ಯೋಜನೆಗಳ ಸಫಲತೆಗೆ ಶ್ರಮಿಸುವೆ
ರೋಣ: ಗ್ರಾಮೀಣ ಪ್ರದೇಶದ ಜನತೆಯ ಸಮಸ್ಯೆ, ಆಶೋತ್ತರಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವುದರೊಂದಿಗೆ ಗ್ರಾಪಂ ಯೋಜನೆಗಳನ್ನು ಫಲಕಾರಿಯಾಗುವಂತೆ ಆಯಾ ಕ್ಷೇತ್ರದ ಶಾಸಕರು, ಗ್ರಾಪಂ ಸದಸ್ಯರೊಂದಿಗೆ ನಾನೂ ಶ್ರಮಿಸುವೆ ಎಂದು ವಿಪ ಸದಸ್ಯ ನಾಗರಾಜ ಛಬ್ಬಿ ಹೇಳಿದರು.
ಅವರು ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ಜಿಪಂ, ತಾಪಂ ಮತ್ತು ಗ್ರಾಪಂ ಹುಲ್ಲೂರ ಆಶ್ರಯದಲ್ಲಿ ಮಂಗಳವಾರ ಶುದ್ಧ ಕುಡಿವ ನೀರಿನ ಘಟಕ ಉದ್ಘಾಟನೆ, ವಾಲ್ಮೀಕಿ ಮತ್ತು ದುರ್ಗಾದೇವಿ ಸಮುದಾಯ ಭವನ, ಭೂಮಿ ಪೂಜೆ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ನೂತನ ಕೊಠಡಿ ಉದ್ಘಾಟನೆ ನಿಮಿತ್ತ ಜರುಗಿದ ಸಮಾರಂಭದಲ್ಲಿ ಮಾತನಾಡಿದರು.
ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಪೂರ್ವದಲ್ಲಿ ನಾನು ನೀಡಿದ ಭರವಸೆಯಂತೆ ನಡೆದು, ಗ್ರಾಮೀಣ ಭಾಗದ ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಸ್ಪಂದಿಸಿ, ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ತಲುಪುವಂತೆ ಕಾರ್ಯ ನಿರ್ವಹಿಸುತ್ತೇನೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ರಾಜ್ಯದಲ್ಲಿ ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಖಾತ್ರಿ ಯೋಜನೆಯ ಮೂಲಕ ಗ್ರಾಮಗಳ ಅಭಿವೃದ್ಧಿ ಕೈಗೊಳ್ಳಲು ಅನೇಕ ಯೋಜನೆಗಳಿವೆ. ಬಯಲು ಬಹಿರ್ದೆಸೆ ನಿರ್ಮೂಲನೆಗಾಗಿ ಸರ್ಕಾರ ಭಾರತ ನಿರ್ಮಲ ಅಭಿಯಾನ ಯೋಜನೆ ಮೂಲಕ ಬಡವರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ರು. 9200 ಸಹಾಯಧನವನ್ನು ನೀಡಿದೆ. ಜನತೆ ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ನರೇಂದ್ರ ಮೋದಿಯವರು ಗುಜರಾತನಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೋ, ಅಷ್ಟೇ ಪ್ರಮಾಣದಲ್ಲಿ ಅಮಾಯಕ ಜನರ ರಕ್ತದ ಹೊಳೆ ಹರಿಸಿದ್ದಾರೆ ಎನ್ನುವುದನ್ನು ಜನತೆ ಮರೆಯಬಾರದು. ಬಿಜೆಪಿ ಮೋದಿಯವರನ್ನು ಭವಿಷ್ಯದ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು ಹಾಸ್ಯಾಸ್ಪದವಾಗಿದೆ. ಜನತೆ ಮುಂಬರುವ ದಿನದಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು. ಹೊಳೆ ಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ ಮಾತನಾಡಿದರು. ಗುಲಗಂಜಿ ಮಠದ ಗುರುಪಾದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕ ಬಿ.ಆರ್. ಯಾವಗಲ್, ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ವಿ.ಆರ್. ಗುಡಿಸಾಗರ, ವೀರಣ್ಣ ಶೆಟ್ಟರ, ಪರಶುರಾಮಪ್ಪ ಅಳಗವಾಡಿ, ಮುತ್ತಣ್ಣ ಸಂಗಳದ, ಎಚ್.ಬಿ. ಮಾಡಳ್ಳಿ, ಸಿದ್ದು ಪಾಟೀಲ, ಬಸವರಾಜ ನವಲಗುಂದ, ಪ್ರಭು ಮೇಟಿ, ತಾಪಂ ಸದಸ್ಯ ಗಾಯತ್ರಿ ನಾಗನೂರ, ಬಸನಗೌಡ ಶಿರಗುಂಪಿ, ಜಿಪಂ ಸದಸ್ಯೆ ಶಕುಂತಲಾ ಗಾಣಿಗೇರ ಮುಂತಾದವರು ಉಪಸ್ಥಿತರಿದ್ದರು. ಮಂಜುನಾಥ ಕಡಿವಾಲ ನಿರೂಪಿಸಿದರು. ಸಂಗಪ್ಪ ಹೆರಕಲ್ ವಂದಿಸಿದರು.