ಸಾಮೂಹಿಕ ವಿವಾಹಕ್ಕೆ ಭರದ ಸಿದ್ಧತೆ
ಗದಗ: ಇಂದಿನ ದುಬಾರಿ ದಿನಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಮದುವೆ ಮಾಡುವುದೆಂದರೆ ಕಷ್ಟಕರ ಕಾರ್ಯವಾಗಿ ಪರಿಣಮಿಸಿದೆ. ಇಂತವರಿಗೆ ಅನುಕೂಲವಾಗಲು, ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹಗಳ ಇಂದು ಅತ್ಯವಶ್ಯಕವಾಗಿದ್ದು, ಕಳೆದ 6 ವರ್ಷದಿಂದ ನಗರದಲ್ಲಿ ಶ್ರೀರಾಮುಲು ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾಗುತ್ತಿರುವ ಬೃಹತ್ ಸಾಮೂಹಿಕ ವಿವಾಹ ಸಾವಿರಾರು ಬಡ ಕುಟುಂಬಗಳಿಗೆ ನೆರವಾಗಿದೆ.
ಈ ಬಾರಿಯೂ ಅ. 23 ರಂದು 561 ಜೋಡಿಯ ಸರ್ವಧರ್ಮ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ ನಗರದ ವಿದ್ಯಾದಾನ ಸಮಿತಿಯ ಮೈದಾನವು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಈ ವಿವಾಹದಲ್ಲಿ ಸರ್ವಧರ್ಮೀಯರ ಸಾಮೂಹಿಕ ವಿವಾಹ ಜರುಗುವುದು ವಿಶೇಷ. 2007ರಲ್ಲಿ 650, 2008ರಲ್ಲಿ 2001, 2009ರಲ್ಲಿ 1800, 2010ರಲ್ಲಿ 1001, 2011ರಲ್ಲಿ 751, 2012 ರಲ್ಲಿ 800 ಜೋಡಿಯಂತೆ ಕಳೆದ 6 ವರ್ಷದಲ್ಲಿ ಒಟ್ಟು 7003 ಜೋಡಿಗಳು ನವ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಮೂಲಕ ಇಷ್ಟೊಂದು ಜೋಡಿಗೆ ಕಂಕಣ ಭಾಗ್ಯದ ವೇದಿಕೆ ಕಲ್ಪಿಸಿಕೊಟ್ಟ ಶ್ರೀರಾಮುಲು ಅಭಿಮಾನಿ ಬಳಗದ ಕಾರ್ಯ ಶ್ಲಾಘನೀಯ.
3 ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆ: ಈ ವರ್ಷವೂ ಅದ್ಧೂರಿಯಗಿ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಬಡ ಕುಟುಂಬಗಳ ನೆರವಿಗೆ ಶ್ರೀರಾಮುಲು ಅಭಿಮಾನಿ ಬಳಗ ಮುಂದಾಗಿದೆ. ಬಾಲ್ಯ ವಿವಾಹ ತಡೆಗಟ್ಟುವ ಉದ್ದೇಶದಿಂದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪರಿಶೀಲಿಸಿದ ಅರ್ಹರಿರುವ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ತಹಸೀಲ್ದಾರ್ ಅನುಮತಿ ಕೊಟ್ಟಿರುವ ಜೋಡಿಗಳನ್ನು ಮಾತ್ರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹ ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ವಧು-ವರರು ಸಾಮೂಹಿಕ ವಿವಾಹದಲ್ಲಿ ಹೆಸರು ನೋಂದಾಯಿಸಿದ್ದಾರೆ. ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 3 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಬೃಹತ್ ವೇದಿಕೆ ನಿರ್ಮಾಣ: ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಸುಮಾರು 1 ಲಕ್ಷ ಚದರ ಅಡಿಯಲ್ಲಿ ಸುಸಜ್ಜಿತ ಪೆಂಡಾಲ್ ಹಾಕುವ ಕಾರ್ಯ ಭರದಿಂದ ಸಾಗಿದೆ. ಅಲ್ಲದೆ ದೂರದ ಊರಿನಿಂದ ಬರುವ ವಧು-ವರರಿಗೆ ಮತ್ತು ಪಾಲಕರಿಗೆ ನಗರದ ಎಪಿಎಂಸಿಯಲ್ಲಿರುವ ಕೆ.ಎಚ್. ಪಾಟೀಲ ಸಭಾಭವನದ ಮುಂಭಾಗದಲ್ಲಿ ಮತ್ತು ಎಪಿಎಂಸಿ ದಲಾಲರ ಅಂಗಡಿಗಳಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗತ್ತಿದೆ. 4 ಕಡೆಗಳಲ್ಲಿ ವ್ಯವಸ್ಥಿತ ಊಟದ ವ್ಯವಸ್ಥೆ ಕಲ್ಪಿಸಲು ತಯಾರಿ ನಡೆದಿದೆ. ಊಟದ ವ್ಯವಸ್ಥೆಗಾಗಿ 150 ಕ್ವಿಂಟಲ್ ಬುಂದೆ, 225 ಕ್ವಿಂಟಲ್ ಅಕ್ಕಿಯ ಅನ್ನ ಮತ್ತು ಉಪ್ಪಿನಕಾಯಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
- ಅಜೀಜಅಹ್ಮದ ಬಳಗಾನೂರ