ಬೆಣ್ಣಿಹಳ್ಳಕ್ಕೆ ಕಾಲುವೆ ನೀರು
ನರಗುಂದ: ಗದಗ ಜಿಲ್ಲೆಯಲ್ಲಿಯೇ ಕಾಲುವೆ ನೀರಾವರಿ ಹೊಂದಿರುವ ಏಕೈಕ ತಾಲೂಕು ಎನ್ನುವ ಹೆಗ್ಗಳಿಕೆಯನ್ನು ಹೊಂದಿರುವ ನರಗುಂದ ತಾಲೂಕಿನ ರೈತರಿಗೆ ನೀರಾವರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆ ಇದ್ದೂ ಇಲ್ಲದಂತಾಗಿದೆ.
ಜಲಾಶಯದಿಂದ ನೀರು ಬಿಟ್ಟಿದ್ದರೂ ಅದು ರೈತರ ಜಮೀನುಗಳಿಗೆ ತಲುಪುವ ಬದಲಾಗಿ ವ್ಯರ್ಥವಾಗಿ ಬೆಣ್ಣಿಹಳ್ಳದ ಮೂಲಕ ಮತ್ತೆ ನದಿಯನ್ನೇ ಸೇರುತ್ತಿದೆ.
ತಾಲೂಕಿನ ಹಲವಾರು ಗ್ರಾಮಗಳು ಕಾಲುವೆಯ ಕೊನೆಯ ಭಾಗದಲ್ಲಿವೆ. ಕಾಲುವೆಗಳಿಗೆ ಸಾಕಷ್ಟು ನೀರು ಬಿಟ್ಟರೂ ಮೇಲಿನ ಹೊಲಗಳ ರೈತರು ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ಕೆಳಹಂತದಲ್ಲಿರುವ ರೈತರ ಹೊಲಗಳಿಗೆ ಸಮರ್ಪಕವಾಗಿ ನೀರು ಲಭ್ಯವಾಗುವುದಿಲ್ಲ. ಕಳೆದ ಹಲವಾರು ದಿನಗಳಿಂದ ಕಾಲುವೆಗೆ ನೀರು ಬಿಡಲಾಗಿದೆ. ಆದರೆ ಅದರ ಸಮರ್ಪಕ ನಿರ್ವಹಣೆ ಇಲ್ಲದೇ ಇರುವುದರಿಂದ ಮುಖ್ಯ ಕಾಲುವೆಯ ಮೂಲಕ ಅಪಾರ ಪ್ರಮಾಣದಲ್ಲಿ ಹರಿದು ಬರುವ ನೀರು ಮತ್ತೆ ಬೆಣ್ಣಿಹಳ್ಳಕ್ಕೆ ಸೇರಿ ಮುಂದೆ ಮತ್ತೆ ಮಲಪ್ರಭಾ ನದಿಯನ್ನೇ ಸೇರುತ್ತಿದೆ.
600 ಕ್ಯುಸೆಕ್ ನೀರು ವ್ಯರ್ಥ: ಮುಖ್ಯ ಹಾಗೂ ಹೊಲ ಗಾಲುವೆಗಳ ಸಮರ್ಪಕ ನಿರ್ವಹಣೆ ಇಲ್ಲದೇ ಇರುವುದರಿಂದ ರೈತರಿಗೆ ಸಿಗಬೇಕಾದ ಅಪಾರ ಪ್ರಮಾಣದ ನೀರು (600 ಕ್ಯುಸೆಕ್) ಇಂದು ಬೆಣ್ಣಿಹಳ್ಳಕ್ಕೆ ಹರಿದು ಹೋಗುತ್ತಿದೆ. ಇದನ್ನು ಕೂಡಲೇ ಪರಿಶೀಲನೆ ನಡೆಸಿ, ವ್ಯರ್ಥವಾಗುತ್ತಿರುವ ನೀರು ರೈತರಿಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ರೈತರ ಹೊಲಗಳಿಗೆ ನೀರು ಬಾರದೇ ಇದ್ದರೂ, ರೈತರು ನೀರಿನ ಕರ ಕಟ್ಟುವುದು ತಪ್ಪುವುದಿಲ್ಲ. ನೀರಾವರಿ ಸೌಲಭ್ಯ ಹೊಂದಿದ್ದರೂ ಒಣಬೇಸಾಯ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರದ ನಿರ್ಲಕ್ಷ್ಯ: ಮಲಪ್ರಭಾ ಜಲಾಶಯದ ನೀರನ್ನು ಈ ಮೊದಲು ನೀರಾವರಿ ಇಲಾಖೆಯ ಮೂಲಕ ರೈತರಿಗೆ ಕಲ್ಪಿಸಲಾಗುತ್ತಿತ್ತು. ಆದರೆ 1988-99ರಲ್ಲಿ ಆಡಳಿತ ವೆಚ್ಚ ಸುಧಾರಣೆ ಮಾಡಬೇಕೆಂದು ಆಗಿನ ಸರ್ಕಾರ ನಿರ್ಧಾರ ಮಾಡಿ, ಈ ಇಲಾಖೆಯಲ್ಲಿ ರೈತರಿಗೆ ನೀರು ತಲುಪಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಬೇರೆ ಇಲಾಖೆಗೆ ಹಾಕಿದರು. ಮುಂದೆ 2000ರಲ್ಲಿ ನೀರು ಬಳಕೆದಾರರ ಸಂಘವನ್ನು ರಚನೆ ಮಾಡಿ, 2001ರಲ್ಲಿ ಈ ನೀರಾವರಿ ಇಲಾಖೆಯನ್ನು ಕರ್ನಾಟಕ ನೀರು ಬಳಕೆದಾರರ ನಿಗಮವೆಂದು ಸರ್ಕಾರ ಮಾಡಿದ್ದರಿಂದ ಕಾಲುವೆಗಳ ಸರಿಯಾದ ನಿರ್ವಹಣೆ ಇಲ್ಲದೇ ಇರುವುದರಿಂದ ಇಂದು ಈ ಭಾಗದ ಸಾವಿರಾರು ರೈತರು ತಮ್ಮ ಜಮೀನುಗಳಿಗೆ ನೀರು ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಈ ಹಿಂದೆ ಕಾಲುವೆಗಳನ್ನು ನೀರಾವರಿ ಇಲಾಖೆ ನಿರ್ವಹಿಸುವ ಸಂದರ್ಭದಲ್ಲಿ ಪ್ರತಿ 500 ಎಕರೆಗೆ ಇಬ್ಬರು ಸಿಬ್ಬಂದಿ ಮತ್ತು ಇದನ್ನು ನೋಡಿಕೊಳ್ಳಲು ಒಬ್ಬ ಮೇಲ್ವಿಚಾರಕನನ್ನು ನೇಮಿಸಿ ತನ್ನ ವ್ಯಾಪ್ತಿಯ ಎಲ್ಲ ರೈತರಿಗೆ ನೀರು ಮುಟ್ಟಿಸುವ ಜವಾಬ್ದಾರಿಯನ್ನು ಅವನಿಗೆ ನೀಡಲಾಗುತ್ತಿತ್ತು. ಇದರಿಂದ ಅವರೆಲ್ಲ ಜವಾಬ್ದಾರಿಯಿಂದ ಕೆಲಸ ಮಾಡಿದ್ದರಿಂದ ಈ ಸಮಸ್ಯೆ ಇರಲಿಲ್ಲ. ಆದರೆ ಇಂದು ಈ ಜವಾಬ್ದಾರಿಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡಿದ್ದಾರೆ. ಇವರು ಕಾಲುವೆ ನೀರು ಪೂರೈಕೆ ಮಾಡಲು ಟೆಂಡರ್ ತೆಗೆದುಕೊಂಡ ನಂತರ ಮತ್ತೆ ಕಾಲುವೆ ಹತ್ತಿರ ಬರುವುದು ಮುಂದಿನ ವರ್ಷದ ಟೆಂಡರ್ ವೇಳೆಯಲ್ಲಿಯೇ, ಇದರಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಶಾಮೀಲಾಗಿದ್ದು, ಆಡಳಿತ ಸುಧಾರಣೆಯ ಹೆಸರಿನಲ್ಲಿ ರೈತರ ಶೋಷಣೆ ಮಾಡುತ್ತಿರುವುದು ಮಾತ್ರ ವಿಪರ್ಯಾಸ.
ಸರ್ಕಾರ ಬೇಗನೆ ಈ ಕಾಲುವೆ ನಿರ್ವಹಣೆ ಕಾರ್ಯವನ್ನು ನಿಗಮ ಅಧಿಕಾರಿಗಳಿಗೆ ವಹಿಸಬೇಕು. ಯಾವ ಪಕ್ಷದ ಆಡಳಿತ ಇರುತ್ತದೆ ಆ ಪಕ್ಷದ ಗುತ್ತಿಗೆದಾರರಿಗೆ ಈ ನೀರು ಪೂರೈಕೆ ಮಾಡುವ ಕೆಲಸ ಕೊಡುವರು. ಇದರಿಂದಾಗಿ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಬಡ ರೈತರ ಗೋಳಂತೂ ಹೇಳ ತೀರದಾಗಿದೆ. ಸಾಕಷ್ಟು ನೀರು ವ್ಯರ್ಥವಾಗುತ್ತಿದ್ದು ಈ ಕುರಿತು ಗಮನ ನೀಡಬೇಕು.
- ಯಲ್ಲಪ್ಪ ದೊಡ್ಡಮನಿ, ವಿ.ಜಿ. ಸುಂಕದ, ಬಿ.ಎಸ್. ಪಾಟೀಲ, ಎಸ್.ಎಚ್. ಗಾಣಿಗೇರ
ಕಾಲುವೆ ಕೆಳಭಾಗದಲ್ಲಿರುವ ರೈತರು
ನಾನು ಈ ಹಿಂದೆ ಇಲಾಖೆ, ನಿಗಮ ಮಾಡುವುದನ್ನು ವಿರೋಧಿಸಿದ್ದೆ. ಅದಕ್ಕೆ ಕೆಲ ರಾಜಕೀಯ ನಾಯಕರು ನನ್ನನ್ನೇ ಟೀಕೆ ಮಾಡಿದರು. ಸರ್ಕಾರಕ್ಕೆ ಈಗಲೂ ಕಾಲ ಮಿಂಚಿಲ್ಲ. ಪ್ರತಿ ವರ್ಷ ಜಲಾಶಯದ ನೀರು ರೈತರ ಜಮೀನಿಗೆ ಸಿಗದೇ ಮೇಲ್ಭಾಗದ ಕಾಲುವೆಗಳಿಂದ ವ್ಯರ್ಥವಾಗಿ ಹರಿದು ಹಳ್ಳ ಸೇರುವ ನೀರನ್ನು ನಿಯಂತ್ರಣ ಮಾಡಬೇಕೆಂದರೆ ಅದನ್ನು ನೀರಾವರಿ ನಿಗಮದ ಅಧಿಕಾರಿಗಳೇ ನಿರ್ವಹಿಸಬೇಕು.
ಸಮಿತಿ ಅಧ್ಯಕ್ಷ
-ಎಸ್.ಜಿ. ತೆಗ್ಗಿನಮನಿ