ಮಧ್ಯಸ್ಥಿಕೆ ಯೋಜನೆ ಸಹಕಾರಿ
ಗದಗ: ಮನುಷ್ಯ ದ್ವೇಷದಿಂದ, ಸಿಟ್ಟಿನ ಭರದಲ್ಲಿ ಸಣ್ಣ ಪುಟ್ಟ ಕಾರಣಕ್ಕೆ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದಾಗ ಅದನ್ನು ಸಾಧ್ಯವಾದಷ್ಟು ಬೇಗನೆ ಇತ್ಯರ್ಥಪಡಿಸಲು ಹಾಗೂ ಉಭಯ ಪಕ್ಷಗಾರರು ಮೊದಲಿನಂತೆ ಸ್ನೇಹದಿಂದ ಇರಲು ಮಧ್ಯಸ್ಥಿಕೆ ಯೋಜನೆ ಸಹಕಾರಿಯಾಗಲಿದೆ ಎಂದು ಗದುಗಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರಿ ಅಧ್ಯಕ್ಷ ಅಂಬಾದಾಸ ಕುಲಕರ್ಣಿ ಹೇಳಿದರು. ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಗದಗ ಇವರ ಸಂಯುಕ್ತಾಶ್ರಯದಲ್ಲಿ ಈಚೆಗೆ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಗಾಂಧಿ ಜಯಂತಿ, ಹಿರಿಯ ನಾಗರಿಕರ ದಿನಾಚರಣೆ ಹಾಗೂ ಪೆನಲ್ ವಕೀಲರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಾತ್ಮಾಗಾಂಧೀಜಿಯವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಅವರ ಜಯಂತಿ ಆಚರಿಸಿದ್ದು ಸಾರ್ಥಕವೆನಿಸುತ್ತದೆ. ಹಾಗೂ ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು. ಅವರ ಹಕ್ಕುಗಳನ್ನು ರಕ್ಷಿಸುವ ಹೊಣೆ ಪ್ರತಿಯೊಬ್ಬರದ್ದಾಗಿದೆ. ಪೆನಲ್ ವಕೀಲರು ದಿವಾಣಿ ಹಾಗೂ ಫೌಜದಾರಿ ಪ್ರಕರಣಗಳ ಕುರಿತು ವಿಶೇಷ ಅಧ್ಯಯನ ಮಾಡಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಪುಂಡಲಿಕ ಹೊಸಮನಿ ಮಾತನಾಡಿದರು. ಉಪನ್ಯಾಸಕರಾಗಿ ಆಗಮಿಸಿದ್ದ ಬಿ.ಎ. ಗೂಳರಡ್ಡಿ ಮಧ್ಯಸ್ಥಿಕೆ ಪ್ರಕ್ರಿಯೆ ಕುರಿತು ಹಾಗೂ ಹಿರಿಯ ನಾಗರಿಕರ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ಬಿ.ಎಂ. ಕುಕನೂರ ಸ್ವಾಗತಿಸಿ, ವಂದಿಸಿದರು.
--