ಅನುದಾನ ಸದ್ಬಳಕೆ ಆಗಲಿ: ಶಾಸಕ ದೊಡ್ಡಮನಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಅ. 7
ಸರ್ಕಾರದಿಂದ ಬಂದ ಅನುದಾನವನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಿಕೊಂಡು ಅಭಿವೃದ್ಧಿಗೆ ಶ್ರಮಿಸಬೇಕು. ಪಪಂ ಅಧ್ಯಕ್ಷ, ಸದಸ್ಯರು ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಂಡು ಗುಣಮಟ್ಟದ ಕಾಮಗಾರಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಪಟ್ಟಣದ ಹರಿಪುರ ಗ್ರಾಮದಲ್ಲಿ ಸೋಮವಾರ ಪಟ್ಟಣ ಪಂಚಾಯಿತಿ ವತಿಯಿಂದ 13ನೇ ಹಣಕಾಸು ಯೋಜನೆಯಡಿಯಲ್ಲಿ ರು. 9 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡ ಕಾಂಕ್ರೀಟ್ ರಸ್ತೆ, ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯ ಸರ್ಕಾರವು ರೈತರ ಹಿತರಕ್ಷಣೆ ಹಾಗೂ ಗ್ರಾಮಾಭಿವೃದ್ಧಿಯ ಜತೆಗೆ ಹಳ್ಳಿಗಳಲ್ಲಿ ಸಂಪೂರ್ಣ ಹಾಳಾಗಿ ಹೋದ ರಸ್ತೆ ಸುಧಾರಣೆಗೆ ವಿಶೇಷ ಕಾಳಜಿ ವಹಿಸಿದ್ದು, ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುತ್ತಿದೆ ಎಂದರು.
ಹಳ್ಳಿಗಳು ಸುಧಾರಣೆ ಆದರೆ ಮಾತ್ರ ದೇಶ ಸುಧಾರಣೆ ಆಗಲು ಸಾಧ್ಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಗ್ರಾಮೀಣ ಪ್ರದೇಶಗಳ ರಸ್ತೆ ಸುಧಾರಣೆಗೆ ಮುಂದಾಗಿದೆ. ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಮನ್ವಂತರ ಆರಂಭವಾಗಿದ್ದು, ಜನಸಾಮಾನ್ಯರ ಬದುಕನ್ನು ಸುಂದರಗೊಳಿಸುವ ನಿಟ್ಟಿನಲ್ಲಿ ನಿತ್ಯದ ಬದುಕಿಗೆ ಅಗತ್ಯವಾಗಿರುವ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಆದ್ಯತೆಯ ಮೇರೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಸರ್ಕಾರ ರೈತರು, ವಿದ್ಯಾರ್ಥಿಗಳು, ಬಡ ಹಾಗೂ ದೀನ ದಲಿತರ ಕಲ್ಯಾಣಕ್ಕೆ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ವೇಗದ ಅಭಿವೃದ್ಧಿಗೆ ಚಾಲನೆ ನೀಡಿದೆ. ನಗರ ಪ್ರದೇಶಗಳ ಜತೆಗೆ ಗ್ರಾಮೀಣ ಪ್ರದೇಶದ ವಿಕಸನಕ್ಕೂ ಆದ್ಯತೆ ನೀಡಲಾಗಿದೆ. ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ಹೆಚ್ಚಳ ಶೈಕ್ಷಣಿಕವಾಗಿ ಹಿಂದುಳಿದ ಜನರಿಗೆ ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಆದ್ಯತೆಯನ್ನು ಈ ಸರ್ಕಾರ ನೀಡಿದೆ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಸದಸ್ಯ ಹುಮಾಯೂನ ಮಾಗಡಿ, ಸಂತೋಷ ಕುರಿ, ಬುನಶ್ಯಾ ಮಕಾನದಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈ.ಎಸ್. ಪಾಟೀಲ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ಟಿ. ದೊಡ್ಡಮನಿ, ಮಂಜುನಾಥ ಘಂಟಿ, ಪರಮೇಶಿ ಪರಬ, ಮಹಾಂತೇಶ ದಶಮನಿ ಮತ್ತಿತರರು ಇದ್ದರು.
ಯುವಕರು ಕೃಷಿಗೆ ಆದ್ಯತೆ ನೀಡಬೇಕು: ಸಲೀಂ ಅಹ್ಮದ್
ಮುಳಗುಂದ: ಕೃಷಿ ಈ ದೇಶದ ಬೆನ್ನೆಲುಬಾಗಿದ್ದು, ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಯುವಕರು ಹೆಚ್ಚು ಸುಧಾರಿತ ಕೃಷಿ ಬೇಸಾಯದ ಕಡೆಗೆ ಆಸಕ್ತಿವಹಿಸುವುದು ಅಗತ್ಯವಿದೆ ಎಂದು ನೆಹರು ಯುವ ಕೇಂದ್ರ ಸಂಘಟನೆಯ ಮಹಾನಿರ್ದೇಶಕ ಸಲೀಂ ಅಹ್ಮದ ಹೇಳಿದರು.
ಅವರು ಪಟ್ಟಣದ ಐತಿಹಾಸಿಕ ಬಾಳೆ ತೋಟದಲ್ಲಿ ಭಾನುವಾರ ಜರುಗಿದ ಬಾಳೆಬೆಳೆ ಕ್ಷೇತ್ರೋತ್ಸವ, ಶಾರದಾ ಹಾಲು ಉತ್ಪಾದನಾ ಘಟಕ, ಹೈನುಗಾರಿಕೆ ಹಾಗೂ ಸಾವಯವ ಕೃಷಿ ತರಬೇತಿ ಕೇಂದ್ರ, ಎರೆಗೊಬ್ಬರ ಉತ್ಪಾದನಾ ಘಟಕ ಹಾಗೂ ದಿ. ಮಾನಪ್ಪ ನೀಲಗುಂದ ಇವರ 5ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿನ ಯುವಕರು ನಗರಗಳಿಗೆ ವಲಸೆ ಹೋಗುವ ಬದಲು ಸರ್ಕಾರದ ಹಲವು ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಕೃಷಿ ಕ್ಷೇತ್ರವನ್ನು ಬೆಳೆಸಬೇಕಿದೆ ಎಂದರು.
ಸಾನ್ನಿಧ್ಯವಹಿಸಿದ್ದ ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಶ್ರೀ ಮಾತನಾಡಿದರು.
ಎರೆ ಗೊಬ್ಬರ ಉತ್ಪಾದನಾ ಘಟಕವನ್ನು ಉದ್ಘಾಟಿಸಿದ ಸಿ.ಬಿ. ಬಡ್ನಿ ಹಾಗೂ ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಮಹಾಂತೇಶ ನೀಲಗುಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜೆ.ಬಿ. ಮಜ್ಜಗಿ, ಎನ್.ಬಿ. ದೊಡ್ಡಮನಿ ಅವರನ್ನು ಸನ್ಮಾನಿಸಲಾಯಿತು. ಆರ್.ಎನ್. ದೇಶಪಾಂಡೆ, ಫಕ್ಕಿರಪ್ಪ ಹೆಬಸೂರ, ಎಂ.ಎಂ. ಮರಿದೇವರಮಠ, ಫಕ್ಕಿರಯ್ಯ ಅಮೋಘಿಮಠ, ಬಿ.ಎಂ. ವಾಲಿ, ಎಸ್.ಎಂ.ನೀಲಗುಂದ, ಎ.ಎಚ್. ದುರ್ಗಿಗುಡಿ, ಮಹಾದೇವಪ್ಪ ಹುಬ್ಬಳ್ಳಿ, ಎಂ.ಡಿ.ಬಟ್ಟೂರ ಮುಂತಾದವರು ಉಪಸ್ಥಿತರಿದ್ದರು.
ಮಹೇಶ ನೀಲಗುಂದ ಸ್ವಾಗತಿಸಿದರು. ಪಿ.ಎಸ್. ಮರಿದೇವರಮಠ ನಿರೂಪಿಸಿದರು. ಎಸ್.ಎಂ. ಉಜ್ಜಣ್ಣವರ ವಂದಿಸಿದರು.