ಇಂದು ಕಾರ್ಯಾಗಾರ
ಗದಗ: ಜಿಲ್ಲೆಯ ಎಲ್ಲ ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷರುಗಳಿಗೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಜನ ಯೋಜನೆ ತಯಾರಿಸುವ ಕುರಿತು ಅ. 9ರಂದು ಬೆಳಗ್ಗೆ 10 ಗಂಟೆಗೆ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ 1 ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ಜಿಪಂ ಸಿಇಒ ವೀರಣ್ಣ ತುರಮರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಅಥ್ಲೆಟಿಕ್ಸ್ ಕ್ರೀಡಾಕೂಟ
ಗದಗ: ಪಪೂ ಶಿಕ್ಷಣ ಇಲಾಖೆ ಹಾಗೂ ಜ. ಶಿವಾನಂದ ಪಪೂ ವಿಜ್ಞಾನ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲಾ ಪಪೂ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಅ. 9ರ ಬೆಳಗ್ಗೆ 9.30ಕ್ಕೆ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಅತಿಥಿಗಳಾಗಿ ಸಂಸದರು, ಶಾಸಕರು, ಜಿಪಂ ಅಧ್ಯಕ್ಷರು, ಜ. ಶಿವಾನಂದ ವಿದ್ಯಾವರ್ಧಕ ಸಂಸ್ಥೆಯ ಚೇರಮನ್‌ರು, ಗೌರವ ಕಾರ್ಯದರ್ಶಿಗಳು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
13ರಂದು ನಂದಾದೀಪಆರಾಧನೆ, ಸನ್ಮಾನ
ಲಕ್ಷ್ಮೇಶ್ವರ: ಪ್ರತಿ ವರ್ಷದಂತೆ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ವತಿಯಿಂದ ನಡೆಯುವ ನಂದಾ ದೀಪಾರಾಧನೆಯನ್ನು ಅ. 13ರ ಆಯುಧ ಪೂಜೆಯಂದು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಲಿಂಬಯ್ಯಲಿಂಬಯ್ಯಸ್ವಾಮಿಮಠ ತಿಳಿಸಿದರು. ಅವರು ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಪ್ರತಿಭಾ ಪ್ರತಿಷ್ಠಾನವು ಪ್ರತಿ ವರ್ಷದಂತೆ ಈ ವರ್ಷವು ನವರಾತ್ರಿ ಉತ್ಸವದ ಅಂಗವಾಗಿ ಅ. 13ರ ಸಂಜೆ 7 ಗಂಟೆಗೆ ನಂದಾ ದೀಪಾರಾಧನೆ ಕಾರ್ಯಕ್ರಮ ಹಾಗೂ ಹಲವು ಸಮಾಜಮುಖಿ ಸಾಧಕ ಮಹನೀಯರನ್ನು ಹಾಗೂ ಗಣ್ಯರ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಪ್ರತಿಷ್ಠಾನದ ಅಧ್ಯಕ್ಷ ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಕಾರ್ಯದರ್ಶಿ ಈರಯ್ಯ ಹೊಸಮಠ, ಧರ್ಮದರ್ಶಿ ಡಾ. ವೈ.ಎಫ್. ಹಂಜಿ, ಬಸಣ್ಣ ಗಾಂಜಿ, ಶಂಕರ ಕೋಳಿವಾಡ, ಶಾಂತರಾಜ ಓದಾನವರ, ವಸಂತ ಪಾಟೀಲ ಕುಲಕರ್ಣಿ, ಆನಂದ ಗಡ್ಡದೇವರಮಠ, ಪರಮೇಶ್ವರ ಲಮಾಣಿ, ವೀರಣ್ಣ ಹಾವಣ್ಣವರ ಮುಂತಾದವರು ಹಾಜರಿದ್ದರು.
ಕಾಲುವೆಗೆ ಬಿದ್ದು ಬಾಲಕ ಸಾವು
ನರಗುಂದ: ಪಟ್ಟಣದ ಸೋಮಾಪುರ ಭಾಗದಲ್ಲಿರುವ ಕಾಲುವೆಗೆ ಈಜಲು ಹೋಗಿದ್ದ ಬಾಲಕನೋರ್ವ ಬಿದ್ದು ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಮೃತ ಬಾಲಕನನ್ನು ರಾಮಕೃಷ್ಣ ಜಾಧವ (10) ಎಂದು ಗುರುತಿಸಲಾಗಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.