ತೋಟಗಾರಿಕಾ ಬೆಳೆ ಬೆಳೆಯಿರಿ
ಶಿರಹಟ್ಟಿ: ಮಳೆಯಿಂದ ಬಿದ್ದ ನೀರನ್ನು ಸಂಗ್ರಹಿಸಲು ರೈತರು ತಮ್ಮ ಹೊಲಗಳಲ್ಲಿ ಚೌಕ ಮಡಿಗಳನ್ನು ನಿರ್ಮಿಸಿಕೊಳ್ಳಬೇಕು. ಮಣ್ಣಿನ ಗುಣಧರ್ಮ ಅರಿತು, ಹೆಚ್ಚು ಇಳುವರಿ ಪಡೆದು ಮಾರುಕಟ್ಟೆಗೆ ಅನುಗುಣವಾಗಿ ರೈತರು ತೋಟಗಾರಿಕಾ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಪಟ್ಟಣದ ಸಹಾಯಕ ತೋಟಗಾರಿಕೆ ಇಲಾಖೆ ಆವರಣದಲ್ಲಿ 2013-14ನೇ ಸಾಲಿನ ರೈತರಿಗೆ ತರಬೇತಿ ಯೋಜನೆಯಡಿ ತೋಟಗಾರಿಕೆ ಬೆಳೆಗಾರರಿಗೆ, ರೈತ ಮಹಿಳೆಯರಿಗೆ ತೋಟಗಾರಿಕೆ ಬೆಳೆಗಳ ಬೇಸಾಯ ಕ್ರಮಗಳು, ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಸಾಗಾಣಿಕೆ ಹಾಗೂ ಹೊಸ ತಾಂತ್ರಿಕತೆಗಳ ಕುರಿತು ಮಂಗಳವಾರದಂದು ನಡೆದ ಕಾರ್ಯಕ್ರಮವನ್ನು ಸಸಿಗಳಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿದೇಶದ ತಾಂತ್ರಿಕ ಕೃಷಿ ಅಳವಡಿಸಿಕೊಂಡು ಇಂದು ನಾವು ಸಾವಯವ ಕೃಷಿಯನ್ನು ಮರೆಯುತ್ತಿದ್ದೇವೆ. ಭಾರತದಲ್ಲಿ ಹೆಚ್ಚಿನ ಸಂಪನ್ಮೂಲ ಶಕ್ತಿಯಿದ್ದು, ಅದು ಸದ್ಬಳಕೆಯಾಗಬೇಕು. ಜಾಗತಿಕ ಮಟ್ಟದಲ್ಲಿ ಕೃಷಿ ಮೂಲಕ ಭಾರತೀಯ ಸ್ಥಾನಮಾನ ಹೆಚ್ಚಿಸಲು ರೈತರ ಶ್ರಮದ ಅಗತ್ಯತೆಯಿದೆ. ಭೂಮಿಯ ಫಲವತ್ತತೆ ಹೆಚ್ಚಿಸಲು ಲಘು ಪೋಷಕಾಂಶ ಪದಾರ್ಥಗಳನ್ನು ಸಿಂಪಡಿಸಬೇಕು. ಹೆಚ್ಚಿನ ಇಳುವರಿ ಪಡೆಯುವ ತಳಿಗಳನ್ನು ಉಪಯೋಗಿಸಬೇಕು ಎಂದರು. ತೋಟಗಾರಿಕೆ ಬೆಳೆಯ ಕೃಷಿ ತಜ್ಞ ಎಸ್.ಸಿ. ಹಲಗಲಿಮಠ ಮಾತನಾಡಿ, ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆ ಮಾಡಬಾರದು. ಗೋವುಗಳಿಂದ ಅನೇಕ ಪ್ರಯೋಜನಗಳಿವೆ. ಆಧುನಿಕತೆಯ ಸೋಗಿಗೆ ಅಂಟಿಕೊಂಡು ಸಾವಯವ ಕೃಷಿ ಮರೆಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಸಹಾಯಕ ತೋಟಗಾರಿಕೆ ನಿರ್ದೇಶಕ ಸುರೇಶ ಕುಂಬಾರ ಪ್ರಾಸ್ತಾವಿಕ ಮಾತನಾಡಿದರು. ತಾಪಂ ಅಧ್ಯಕ್ಷೆ ಸುನಂದಾ ಬಿದರಳ್ಳಿ, ಉಪಾಧ್ಯಕ್ಷೆ ಶಾರದಾ ಕವಲೂರ, ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆಪ್ಪ ವರ್ದಿ, ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ, ತಾಪಂ ಸದಸ್ಯ ಚನ್ನಪ್ಪ ಜಗಲಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ, ಬಸವರಾಜ ನಾವಿ, ಪ್ರಗತಿಪರ ರೈತ ದೇವೆಂದ್ರಪ್ಪ ಗೋಣೆಪ್ಪನವರ, ನಿಂಗನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.