ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಯೋಗ: ಉ.ಕ. ಬಾಲಕ, ಬಾಲಕಿಯರ ಮೇಲುಗೈ

Vishwanath S
Updated On : 12 Oct 2013, 11:53 am

ಗದಗ: ನಗರದ ಸಿಡಿಓ ಜೈನ್ ಶಾಲೆಯಲ್ಲಿ ಶುಕ್ರವಾರ ನಡೆದ 14 ರಿಂದ 17 ವರ್ಷದ ಬಾಲಕ ಮತ್ತು ಬಾಲಕಿಯರ ಬೆಳಗಾವಿ ವಿಭಾಗ ಮಟ್ಟದ ಯೋಗ ಸ್ಪರ್ಧೆಯಲ್ಲಿ ಕಾರವಾರ ಜಿಲ್ಲೆಯ ಬಾಲಕ ಮತ್ತು ಬಾಲಕಿಯರು ಮೈಲುಗೈ ಸಾಧಿಸಿದ್ದಾರೆ.
ಯೋಗ ಸ್ಪರ್ಧೆಯಲ್ಲಿ ವೃಷಾಸನ, ಕ್ರೂರ್ಮಾಸನ, ತ್ರಿಪುರಾಸನ, ಹನುಮಾನಾಸನ, ಚಕ್ರಾಸನ, ವೃಷಿಕಾಸನ, ಹನುಮವಾಲಿ ಆಸನ ಸೇರಿದಂತೆ ಹಲವಾರು ಯೋಗ ಆಸನಗಳನ್ನು ಪ್ರದರ್ಶಿಸುವ ಮೂಲಕ ಬಾಲಕ-ಬಾಲಕಿಯರು ಗಮನಸೆಳೆದರು.
ರಾಜ್ಯಮಟ್ಟಕ್ಕೆ ಆಯ್ಕೆ: 14 ವರ್ಷದ ಬಾಲಕರ ಸ್ಪರ್ಧೆಯಲ್ಲಿ ಕಾರವಾರದ ರಘುವೀರ ನಾಯಕ, ರವಿ ನಾಯಕ, ಪ್ರಜ್ವಲ್ ನಾಯಕ, ಹರ್ಷವರ್ಧನ ಕಾರ್ವಿ, ಬಾಗಲಕೋಟೆಯ ಅಮೀರ ಪಿಂಜಾರ, ಬೆಳಗಾವಿಯ ಜೆ.ಎಸ್. ಪ್ರಭು, ಬಿಜಾಪುರದ ಶಿವನಗೌಡ ಹರನಾಳ ರಾಜ್ಯಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾದರು. 14 ವರ್ಷದ ಬಾಲಕಿಯರ ವಿಭಾಗದಲ್ಲಿ ಚಿಕ್ಕೋಡಿಯ ಪೂಜಾ ಸುನದೂಳಿ, ನಿರ್ಮಲಾ ಕೊಂಡಿಕಾರ, ಗದಗನ ಸವಿತಾ ಕುಂಬಾರ, ಕಾರವಾರದ ಸುಜಾತಾ ನಾಯಕ, ಸುಮಾಗೌಡ, ಶಿರಸಿಯ ದೀಪ್ತಿಭಟ್, ಬೆಳಗಾವಿಯ ಪ್ರೇಮಾ ಸನದಿ ವಿಭಾಗ ಮಟ್ಟದಲ್ಲಿ ಯಶಸ್ಸು ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಯಾದರು. 17 ವರ್ಷದ ಬಾಲಕರ ವಿಭಾಗದಲ್ಲಿ ಕಾರವಾರದ ಆದೇಶ ನಾಯಕ, ಮಾರುತಿ ನಾಯಕ, ಬೆಳಗಾವಿಯ ಮಲ್ಲಪ್ಪ ಕಾಮಣ್ಣವರ, ಪ್ರಶಾಂತ ಹಡಪದ, ಬಾಗಲಕೋಟೆಯ ಮಹೇಶ ದಾದ್ವಿ, ಮುತ್ತಪ್ಪ ಜಾವೂರ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಕಾರವಾರದ ಧನ್ಯ ನಾಯಕ, ಪವಿತ್ರಾ ನಾಯಕ, ಬಾಗಲಕೋಟೆಯ ಶಿಲ್ಪಾ ಅಡಗಲ್, ಅನ್ನಪೂರ್ಣ ದಂಡಿನ, ಗದಗನ ಅಕ್ಷತಾ ಕೊಣ್ಣೂರ, ಅಕ್ಷತಾ ಬನಪ್ಪಗೌಡರ, ಬೆಳಗಾವಿಯ ದೀಪಾ ಮೇಟಿ ಆಯ್ಕೆಗೊಂಡರು. ಸ್ಪರ್ಧೆಯಲ್ಲಿ ಬೆಳಗಾವಿ ವಿಭಾಗದ ಗದಗ, ಹಾವೇರಿ, ಬಿಜಾಪುರ, ಬಾಗಲಕೋಟೆ, ಬೆಳಗಾವಿ, ಕಾರವಾರ, ಚಿಕ್ಕೋಡಿ, ಶಿರಸಿ, ಧಾರವಾಡ ಜಿಲ್ಲೆಗಳಿಂದ 252 ಸ್ಪರ್ಧಾಳುಗಳು ಭಾಗವಹಿಸಿದ್ದರು.

ಯೋಗ: ಮನಸ್ಸು, ದೇಹ ಏಕೀಕರಣ
ಗದಗ:
ಯೋಗ, ವ್ಯಾಯಾಮದಿಂದ ಮನಸ್ಸು ಮತ್ತು ದೇಹದ ಏಕೀಕರಣ ಸಾಧ್ಯವಾಗಲಿದೆ ಎಂದು ಜಿಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ ಹೇಳಿದರು.
ಅವರು ಶುಕ್ರವಾರ ನಗರದ ಸಿಡಿಓ ಜೈನ್ ಪ್ರೌಢಶಾಲೆಯ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಸಹಯೋಗದಲ್ಲಿ 14 ರಿಂದ 17ರ ವಯೋವುತಿಯ ಬಾಲಕರ-ಬಾಲಕಿಯರಿಗಾಗಿ ಏರ್ಪಡಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಯೋಗ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಯೋಗ ಪದ್ಧತಿ ಭಾರತೀಯ ಸನಾತನ ಧರ್ಮದ ಮೂಲವಾಗಿದ್ದು, ಪಾಶ್ಚಿಮಾತ್ಯರ ಅನುಕರಣೆಗೆ ಬೆನ್ನುಹತ್ತಿದ ಯುವಸಮಾಜ ಸನಾತನ ಮೂಲವನ್ನು ಮರೆತಿದ್ದೇ ಇಂದಿನ ಅನಾರೋಗ್ಯಕರ ಬೆಳವಣಿಗೆಗೆ ಕಾರಣವಾಗಿದೆ. ದೇಹ ಮತ್ತು ಮನಸ್ಸು ಚಟುವಟಿಕೆಯಿಂದ ಕೂಡಿರಲು ಯೋಗ ಅವಶ್ಯಕವಾಗಿದೆ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜೀವ ನಾಯಕ್ ಮಾತನಾಡಿ, ದೈನಂದಿನ ಬದುಕಿನಲ್ಲಿ ಯೋಗ, ವ್ಯಾಯಾಮಕ್ಕೆ ಪ್ರಾಮುಖ್ಯ ನೀಡಬೇಕಿದ್ದು, ಯೋಗಾಭ್ಯಾಸದಿಂದ ದೈಹಿಕ, ಮಾನಸಿಕ ಸದೃಢತೆ ಕಾಯ್ದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಶಾಲಾ ಶಿಕ್ಷಕರಿಗೆ ಯೋಗ ಶಿಕ್ಷಣ ಕುರಿತು ತರಬೇತಿ ನೀಡಲಾಗಿದೆ. ತರಬೇತಿಯ ವಿಶೇಷತೆಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಮೂಲಕ ಯುವಪೀಳಿಗೆಯನ್ನು ಯೋಗದತ್ತ ಆಕರ್ಷಿಸುವ ಕಾರ್ಯ ಶಿಕ್ಷಕ ಸಮುದಾಯದಿಂದ ಆಗಬೇಕಿದೆ ಎಂದರು.
ತಾಪಂ ಅಧ್ಯಕ್ಷ ಹನುಮಪ್ಪ ಇಂಗಳಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗಾವಿ ವಿಭಾಗದ 9 ಜಿಲ್ಲೆಗಳಾದ ಗದಗ, ಹಾವೇರಿ, ಬಿಜಾಪುರ, ಬಾಗಲಕೋಟ, ಬೆಳಗಾವಿ, ಕಾರವಾರ, ಧಾರವಾಡ, ಚಿಕ್ಕೋಡಿ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳಿಂದ ಪ್ರತಿ ಜಿಲ್ಲೆಗಳಿಂದ 28 ವಿದ್ಯಾರ್ಥಿಗಳಂತೆ ಒಟ್ಟು 252 ವಿದ್ಯಾರ್ಥಿಗಳು ಯೋಗ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಡಿಡಿಒ ಜೈನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಚಂದ್ರಕಾಂತ ಲೋಡಾಯಾ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ. ಕೊಟಗಿ, ಎಸ್.ಎಸ್. ಹಿರೇಮಠ, ಎಸ್.ಎನ್. ಬಳ್ಳಾರಿ ಮುಂತಾದವರು ಉಪಸ್ಥಿತರಿದ್ದರು. ಕೆ.ಕೆ. ಹೂಗಾರ ಪ್ರಾರ್ಥಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜೀವ್ ನಾಯಕ ಸ್ವಾಗತಿಸಿದರು. ಎಂ.ಎಸ್. ಕುಚಲಳ್ಳಿ ನಿರೂಪಿಸಿದರು. ಎಂ.ಎಂ. ಕಲಹಾಳ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement