ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಭೂಮಿಗಾಗಿ ಮುಂದುವರಿದ ಧರಣಿ

Vishwanath S
Updated On : 10 Oct 2013, 10:56 am

ಗದಗ: ತಮ್ಮ ಭೂಮಿಯನ್ನು ತಮಗೆ ಮರಳಿಸಲು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೋಣದ ಭೂಮಿ ಬೇಕು ರೈತ ಆಂದೋಲನ ಸಮಿತಿ ರೈತರು ಹಮ್ಮಿಕೊಂಡ ಧರಣಿ ಸತ್ಯಾಗ್ರಹ 3ನೇ ದಿನಕ್ಕೆ ಮುಂದುವರಿದಿದೆ. ಬುಧವಾರ ಸಮಾಜ ಪರಿವರ್ತನಾ ಸಮುದಾಯದ ಯೋಜನಾಧಿಕಾರಿ ಐ.ಜಿ.ಪುಲ್ಲೆ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಐ.ಜಿ. ಪುಲ್ಲೆ 1977ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಗರೀಬಿ ಹಠಾವೋ ಕಾರ್ಯಕ್ರಮದಡಿಯಲ್ಲಿ ಹೆಚ್ಚುವರಿ ಭೂಮಿಯನ್ನು ರೋಣದ ಕೆಲ ಬಡ ಕುಟುಂಬಗಳಿಗೆ ನೀಡಲಾಗಿತ್ತು. ಆದರೆ ಈಗ ಆ ಜಮೀನಿನ ಮೂಲ ಮಾಲೀಕರ ದತ್ತು ಪುತ್ರರು ಸುಳ್ಳು ಸಾಕ್ಷಿ ಸೃಷ್ಟಿಸಿ, ಸರ್ಕಾರಕ್ಕೆ ಮೋಸ ಮಾಡಿ ರೈತರಿಗೆ ಗೊತ್ತಾಗದಂತೆ ಭೂಮಿಯನ್ನು ಕಬಳಿಸಿದ್ದಾರೆ. ಪಹಣಿಯಲ್ಲಿರುವ ರೈತರ ಹೆಸರನ್ನು ಕಡಿಮೆ ಮಾಡಿ ತಮ್ಮ ಹೆಸರು ದಾಖಲು ಮಾಡಿಕೊಂಡು ಜಮೀನನ್ನು ತಮ್ಮ ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ 37 ವರ್ಷಗಳಿಂದ ಈ ಭೂಮಿಯಲ್ಲಿ ಬೇಸಾಯ ಮಾಡುತ್ತಿರುವ ಈ ರೈತರಿಗೆ ಅನ್ಯಾಯವಾಗದಂತೆ ಜಿಲ್ಲಾಡಳಿತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಧರಣಿ ಸತ್ಯಾಗ್ರಹದಲ್ಲಿ ಬಸವರಾಜ ಧಾರವಾಡ, ರೈತ ಮುಖಂಡರಾದ ಎಂ.ಕೆ. ಹೊರಪೇಟ, ಆರ್.ಕೆ. ಕಲಾದಗಿ, ಫಕ್ಕಿರಪ್ಪ ಮಾದರ, ರಾಜಪ್ಪ ಮುದೇನಗುಡಿ, ಯಮನಪ್ಪ ಪೂಜಾರ, ಬಸಪ್ಪ ಚಲವಾದಿ, ಚನ್ನಪ್ಪ ಚಲವಾದಿ, ಹನುಮಂತಪ್ಪ ತಳವಾರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement