ಸಾಧನೆಯಿಂದ ಜೀವನ ಸಾರ್ಥಕ: ದಂಡಿನ
ಕನ್ನಡಪ್ರಭ ವಾರ್ತೆ, ಗದಗ, ಅ. 8
ಶಿಸ್ತು, ಸಂಯಮ, ಸಹಬಾಳ್ವೆಯಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಪ್ರತಿಯೊಬ್ಬರೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ರವಿ ದಂಡಿನ ಹೇಳಿದರು.
ತಾಲೂಕಿನ ನರಸಾಪುರದಲ್ಲಿ ಈಚೆಗೆ ಕೆ.ಎಸ್.ಎಸ್. ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕವಿವಿ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ. ಡಿ.ಜಿ. ಹಾಜವಗೋಳ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, 4 ಗೋಡೆಗಳ ಮಧ್ಯೆ ಕಲಿಯುವುದಕ್ಕಿಂತ ಅನುಭವದ ಮೂಲಕ ಕಲಿಯುವ ಶಿಕ್ಷಣವು ಜೀವನ ಪಾಠವನ್ನು ಕಲಿಸುತ್ತದೆ. ಪ್ರಯತ್ನದಲ್ಲಿ ಪರಮಾತ್ಮನನ್ನು ಕಾಣುವ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು. ಇಂತಹ ಶಿಬಿರಗಳು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಾಯಕಾರಿಯಾಗಿದೆ ಎಂದರು.
ಮಹಾವಿದ್ಯಾಲಯದ ಪ್ರಾ. ಎಂ.ಎನ್. ಕಾಮನಹಳ್ಳಿ ಹಾಗೂ ಅತಿಥಿಗಳಾಗಿ ಆಗಮಿಸಿದ ಡಾ. ಸಿದ್ಧಣ್ಣ ಜಕಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಾನಪದ ಕಲಾವಿದ ಯಲ್ಲಪ್ಪ ಡೊಕ್ಕೆಣ್ಣವರ ಇವರಿಂದ ಸುಡಗಾಡ ಸಿದ್ಧರ ಕಲೆಯ ಪ್ರದರ್ಶನ ಜರುಗಿತು. ಕೆ.ಸಿ. ಹಿರೇಮಠ, ಕೆ.ಎಸ್. ಕಳಕಣ್ಣವರ, ವಿ.ಐ. ಕುರಿ, ಬಿ.ಬಿ.ಬಿಂಗಿ, ಶಂಕರ ಕಾಕಿ, ಡಿ.ಎಚ್. ಹಜಾರೆ, ಎಚ್.ಎಂ. ಮುನಿಸೊಣ್ಣೆಗೌಡ, ಜಿ.ಸಿ. ಜಂಪಣ್ಣವರ, ಎಂ.ಬಿ. ಹಳ್ಳಿ, ಎಸ್.ವೈ. ವಾಳದ, ಎಸ್.ಎಸ್. ವಾಸನದ ಮುಂತಾದವರು ಉಪಸ್ಥಿತರಿದ್ದರು. ವಿ.ವೈ. ಕಮ್ಮಾರ ಪ್ರಾರ್ಥಿಸಿದರು. ಎನ್.ಎಸ್.ಎಸ್. ಅಧಿಕಾರಿ ಡಾ. ಎನ್.ಎಂ. ಅಂಬಲಿಯವರ ಸ್ವಾಗತಿಸಿ, ನಿರೂಪಿಸಿದರು. ಡಾ. ಎನ್.ಬಿ. ಸಂಗಳದ ವಂದಿಸಿದರು.
--
ಗುರು ಪರಂಪರೆಗೆ ಗೌರವ ಇರಲಿ: ಭಾಗ್ಯಲಕ್ಷ್ಮೀ
ಮುಂಡರಗಿ: ನಮ್ಮ ಸಂಸ್ಕೃತಿಯಲ್ಲಿ ಗುರು ಪರಂಪರೆಗೆ ಒಂದು ವಿಶಿಷ್ಟ ಸ್ಥಾನವಿದ್ದು, ಅದನ್ನು ನಾವು ಹಗುರವಾಗಿ ಕಾಣಬಾರದು ಎಂದು ಭಾಗ್ಯಲಕ್ಷ್ಮೀ ಬಿಳಿಮಗ್ಗದ ಹೇಳಿದರು.
ತಾಲೂಕಿನ ಸಿಂಗಟಾಲೂರಿನಲ್ಲಿ ಮಹಾನವಮಿ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಕಲಕೇರಿ-ವಿರೂಪಾಪುರ ಮಠದ ಮದುಕೇಶ್ವರ ಶಿವಾಚಾರ್ಯರು ಮಾತನಾಡಿ, ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಹಲವಾರು ಧರ್ಮಗಳ ಜನರು ಒಂದೇ ಸೂರಿನಡಿಯಲ್ಲಿ ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದಾರೆ. ಭಾರತೀಯ ಜನ ಜೀವನಕ್ಕೂ ಧರ್ಮಕ್ಕೂ ಅವಿನಾಭಾವ ಸಂಬಂಧವಿದೆ. ಆದ್ದರಿಂದ ವಿಜ್ಞಾನ ಮತ್ತು ವೈಚಾರಿಕತೆ ನೆಪದಲ್ಲಿ ನಾವೆಲ್ಲ ನಮ್ಮ ಆಚಾರ, ವಿಚಾರ, ಸಂಪ್ರದಾಯ, ಪರಂಪರೆ, ಸಂಸ್ಕೃತಿಗಳನ್ನು ಮರೆಯಬಾರದು ಎಂದರು.
ತಂಗೋಡದ ಸೋಮನಾಥ ಗವಾಯಿ ಸಂಗೀತ ಸೇವೆ ನಡೆಸಿಕೊಟ್ಟರು. ಗ್ರಾಮದ ಹಾಲಪ್ಪ ಗಣಾಚಾರಿ ಹಾಗೂ ಕುಟುಂಬದವರು ಭಕ್ತಿ ಸೇವೆ ವಹಿಸಿಕೊಂಡಿದ್ದರು. ಸಿದ್ಧರಾಮಯ್ಯ ಹಿರೇಮಠ, ವಿಶ್ವನಾಥ ಹಿರೇಮಠ ಉಪಸ್ಥಿತರಿದ್ದರು. ಫಕ್ಕಿರಡ್ಡಿ ನೀರಲಗಿ ಸ್ವಾಗತಿಸಿದರು. ಕಾಶೀನಾಥ ಬಿಳಿಮಗ್ಗದ ನಿರೂಪಿಸಿ, ವಂದಿಸಿದರು.