ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಳೆಗುಂದುತ್ತಿರುವ ಜಾನುವಾರು ಸಂತೆ

Lingaraj Badiger
Updated On : 8 Oct 2013, 11:20 am

ನರೇಗಲ್ಲ: ಗದಗ ಜಿಲ್ಲೆಯಲ್ಲಿಯೇ ಜಾನುವಾರಗಳ ಸಂತೆಯ ವಿಷಯದಲ್ಲಿ ನರೇಗಲ್ಲ ಉತ್ತಮ ಹೆಸರು ಹೊಂದಿದೆ. ಆದರೆ, ದಿನ ಕಳೆದಂತೆ ಸಂತೆಗೆ ಬರುವ ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿದೆ.
ಇದಕ್ಕೆ ಕಾರಣ ರೈತರು ಜಾನುವಾರುಗಳ ಬಗ್ಗೆ ತಾಳುತ್ತಿರುವ ನಿರ್ಲಕ್ಷ್ಯವೋ, ಅಥವಾ ಟ್ರ್ಯಾಕ್ಟರ್‌ಗಳ ಅನುಕೂಲತೆಯಿಂದ ಎತ್ತುಗಳಿಂದ ದೂರವಾಗುತ್ತಿದ್ದಾರೆಯೋ ತಿಳಿಯುತ್ತಿಲ್ಲ. ರೈತರು ಬದಲಾಗುತ್ತಿರುವ ಕೃಷಿ ಪದ್ಧತಿಯಿಂದ, ಕೇವಲ ವಾಣಿಜ್ಯ ಬೆಳೆಗಳನ್ನೇ ಬೆಳೆಯುತ್ತಿರುವುದರಿಂದ ಜಾನುವಾರುಗಳ ಮೇಲಿನ ಅವಲಂಬನೆ ಕಡಿಮೆಯಾದಂತೆ ಕಾಣುತ್ತಿದೆ.
ರೈತರು ತಮ್ಮ ಆಹಾರ ಬೆಳೆಗಳ ಜತೆಗೆ ಜಾನುವಾರು ಸಾಕಲು ಮೇವಿನ ಹಾಗೂ ಹೊಟ್ಟಿನ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಈಗ ಕೇವಲ ತಮ್ಮ ಆರ್ಥಿಕ ಸಬಲತೆಗಾಗಿ, ತಂತ್ರಜ್ಞಾನದ ಬಳಕೆಯಿಂದ ದನಕರುಗಳಿಗೆ ಬೇಕಾದ ಬೆಳೆಗಳಿಗಿಂತ ಹಣ ನೀಡುವಂತಹ ಬೆಳೆಗಳಿಗೆ ಪ್ರಾಮುಖ್ಯತೆ ನೀಡುತ್ತಿರುವುದರಿಂದ ದನಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಜೋಳ, ಶೇಂಗಾ, ಗೋದಿ, ಸಜ್ಜೆ, ತೊಗರಿ, ಹೆಸರಿನಂತಹ ಮೂಲ ಆಹಾರದ ಬೆಳೆಗಳನ್ನು ಬೆಳೆಯದೇ ಈರುಳ್ಳಿ, ಕಡಲೆ, ಮೆಣಸಿನಕಾಯಿ, ಸೂರ್ಯಕಾಂತಿ, ಹತ್ತಿಯಂತಹ ಬೆಳೆಗಳನ್ನು ಬೆಳೆಯುತ್ತಿರುವುದರಿಂದ ಪ್ರಾಣಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹೀಗಾಗಿ ಜಾನುವಾರುಗಳಿಗೆ ಬೇಕಾದ ಸಮರ್ಪಕ ಮೇವು, ಹೊಟ್ಟು ಪೂರೈಸಲಾಗುತ್ತಿಲ್ಲ.  
ಮೂಲ ಸೌಕರ್ಯ ಕೊರತೆ: ಸುಮಾರು 70 ವರ್ಷಗಳಿಂದ ನಡೆಯುತ್ತಿರುವ ಈ ದನದ ಸಂತೆಗೆ ಸಮಸ್ಯೆಗಳದ್ದೇ ಚಿಂತೆ. ಮಾರುಕಟ್ಟೆಯಲ್ಲಿ ದನಗಳಿಗೆ ಸೂಕ್ತ ಆಯಕಟ್ಟಿನ ಜಾಗವಿಲ್ಲದೆ ಎಲ್ಲೆಂದರಲ್ಲಿ ಜಾನುವಾರುಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುವುದು ನರೇಗಲ್ಲ ಸಂತೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿದೆ. ಗದಗ-ಗಜೇಂದ್ರಗಡ ಮುಖ್ಯ ರಸ್ತೆಯ ಮೇಲೆ ಸಂತೆ ನಡೆಸುವುದರಿಂದ ಸೋಮವಾರದಂದು ಈ ರಸ್ತೆಯ ಮೇಲೆ ವಾಹನಗಳು ಸಂಚರಿಸುವುದು ಕಷ್ಟಕರವಾಗಿದೆ. ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ರೈತರ ಜಾನುವಾರುಗಳಿಗೆ ನೀರಿನ ಸಮಸ್ಯೆಯಿದೆ. ಇದರಿಂದ ನರೇಗಲ್ಲ ಸಂತೆ ಮಾರುಕಟ್ಟೆಗೆ ದನಗಳು ಬರುವ ಸಂಖ್ಯೆ ಇಳಿಮುಖವಾಗುತ್ತಿದೆ. ಕರ್ನಾಟಕದ ಅನೇಕ ಕಡೆಗಳಿಂದ ಬರುತ್ತಿದ್ದ ವ್ಯಾಪಾರಸ್ಥರ ಸಂಖ್ಯೆಯೂ ಕ್ಷೀಣಿಸಿದೆ.
ಈ ಹಿಂದೆ ಸೋಮವಾರ ಪ್ರಾರಂಭವಾದ ಸಂತೆಗೆ ಸಾವಿರಕ್ಕೂ ಹೆಚ್ಚು ದನಗಳು ಬರುತ್ತಿದ್ದವು. ಆದರೆ ಸದ್ಯ ಕೇವಲ 60-70 ದನಗಳು ಮಾತ್ರ ಬರುತ್ತಿವೆ. ಮುಖ್ಯವಾಗಿ ನಮ್ಮ ರೈತರು ಹಿಂದೆ ಕೃಷಿ ಮಾಡಬೇಕಾದರೆ ಎತ್ತುಗಳನ್ನು ಉಪಯೋಗಿಸಿ ಕಷ್ಟಪಟ್ಟು ದುಡಿದಾಗ ಮಾತ್ರ ಉತ್ತಮ ಫಲ ದೊರೆಯುತ್ತದೆ ಎಂದು ನಂಬಿ ಕೆಲಸ ಮಾಡುತ್ತಿದ್ದರು. ಆದರೆ ಪ್ರಸಕ್ತ ದಿನಗಳಲ್ಲಿ ಕಷ್ಟಪಟ್ಟು ದುಡಿಯುವಂತಹ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ.
ಆಧುನಿಕತೆಗೆ ಮಾರು ಹೊದ ರೈತ: ಇಂದಿನ ರೈತರು ಆಧುನಿಕತೆಗೆ ಮಾರುಹೋಗಿದ್ದಾರೆ. ನಮ್ಮ ಪೂರ್ವಿಕರು ಮಾಡುತ್ತಿದ್ದ ಕೃಷಿಪದ್ಧತಿ ಕಷ್ಟಕರವಾಗಿರುವುದರಿಂದ ಈ ಹಿಂದಿನ ಕೃಷಿ ಪದ್ಧತಿ ಅಳಿವಿನಂಚಿನಲ್ಲಿದೆ. ಮನೆಯಲ್ಲಿರುವ ದನಕರುಗಳನ್ನು ಮಾರುವುದಷ್ಟೇ ಅಲ್ಲದೇ ಆಧುನಿಕತೆಯ ಕೃಷಿ ಪದ್ಧತಿಗೆ ಮಾರು ಹೋಗಿ ಜಮೀನಿನ ಫಲವತ್ತತೆಯನ್ನು ಹಾಳು ಮಾಡಲಾಗುತ್ತಿದೆ. ಹೆಚ್ಚಾಗಿ ಇಂದಿನ ರೈತರು ಯಂತ್ರೋಪಕರಣಗಳ ಮೂಲಕ ಕೃಷಿ ಕಾರ್ಯ ಮಾಡುವತ್ತ ಮುಂದಾಗಿದ್ದಾರೆ. ಇದರಿಂದ ಎತ್ತುಗಳ ಬೇಡಿಕೆ ಕ್ಷೀಣಿಸುತ್ತಿದೆ.
ಸಂಚಾರಿಗಳ ಪರದಾಟ: ಗದಗ-ಗಜೇಂದ್ರಗಡದ ಮುಖ್ಯರಸ್ತೆ ಪ್ರಮುಖವಾಗಿ ದೂರದ ಎಲ್ಲ ಸ್ಥಳಗಳಿಗೂ ಪ್ರಯಾಣಿಸಲಿರುವ ಪ್ರಮುಖ ರಸ್ತೆಯಾಗಿದೆ. ಈ ರಸ್ತೆಯ ಮೇಲೆಯೇ ಸಂತೆ ನಡೆಯುತ್ತಿರುವುದರಿಂದ ವಾಹನ ಸವಾರರು, ಪ್ರಯಾಣಿಕರು ಸಂತೆಯ ದಿನ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಬೇರೆಡೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ, ಮಾರುಕಟ್ಟೆಯನ್ನು ನಿರ್ಮಿಸಿಕೊಟ್ಟಲ್ಲಿ ಅನುಕೂಲವಾಗುತ್ತದೆ ಎನ್ನುವುದು ಪ್ರಯಾಣಿಕರ, ವಾಹನ ಚಾಲಕರ ಹಾಗೂ ಸಾರ್ವಜನಿಕರ ಆಶಯವಾಗಿದೆ.
- ನಿಂಗರಾಜ ಬೇವಿನಕಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement