟಕ ಪ್ರವಾಸ ಕೈಗೊಂಡಿದ್ದಾಗ ಅಂದಾನಪ್ಪ ದೊಡ್ಡಮೇಟಿಯವರ ಮನವಿ ಮೇರೆಗೆ 1931ರ ಡಿಸೆಂಬರ ತಿಂಗಳಲ್ಲಿ ಗ್ರಾಮಕ್ಕೆ ಆಗಮಿಸಿದ ಇದೇ ಚಾವಡಿ ಆವರಣದಲ್ಲಿ ಭಾಷಣ ಮಾಡಿದ್ದರು. 1931ರಲ್ಲಿ ನೆಹರೂ ಅವರು ಜಕ್ಕಲಿ ಗ್ರಾಮದ ಈ ಚಾವಡಿಗೆ ಬಂದು ಹೋದ ನಂತರ 1932ರ ಒಂದು ರಾತ್ರಿ 8 ಗಂಟೆ ಸುಮಾರಿಗೆ ಅಂದಿನ ಬ್ರಿಟಿಷರು ಹಾಗೂ ಪೊಲೀಸ್ ಮುಖ್ಯಾಧಿಕಾರಿ ಚಾವಡಿಗೆ ಆಗಮಿಸಿ ನೆಹರೂ ಬಂದು ಹೋಗಲು ಕಾರಣರಾದ ಅಂದಾನಪ್ಪ ದೊಡ್ಡಮೇಟಿಯವರನ್ನು ವಿಚಾರಣೆ ನಡೆಸಿದ್ದರು ಎನ್ನುವುದನ್ನು ಇತಿಹಾಸ ಸಾರಿ ಹೇಳುತ್ತಿದೆ. ಇಂಥ ಗ್ರಾಮ ಚಾವಡಿ ಇಂದು ಅನಾಥವಾಗಿದೆ.
- ನಿಂಗರಾಜ ಬೇವಿನಕಟ್ಟಿ