ತಾಪಂ ಸಭೆಗೆ ಅಧಿಕಾರಿಗಳ ಗೈರು
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಅ.11
ತಾಲೂಕಿನ ಆಡಳಿತ ವ್ಯವಸ್ಥೆ ಗಮನಿಸುತ್ತಾ ಸಾಗಿದರೆ ಎಲ್ಲೋ ಒಂದು ಕಡೆ ವಿಫಲವಾಗುತ್ತಾ ಸಾಗುತ್ತಿರುವಂತೆ ಕಾಣುತ್ತಿದೆ.
ತಾಲೂಕುಮಟ್ಟದ ಸರ್ಕಾರಿ ಇಲಾಖೆ ಹಿರಿಯ ಅಧಿಕಾರಿಗಳು ತಾಲೂಕು ಪಂಚಾಯಿತಿಯ ಸಭೆಗಳಿಗೆ ಗೈರುಹಾಜರಾಗುವ ಮೂಲಕ ಮೂಲಕ ಮತ್ತೆ ತಮ್ಮ ಹಳೆ ಚಾಳಿ ಮುಂದುವರೆಸಿದ್ದಾರೆ.
ಪ್ರತಿ ತಿಂಗಳು ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ, ಪ್ರತಿ ಮೂರು ತಿಂಗಳಿಗೊಮ್ಮೆ ಸಾಮಾನ್ಯ ಸಭೆ ತಾಲೂಕು ಪಂಚಾಯತ್‌ನಲ್ಲಿ ಜರುಗುತ್ತವೆ. ಸಭೆಗೆ ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ ತಾಪಂ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರಿಗೆ ಪ್ರಗತಿ ಕುರಿತು ಸಮಗ್ರ ಮಾಹಿತಿ ನೀಡಬೇಕು. ಆದರೆ, ಶಿರಹಟ್ಟಿ ತಾಪಂ ಸಭೆಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಅಧಿಕಾರಿ ವರ್ಗ ಕವಡೆ ಕಾಸಿನ ಕಿಮ್ಮತ್ತು ನೀಡದೆ ಬೇಕಾದಾಗ ಬಂದು ಬೇಡವಾದಾಗ ಬಿಡುವ ಚಾಳಿ ನಿರಂತರ ನಡೆದಿದೆ.
ಸದಸ್ಯರಿಂದ ತೀವ್ರ ವಿರೋಧ: 30 ತಿಂಗಳಿನಿಂದಲೂ ಇದೇ ವ್ಯವಸ್ಥೆ ಮುಂದುವರೆದಿದ್ದು, ತಾಪಂ ಸದಸ್ಯರ ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ಯಾರಿಂದ ಪಡೆಯಬೇಕು ಎಂದು ಸದಸ್ಯರೇ ಗಂಭೀರ ಚರ್ಚೆಗೆ ಮುಂದಾಗಿದ್ದಾರಲ್ಲದೆ ಶುಕ್ರವಾರ ನಡೆದ ತಾಪಂ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಮತ್ತೊಂದು ದಿನ ನಿಗದಿ ಮಾಡುವಂತೆ ಸಭೆಯಲ್ಲಿ ಅಧ್ಯಕ್ಷರಾದಿಯಾಗಿ ಸರ್ವ ಸದಸ್ಯರು ತೀವ್ರ ವಿರೋಧಿಸಿದ ಘಟನೆಯೂ ನಡೆಯಿತು.
ತಾಲೂಕಿನಲ್ಲಿ ಸುಮಾರು 28ಕ್ಕೂ ಹೆಚ್ಚು ಇಲಾಖೆಗಳು ಬರುತ್ತಿದ್ದು, ಕಡ್ಡಾಯವಾಗಿ ಸಭೆಯಲ್ಲಿ ಪಾಲ್ಗೊಳ್ಳುವ ಕುರಿತು ತಾಪಂನಿಂದ ಮೊದಲೇ ನೋಟಿಸ್ ನೀಡಿದರೂ ಅಧಿಕಾರಿಗಳು ಅದನ್ನು ದಿಕ್ಕರಿಸುತ್ತಾ, ಸಭೆಗೂ ಬಾರದೇ ಸರ್ಕಾರದಿಂದ ಬರುವ ಯೋಜನೆಗಳ ಮಹತ್ವ ವಿವರಿಸದೆ ಇರುವುದರಿಂದ ಇಲಾಖೆಯ ಯೋಜನೆಗಳು ಸಾರ್ವಜನಿಕರಿಗೆ ತಲುಪುತ್ತಿಲ್ಲ. ಪ್ರತಿ ಸಭೆಗಳಲ್ಲೂ ಅಧಿಕಾರಿಗಳು ಬಾರದಿರುವ ಕುರಿತು ಚರ್ಚೆ ನಡೆಯುತ್ತದೆ. ಆದರೆ, ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಳ್ಳುತ್ತಿಲ್ಲ.
ಸಭೆಗೆ ಮಕ್ಕಳನ್ನು ಕಳುಹಿಸುತ್ತೇವೆ: ಕೆಲವು ಅಧಿಕಾರಿಗಳು ಸಭೆಗೆ ಒಂದು ಘಂಟೆ ತಡವಾಗಿ ಆಗಮಿಸುತ್ತಾರೆ. ಕೆಲವರು ಮಧ್ಯದಲ್ಲಿಯೇ ಏನೋ ನೆಪ ಹೇಳಿ ಹೊರ ನಡೆಯುತ್ತಾರೆ. ಇದೆಲ್ಲವನ್ನು ಗಮನಿಸಿದರೆ ನಾವು (ಸದಸ್ಯರು) ನಮ್ಮ ಮಕ್ಕಳನ್ನು ಸಭೆಗೆ ಕಳುಹಿಸಿದರೆ ಸೂಕ್ತ ಎಂದು ಸದಸ್ಯರಾದ ತಿಮ್ಮರಡ್ಡಿ ಅಳವಂಡಿ, ಚನ್ನಪ್ಪ ಜಗಲಿ, ಶಿವನಗೌಡ ಕಂಠಿಗೌಡ್ರ ಹೇಳಿದರು. ಸಭೆಗೆ ಅಧಿಕಾರಿಗಳು ಬಾರದೇ ಇರುವುದರಿಂದಾಗಿ ಹಲವಾರು ವಿಷಯಗಳು ಚರ್ಚೆಯಾಗದೆ ಕಾಟಾಚಾರದ ಸಭೆಯಾದಂತಿತ್ತು. ಪ್ರತಿಯೊಂದು ಸಭೆಗಳಿಗೂ ಅಧಿಕಾರಿಗಳು ಸರಿಯಾಗಿ ಬಾರದೇ ಅನಧಿಕೃತ ಗೈರು ಹಾಜರಾಗುವುದರ ಮೂಲಕ ಸಭೆಯ ಘನತೆ, ಗೌರವ ಕಾಪಾಡುವಲ್ಲಿ ವಿಫಲವಾಗುತ್ತಿರುವ ವಿಷಯ ನನಗೂ ಬೇಸರ ತಂದಿದೆ. ಈ ಸಂಸ್ಕೃತಿ ಹಿಗೆ ಮುಂದುವರೆದರೆ ಕಠಿಣ ಕ್ರಮ ಅಗತ್ಯ. ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ ಸಭೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಮಾತನಾಡಿದ್ದು, ತಾಲೂಕಿನಲ್ಲಿರುವ ಅಧಿಕಾರಿಗಳು ಎಂತವರು ಎನ್ನುವುದಕ್ಕೆ ಸಾಕ್ಷಿ.