ಶಿರೋಳದಲ್ಲಿ ವಿಭಿನ್ನ ಎನ್ನೆಸ್ಸೆಸ್ ಶಿಬಿರ
ಮುಂಡರಗಿ: ಪ್ರಸ್ತುತ ದಿನಗಳಲ್ಲಿ ಪಪೂ ಹಾಗೂ ಪದವಿ ಕಾಲೇಜುಗಳ ವತಿಯಿಂದ ಜರುಗುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಗಳು ಕೇವಲ ಕಾಟಾಚಾರಕ್ಕಾಗಿ ಮಾತ್ರ ನಡೆಯುತ್ತಿವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ, ಇದರ ಮಧ್ಯೆಯೇ ಮುಂಡರಗಿ ಜ.ಅ. ವಿದ್ಯಾ ಸಮಿತಿಯ ಜ. ಅನ್ನದಾನೀಶ್ವರ ಪಪೂ ಕಾಲೇಜಿನ ಎನ್ಎಸ್ಎಸ್ ಬಳಗವು ದತ್ತು ಗ್ರಾಮ ಶಿರೋಳದಲ್ಲಿ ಜರುಗುತ್ತಿರುವ ಶಿಬಿರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಈ ಕಾರ್ಯಕ್ರಮಕ್ಕೆ ಹೊಸ ಮೆರಗು ತಂದು ಕೊಟ್ಟಿದೆ.
ಶಿಬಿರದಲ್ಲೇನಿದೆ ವಿಶೇಷ ?: ಶಿರೋಳ ಗ್ರಾಮದಲ್ಲಿ ಜರುಗುತ್ತಿರುವ ಎನ್.ಎಸ್.ಎಸ್. ಶಿಬಿರದಲ್ಲಿ ಮಂಗಳವಾರ ಬೆಳಗ್ಗೆ ಶಾಸಕ ರಾಮಕೃಷ್ಣ ದೊಡ್ಡಮನಿ ನೇತೃತ್ವದಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಕಾರ್ಮಿಕರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಾರ್ಮಿಕರು, ಸರ್ಕಾರಿ ಐಟಿಐ ಕಾಲೇಜು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ, ವಿವೇಕ ಜಾಗೃತಿ ಬಳಗದ ಸಂಚಾಲಕರು, ಬಸವ ಜಾಗೃತಿ ಫೌಂಡೇಶನ್ ಸಂಚಾಲಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಪಶು ಇಲಾಖೆ, ಸುಜಲಾನ್, ಸರ್ಕಾರಿ ಆಯುಷ್ಯ ಇಲಾಖೆ ಇವುಗಳೆಲ್ಲವನ್ನು ಸೇರಿಸಿ ಆಯಾ ಇಲಾಖೆಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಗ್ರಾಮದಲ್ಲಿ ಮಾಡಲಾಗಿದೆ.
ಸರ್ಕಾರಿ ಐಟಿಐ ಕಾಲೇಜಿನ ಸುಮಾರು 35 ರಿಂದ 40 ವಿದ್ಯಾರ್ಥಿಗಳು ಗ್ರಾಮದ ಪ್ರತಿ ಮನೆಗಳಿಗೆ ಭೇಟಿ ನೀಡಿ ದುರಸ್ತಿಯಲ್ಲಿರುವ ಫ್ಯಾನ್, ಮಿಕ್ಸರ್, ಲೈಟ್ಗಳನ್ನು ಸ್ಥಳದಲ್ಲಿಯೇ ಉಚಿತವಾಗಿ ದುರಸ್ತಿ ಮಾಡಿ ಕೊಟ್ಟರು. ಪುರಸಭೆ ಸಿಬ್ಬಂದಿ ಗ್ರಾಮದ ಪ್ರತಿಯೊಂದು ಗಟಾರ್ಗಳನ್ನು ಸ್ವಚ್ಛಗೊಳಿಸಿದರು. ಅರಣ್ಯ ಇಲಾಖೆಯವರು ಅಲ್ಲಲ್ಲಿ ಗಿಡಗಳನ್ನು ನೆಟ್ಟರು. ವಿವೇಕ ಜಾಗೃತಿ ಬಳಗ, ಬಸವ ಜಾಗೃತಿ ಫೌಂಡೇಶನ್ ಹಾಗೂ ಎನ್.ಎಸ್.ಎಸ್. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಗ್ರಾಮದಲ್ಲಿ ಕಸ ಹೊಡೆದು ಸ್ವಚ್ಛಗೊಳಿಸಲಾಯಿತು. ವಿವೇಕ ಜಾಗೃತ ಬಳಗದ ಸಂಚಾಲಕರು ಹಾಗೂ ಆಯುರ್ವೇದ ವೈದ್ಯರಾದ ಡಾ. ಪಿ.ಬಿ. ಹಿರೇಗೌಡ್ರ ಅವರಿಂದ ರೋಗಿಗಳ ತಪಾಸಣೆ ಹಾಗೂ ಡಾ. ಎಸ್.ವಿ.ತಿಗರಿಮಠ ಅವರಿಂದ ಜಾನುವಾರುಗಳ ತಪಾಸಣೆ ಜರುಗಿತು. ಗ್ರಾಮದಲ್ಲಿ ಅ. 5ರಿಂದ ಶಿಬಿರ ಪ್ರಾರಂಭಗೊಂಡಿದ್ದು, ಮಂಗಳವಾರದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಹುತೇಕ ಗ್ರಾಮದ ಎಲ್ಲ ಹಿರಿಯರೂ ಹಾಗೂ ಪುರಸಭೆಯ ಬಹುತೇಕ ಸದಸ್ಯರು ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
- ಶರಣು ಸೊಲಗಿ