ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲಲಿ: ಪ್ರಮೋದ ಮುತಾಲಿಕ್
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ. ಅ. 11
ಪಟ್ಟಣದಲ್ಲಿ ಕೆಲ ದಿನಗಳ ಹಿಂದೆ ಗಣಪತಿ ವಿಸರ್ಜನೆ ವೇಳೆ ನಡೆದ ಘಟನೆಯಲ್ಲಿ ಅಮಾಯಕ ಹಿಂದೂಗಳನ್ನು ಬಂಧಿಸಿದ್ದನ್ನು ಖಂಡಿಸುತ್ತೇನೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ 32 ಕಡೆ ಈ ರೀತಿಯಾದ ಘಟನೆಗಳು ನಡೆದು ಹಿಂದುಗಳ ಮೇಲೆ ದೌರ್ಜನ್ಯ ಹಾಗೂ ಅಪಮಾನ ಮಾಡುವುದು ನಡೆದಿದೆ. ಇದಕ್ಕೆ ಕಾಂಗ್ರೆಸ್ ಕುಮ್ಮಕ್ಕು ನೀಡುವ ಕಾರ್ಯ ಮಾಡುತ್ತಿರುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ.
ಕಾಂಗ್ರೆಸ್ ಪಕ್ಷವು ಕ್ಷುಲ್ಲಕ ರಾಜಕೀಯ ಮಾಡುತ್ತ ಹಿಂದೂ-ಮುಸ್ಲಿಂರನ್ನು ಒಡೆದು ಆಳುವ ಕುತಂತ್ರ ಮಾಡುತ್ತಿದೆ. ಇಂತಹ ಕೀಳುಮಟ್ಟದ ಮತ ರಾಜಕೀಯವನ್ನು ಕಾಂಗ್ರೆಸ್ ನಿಲ್ಲಿಸಬೇಕು. ಪೊಲೀಸರು ಅಮಾಯಕ ಹಿಂದೂಗಳನ್ನು ಬಂಧಿಸುವ ಕಾರ್ಯ ನಿಲ್ಲಿಸಬೇಕು. ಇಲ್ಲವಾದಲ್ಲಿ ಶ್ರೀರಾಮ ಸೇನೆ ಗದಗ ಜಿಲ್ಲೆಯಲ್ಲಿ ಲಕ್ಷ್ಮೇಶ್ವರ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ. ಪೊಲೀಸರು ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಬಂಧಿಸಲಿ ನೋಡೋಣ ಎಂದರು.
ಲಕ್ಷ್ಮೇಶ್ವರದಲ್ಲಿ ಮುಂದಿನ ದಿನಗಳಲ್ಲಿ ಹಿಂದೂ ಸಮಾವೇಶವನ್ನು ಮಾಡಿ, ಇಲ್ಲಿನ ಜನತೆಗೆ ಹಾಗೂ ಹಿಂದೂಗಳಿಗೆ ಧೈರ್ಯ ತುಂಬುವ ಕಾರ್ಯ ಮಾಡಲಾಗುತ್ತದೆ ಎಂದರು. ನಮ್ಮ ದೇಶದ ಗೃಹ ಮಂತ್ರಿ ಸುಶೀಲ್ ಕುಮಾರ ಸಿಂಧೆ ಅಮಾಯಕ ಮುಸ್ಲಿಂರನ್ನು ಬಂಧಿಸಬಾರದು. ಅವರಿಗಾಗಿ ವಿಶೇಷ ಕೋರ್ಟ್ ಮಾಡಬೇಕು ಎಂದು ಹೇಳಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕೇವಲ ಒಂದು ಕೋಮಿನ ಜನರನ್ನು ಇನ್ನೊಂದು ಕೋಮಿನ ಜನರ ವಿರುದ್ಧ ಎತ್ತಿ ಕಟ್ಟುವ ಕಾರ್ಯ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಇದಕ್ಕೆ ಮುಂದಿನ ದಿನಗಳಲ್ಲಿ ಶ್ರೀರಾಮ ಸೇನೆ ತಕ್ಕ ಉತ್ತರ ನೀಡಲಿದೆ ಎಂದು ಹೇಳಿದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ಇಚ್ಚೆ ಹೊಂದಿದ್ದೇನೆ. ಯಾವುದಾದರೂ ಒಂದು ಕ್ಷೇತ್ರದಲ್ಲಿ ನಾನು ಚುನಾವಣೆಗೆ ನಿಲ್ಲುತ್ತೇನೆ. ನಾನು ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವುದನ್ನು ಬೆಂಬಲಿಸುತ್ತೇನೆ. ನರೇಂದ್ರ ಮೋದಿಯವರು ಈ ದೇಶದ ಮುಂದಿನ ಪ್ರಧಾನಿಯಾಗುವುದು ನಿಶ್ಚಿತ. ಅವರು ಈ ದೇಶದ ಪ್ರಧಾನಿಯಾದರೆ ನಮ್ಮ ದೇಶದ ದಾರಿದ್ರ್ಯ, ಭ್ರಷ್ಟಾಚಾರ, ಗಡಿ ಸಮಸ್ಯೆ, ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಕಡಿವಾಣ ಹಾಕಲು ಶ್ರಮಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರಾಮಣ್ಣ ರಿತ್ತಿ, ಗಣೇಶ ಬೇವಿನಮರದ, ಜಿಲ್ಲಾ ಶ್ರೀರಾಮ ಸೇನೆಯ ಅಧ್ಯಕ್ಷ ರಾಜು ಖಾನಪ್ಪನವರ, ವಿರೂಪಾಕ್ಷಗೌಡ್ರ ಹಿರೇಗೌಡರ, ಸೋಮಣ್ಣ ಮುಳಗುಂದ, ವಿ.ಎಲ್.ಪೂಜಾರ, ಮಂಜುನಾಥ ಮಾಗಡಿ, ದೇವಪ್ಪ ಕುಂಬಾರ, ಈಶ್ವರ ಕೋಣನವರ, ಬಸವರಾಜ ಹೊಗೆಸೊಪ್ಪಿನ, ಮುತ್ತು ಪೂಜಾರ ಮೊದಲಾದವರು ಹಾಜರಿದ್ದರು.