ಕಳಸಾ-ಬಂಡೂರಿ ಹೋರಾಟಕ್ಕೆ ನ್ಯಾಯವಾದಿಗಳ ಬೆಂಬಲ
ಕನ್ನಡಪ್ರಭ ವಾರ್ತೆ, ಗದಗ, ಅ. 7
ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಸೋಮವಾರ ಹುಬ್ಬಳ್ಳಿ-ಧಾರವಾಡ ಬಂದ್ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಕೋರ್ಟ್ ಕಲಾಪದಿಂದ ದೂರ ಉಳಿಯುವ ಮೂಲಕ ಬೆಂಬಲ ಸೂಚಿಸಿದರು.
ದಶಕಗಳಿಂದ ಉತ್ತರ ಕರ್ನಾಟಕದ ಕನಸಾಗಿಯೇ ಉಳಿದ ಕಳಸಾ, ಬಂಡೂರಿ ನಾಲಾ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಈ ಹಿಂದಿನಿಂದಲೂ ಹೋರಾಟ ಮಾಡುತ್ತ ಬರಲಾಗಿದೆ. ಸರ್ಕಾರಗಳು ಬರಿ ಭರವಸೆ ನೀಡುತ್ತಾ ಬಂದಿವೆ. ಉತ್ತರ ಕರ್ನಾಟಕದ ಎಲ್ಲ ರೈತರು ಸಾಮಾಜಿಕ ಹೋರಾಟಗಾರರು, ಬುದ್ಧಿ ಜೀವಿಗಳು ಇದಕ್ಕಾಗಿ ತೀವ್ರ ಹೋರಾಟ ಹಮ್ಮಿಕೊಂಡಿದ್ದು, ಗದಗ ಜಿಲ್ಲಾ ನ್ಯಾಯವಾದಿಗಳ ಸಂಘ, ಈ ಸಂಘದ ಎಲ್ಲ ಸದಸ್ಯರು ಎಲ್ಲ ನ್ಯಾಯಾಲಯಗಳ ಕಲಾಪದಿಂದ ದೂರ ಉಳಿದು ಬೆಂಬಲ ಸೂಚಿಸುವುದಾಗಿ ತಿಳಿಸಿದರು.
ಜಿಲ್ಲಾ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ಜರುಗಿಸಿ, ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವಿ.ಬಿ. ಹುಬ್ಬಳ್ಳಿ, ಪದಾಧಿಕಾರಿಗಳಾದ ಎಂ.ಎ. ಮಾನ್ವಿ, ವಿ.ವೈ. ಹಬೀಬ, ಎನ್.ಎಸ್. ಜಾಲವಾಡಗಿ, ಎಂ.ಎಚ್. ಭಜಂತ್ರಿ, ವಿ.ವೈ. ಕೊಪ್ಪಳ, ಆರ್.ಎಸ್. ಖಟವಟೆ, ಸಜ್ಜನ, ಸಿ.ಎಸ್. ರಾಚಯ್ಯನವರ, ಪಿ.ಎಸ್. ಹಕ್ಕಾಪಕ್ಕಿ, ಆರ್.ಪಿ. ಪಾಲನಕರ, ಜಿ.ಎಸ್. ಹೊಂಬಳ, ಪಿ.ವಿ. ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.