ಇಂದು ವಿಶೇಷ ಉಪನ್ಯಾಸ
ಗದಗ: ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾ ಘಟಕ ಗದಗ ಇದರ ಆಶ್ರಯದಲ್ಲಿ ಸ್ಥಳೀಯ ಹೆಡ್ಪೋಸ್ಟ್ ಆಫೀಸ್ ಬಳಿ ಇರುವ ಎಕ್ಸ್ಲೆಂಟ್ ಕೋಚಿಂಗ್ ಸೆಂಟರ್ನಲ್ಲಿ ಅ. 12ರಂದು ಬೆಳಗ್ಗೆ 11 ಗಂಟೆಗೆ ಕರ್ನಾಟಕ ಏಕೀಕರಣಕ್ಕೆ ಉತ್ತರ ಕರ್ನಾಟಕದ ಕೊಡುಗೆ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಇತಿಹಾಸ ಉಪನ್ಯಾಸಕ ಎಸ್.ಎನ್. ಆದಿ ವಿಶೇಷ ಉಪನ್ಯಾಸ ನೀಡುವರು. ಜಿಲ್ಲಾ ಘಟಕದ ಅಧ್ಯಕ್ಷ ಡಾ. ವೈ.ಆರ್. ಬೇಲೇರಿ ಅಧ್ಯಕ್ಷತೆ ವಹಿಸುವರು. ರಾಜ್ಯ ಘಟಕದ ಕಾರ್ಯಕಾರಿ ಮಂಡಳಿ ಸದಸ್ಯ ಪ್ರೊ. ಗರಗ ಹಾಗೂ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ದ್ಯಾಮನಗೌಡರ ಉಪಸ್ಥಿತರಿರುವರು ಎಂದು ಪ್ರಧಾನ ಕಾರ್ಯದರ್ಶಿ ದತ್ತಪ್ರಸನ್ನ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಪಿಂಚಣಿ ಅದಾಲತ್
ನರಗುಂದ: ಪಟ್ಟಣದ ಹಳೇ ತಹಸೀಲ್ದಾರ್ ಕಾರ್ಯಲಯದಲ್ಲಿ ಅ. 12ರ ಬೆಳಗ್ಗೆ 10 ಗಂಟೆಗೆ ಪಿಂಚಣಿ ಅದಾಲತ್ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಗದಗ ವಿಭಾಗ ಅಧಿಕಾರಿಗಳು ಭಾಗವಹಿಸಲಿದ್ದು, ಅರ್ಜಿ ಸಲ್ಲಿಸುವವರು ಪಾಲ್ಗೊಳ್ಳುವಂತೆ ತಹಸೀಲ್ದಾರ್ ಬಿ.ಬಿ. ನಿಂಬಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಹುಜನ ಸಮಾಜ ಪಕ್ಷಕ್ಕೆ ನೇಮಕ
ಗದಗ: ಬಹುಜನ ಸಮಾಜ ಪಾರ್ಟಿಯ ಗದಗ ಜಿಲ್ಲಾಧ್ಯಕ್ಷರಾಗಿ ದೇವೇಂದ್ರಪ್ಪ ಕಟ್ಟಿಮನಿ ಅವರನ್ನು ನೇಮಕ ಮಾಡಲಾಗಿದೆ ಎಂದು ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾಕ್ಟರೇಟ್ ಪದವಿ
ಹೊಳೆಆಲೂರು: ಸ್ಥಳೀಯ ಕಲ್ಮೇಶ್ವರ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕ ಸಿದ್ಧಲಿಂಗಪ್ಪ ಹುರಕಡ್ಲಿಯವರಿಗೆ ಹಂಪಿ ಕವಿವಿ ಪಿಎಚ್ಡಿ ಪದವಿ ನೀಡಿದೆ. ಹಂಪಿ ಕವಿವಿ ಬುಡಕಟ್ಟು ಅಧ್ಯಯನದ ಡಾ. ಗಂಗಾಧರ ದೈವಜ್ಞ ಅವರ ಮಾರ್ಗದರ್ಶನದಲ್ಲಿ ಗೊಂದಲಿಗರು ಮತ್ತು ಆಧುನಿಕ ಮುಖಾಮುಖಿ (ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ) ಮಹಾಪ್ರಬಂಧವನ್ನು ಮಂಡಿಸಿದ್ದರು.
ರಾಜ್ಯಮಟ್ಟಕ್ಕೆ ಆಯ್ಕೆ
ರೋಣ: ತಾಲೂಕಿನ ಮುದೇನಗುಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಹನುಮಂತಪ್ಪ ನರಗುಂದ ಈಚೆಗೆ ಗದಗನಲ್ಲಿ ಜರುಗಿದ ಜಿಲ್ಲಾಮಟ್ಟದ ಕ್ರೀಡಾಕೂಟದ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಇಂದು ಎನ್ನೆಸ್ಸೆಸ್ ಶಿಬಿರದಸಮಾರೋಪ ಸಮಾರಂಭ
ಗಜೇಂದ್ರಗಡ: ಸ್ಥಳೀಯ ಎಸ್.ಎಂ. ಭೂಮರಡ್ಡಿ ಪಪೂ ಮಹಾವಿದ್ಯಾಲಯ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ದತ್ತು ಗ್ರಾಮ ವೀರಾಪುರದಲ್ಲಿ ನಡೆಯುತ್ತಿರುವ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಅ. 12ರ ಬೆಳಗ್ಗೆ 11.30 ಗಂಟೆಗೆ ಜರುಗಲಿದೆ. ಎನ್ಎಸ್ಎಸ್ ರಾಜ್ಯ ಕಮಿಟಿಯ ನಿರ್ದೇಶಕ ಡಾ. ರಾಮೇಗೌಡ, ವಿ.ಸಿ. ನಾಗರಾಜ, ಕೆ.ಬಿ. ಖಾದ್ರಿ, ನರಸಿಂಹಯ್ಯ, ಡಾ. ಧನಂಜಯ, ವಿ. ಕೃಷ್ಣ ಪರಮಾತ್ಮ, ಪಿ.ಎಸ್. ಗಿರಿರಾಜ, ಎಸ್. ಶಿವರಾಜ, ಪ್ರಾಚಾರ್ಯ ಡಾ. ಎಸ್.ಎನ್. ಶಿವರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಪಾಟೀಲ, ಎಂ.ಟಿ. ಕುಲಕರ್ಣಿ, ವೈ.ಎ. ತೋಟಗಂಟಿ, ಎ.ಬಿ. ತಹಸೀಲ್ದಾರ್, ರಾಜು ಘೋರ್ಪಡೆ, ಲಕ್ಷ್ಮಣ ಗೌಡರ ಮುಂತಾದವರು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಡಾ. ಎಸ್.ಸಿ. ನಾಯಕ ಹಾಗೂ ಡಾ. ಕಿರಣಕುಮಾರ ಅವರಿಂದ ಪಶುಗಳ ಉಚಿತ ತಪಾಸಣೆ ನಡೆಯಲಿದೆ ಎಂದು ಎನ್.ಎಸ್.ಎಸ್. ಘಟಕ ಸಂಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಉಪನ್ಯಾಸ
ಗದಗ: ನಗರದ ತಾಪಂ ಆವರಣದಲ್ಲಿರುವ ಜಿಲ್ಲಾ ಕಸಾಪ ಕಚೇರಿಯಲ್ಲಿ ಅ. 12ರ ಸಂಜೆ 6ಕ್ಕೆ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮ ಜರುಗಲಿದೆ. ಗದುಗಿನ ಹಿರಿಯ ಸಾಹಿತಿ ಬಿ.ಎಸ್. ಹಿಂಡಿ ಅವರು ಚಾಮರಸನ ಪ್ರಭುಲಿಂಗ ಲೀಲೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಶರಣಬಸವ ಕಾಶಪ್ಪನವರ ಕಾವ್ಯವಾಚನ ಮಾಡಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ ಅಧ್ಯಕ್ಷತೆ ವಹಿಸುವರು. ಕಾರಣ ಕಸಾಪ ಆಜೀವ ಸದಸ್ಯರು, ಸಾಹಿತ್ಯಾಭಿಮಾನಿಗಳು, ಮಹಿಳಾ ಸಾಹಿತಿಗಳು, ಶಾಲಾ ಕಾಲೇಜುಗಳ ಶಿಕ್ಷಕ, ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಡಾ. ಸಂಗಮೇಶ ತಮ್ಮನಗೌಡ್ರ, ಗೌರವ ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್. ತಿಳಿಸಿದ್ದಾರೆ.
ಸಮಾಲೋಚನೆ ಸಭೆ ಇಂದು
ಗದಗ: ಬಸವಾದಿ ಶಿವಶರಣರ ಬಗ್ಗೆ ಈಚೆಗೆ ಅವಹೇಳನಕಾರಿ ನಕಲಿ ಸಾಹಿತ್ಯ ಹಾಗೂ ಗ್ರಂಥಗಳನ್ನು ಪ್ರಕಟಿಸಿದ ಬಗ್ಗೆ ಚರ್ಚಿಸಲು ಸಮಾಲೋಚನಾ ಸಭೆಯನ್ನು ಅ. 12ರ ಬೆಳಗ್ಗೆ 10.30 ಗಂಟೆಗೆ ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಸರ್ವ ಸಮಾಜದ ಸಂಘಟನೆಗಳ ಸಭೆಯನ್ನು ಕರೆಯಲಾಗಿದೆ. ಕಾರಣ ಎಲ್ಲ ಸಮಾಜ ಬಾಂಧವರು ಹಾಗೂ ಅಭಿಮಾನಿಗಳು ಈ ಸಭೆಯಲ್ಲಿ ಭಾಗವಹಿಸಲು ಕೋರಿದೆ.
ಅಯ್ಯಪ್ಪ ವಾಳದ ನಿಧನ
ನರಗುಂದ: ಪಟ್ಟಣದ ಅಯ್ಯಪ್ಪ ವಾಳದ (93) ಇವರು ಶುಕ್ರವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಮೃತರಿಗೆ ನಾಲ್ವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಇದ್ದರು. ಶಾಸಕ ಬಿ.ಆರ್. ಯಾವಗಲ್, ಎಂ.ಎಸ್. ತಿಮ್ಮನಗೌಡ್ರ, ಶಂಕರಗೌಡ ಕಗಧಾಳ, ರಾಜು ಕಲಾಲ, ಪ್ರವೀಣ ಯಾವಗಲ್, ಸಂತೋಷ ಯಾವಗಲ್, ಎಫ್.ವೈ. ದೊಡಮನಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.