ಜಿಲ್ಲೆಯಲ್ಲಿ ದಸರೆಗೆ ಸಿದ್ಧತೆ
ಕನ್ನಡಪ್ರಭ ವಾರ್ತೆ, ಗದಗ, ಅ. 12
ನಿತ್ಯದ ಜಂಜಾಟಗಳನ್ನು ಬದಿಗಿಟ್ಟು ಅನೇಕ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜೀವನದ ಸಾರ್ಥಕತೆಗೆ ಒಂದಿಲ್ಲೊಂದು ಧಾರ್ಮಿಕ ಆಚರಣೆ, ಹಬ್ಬಗಳನ್ನು ಆಚರಿಸುತ್ತಾ ಬರಲಾಗುತ್ತಿದ್ದು, ಅ. 5ರಿಂದ ಪ್ರಾರಂಭವಾಗಿರುವ ನವರಾತ್ರಿ ಹಬ್ಬವನ್ನು ಜಿಲ್ಲೆಯ ಜನತೆ ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ.
2-3 ವರ್ಷದಿಂದ ಜಿಲ್ಲೆಯಲ್ಲಿ ಆವರಿಸಿದ್ದ ಬರ ಈ ವರ್ಷ ಕೊಂಚ ಕಡಿಮೆಯಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಜನರಲ್ಲಿ ಸಂಭ್ರಮ ಮನೆಮಾಡಿದ್ದು, ನವರಾತ್ರಿ ಹಬ್ಬವನ್ನು ಪ್ರತಿ ವರ್ಷಕ್ಕಿಂತಲೂ ಈ ಬಾರಿ ವಿಶೇಷವಾಗಿ ಆಚರಿಸಲು ಮುಂದಾಗಿದ್ದಾರೆ.
9 ದಿನಗಳಿಂದ ವಿಶೇಷ ಪೂಜೆ: ಅ. 5ರಿಂದ ಪ್ರಾರಂಭವಾಗಿರುವ ನವರಾತ್ರಿ ಕಾರ್ಯಕ್ರಮದಿಂದ ಜಿಲ್ಲೆಯಾದ್ಯಂತ ಹಬ್ಬಕ್ಕೆ ಮೆರಗು ಬಂದಿದೆ. ರೈತರು ಬಿತ್ತನೆ ಕಾರ್ಯ ಕೈಗೊಂಡು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಇನ್ನು ತಮ್ಮ ಮನೆಯಲ್ಲಿ ರೈತ ಮಹಿಳೆಯರು ಭಕ್ತಿ, ಭಾವದಿಂದ 8 ದಿನಗಳಿಂದ ಮನೆಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಾ ಬಂದಿದ್ದಾರೆ. ಹಲವು ಮಹಿಳೆಯರು 9 ದಿನಗಳ ವರೆಗೆ ಉಪವಾಸ ವ್ರತವನ್ನೂ ಕೈಗೊಂಡಿದ್ದಾರೆ. ವ್ರತ ಕೈಗೊಂಡವರು ಗ್ರಾಮದಲ್ಲಿನ ದೇವಸ್ಥಾನಗಳಿಗೆ ನಿತ್ಯ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ದೇವಸ್ಥಾನಗಳು ವಿದ್ಯುತ್ ದೀಪ, ಅಲಂಕಾರದಿಂದ ಕಂಗೊಳಿಸುತ್ತಿವೆ.
ಎಲ್ಲಲ್ಲಿ ಪೂಜೆ?: ಜಿಲ್ಲೆಯಾದ್ಯಂತ ಸಂಭ್ರಮದ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ನಗರದ ವೀರೇಶ್ವರ ಪುಣ್ಯಾಶ್ರಮ, ಅಂಬಾಭವಾನಿ ದೇವಸ್ಥಾನ, ಜಗದಂಬಾ ದೇವಸ್ಥಾನ, ವೀರನಾರಾಯಣ, ರಾಚೂಟೇಶ್ವರ ದೇವಸ್ಥಾನ, ತ್ರಿಕೂಟೇಶ್ವರ, ಅಡವೀಂದ್ರಸ್ವಾಮಿಗಳ ಮಠ, ಬೆಟಗೇರಿಯ ವೀರಭದ್ರೇಶ್ವರ ದೇವಸ್ಥಾನ, ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ, ರೋಣ ತಾಲೂಕಿನಲ್ಲಿನ ದೇವಸ್ಥಾನಗಳಲ್ಲಿ ನವರಾತ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಲಕ್ಷ್ಮೇಶ್ವರದ ಖಾನಾಪುರ ದ್ಯಾಮಮ್ಮ, ಸಣ್ಣದ್ಯಾಮಮ್ಮ, ಶ್ರೀಮಂತಗಡದ ಹೊಳಲಮ್ಮದೇವಿ, ರೋಣದ ಕಾಳಿಕಾದೇವಿ, ಶಿವಾನಂದಮಠ, ಸಿದ್ಧಾರೂಢಮಠ, ಅರಹುಣಸಿಯ ಕಾಳಿಕಾದೇವಿ, ಕೋಟುಮಚಗಿಯ ದುರ್ಗಾದೇವಿ, ದ್ಯಾಮವ್ವದೇವಿ, ಮಾರುತಿ, ಸೋಮೇಶ್ವರ, ಗಜೇಂದ್ರಗಡದ ಜಗದಂಬಾ, ಬನಶಂಕರಿ, ದುರ್ಗಾದೇವಿ, ಚೌಡೇಶ್ವರಿ, ಮುಂಡರಗಿಯ ವೆಂಕಟೇಶ್ವರ, ಅಂಬಾಭವಾನಿ, ಕಾಳಮ್ಮನ ಗುಡಿ, ಬನಶಂಕರಿ, ದ್ಯಾಮ್ಮವ್ವ, ರಾಮೇನಹಳ್ಳಿಯ ವೆಂಕಟೇಶ್ವರ, ಮುಷ್ಠಿಕೊಪ್ಪದ ವೆಂಕಟೇಶ್ವರ, ಹಾರೋಗೇರಿಯ ಸತ್ಯಮ್ಮನ ದೇವಸ್ಥಾನ ಸೇರಿದಂತೆ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿನ ದೇವಸ್ಥಾನಗಳಲ್ಲಿ ನವರಾತ್ರಿ ಹಬ್ಬವನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ.
ಇಂದು ಆಯುಧ ಪೂಜೆ: ನವರಾತ್ರಿ ಉತ್ಸವದಲ್ಲಿ ಪ್ರಾಮುಖ್ಯತೆ ಇರುವುದೇ ಈ ಆಯುಧ ಪೂಜೆಗೆ. ಈ ಹಿಂದೆ ರಾಜ-ಮಹಾರಾಜರು ತಮ್ಮಲ್ಲಿರುವ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸುತ್ತಿದ್ದರು. ಆದರೆ ಬದಲಾದ ಕಾಲದಲ್ಲಿಂದು ರೈತರು ತಮ್ಮ ಕೃಷಿ ಚಟುವಟಿಕೆಗೆ ಬಳಸುವ ಚಕ್ಕಡಿ, ಕೂರಿಗೆ, ಕುಂಟೆ, ತಾಳ, ಕುಡುಗೋಲು, ರಂಟೆಗಳನ್ನು ಪೂಜಿಸುತ್ತಾರೆ. ಇನ್ನು ಕೆಲವರು ಟ್ರ್ಯಾಕ್ಟರ್, ಬೈಕ್, ಯಂತ್ರೋಪಕರಣಗಳನ್ನು ಪೂಜಿಸುತ್ತಾರೆ.
ಬನ್ನಿ ಮುಡಿಯುವ ಕಾರ್ಯಕ್ರಮ: ನವರಾತ್ರಿಯ 10ನೇ ದಿನ (ಅ. 14) ವಿಜಯ ದಶಮಿ ಹಬ್ಬ ಆಚರಿಸಲಾಗುತ್ತದೆ. ಪಾಂಡವರು ತಮ್ಮ ಕಷ್ಟ ಕಾಲದಲ್ಲಿ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಗಿಡದಲ್ಲಿಟ್ಟಿದ್ದರು.
ಯುದ್ಧದ ಸಂದರ್ಭದಲ್ಲಿ ಇದೇ ಆಯುಧಗಳ ಮೂಲಕ ಶತ್ರುಗಳನ್ನು ಸದೆಬಡಿದು ವಿಜಯ ಸಾಧಿಸಿದ್ದರು ಎಂಬ ಉಲ್ಲೇಖವಿದೆ. ಹಾಗಾಗಿ ವಿಜಯ ದಶಮಿಯಂದು ಎಲ್ಲ ಜನರು ಪರಸ್ಪರ ಬನ್ನಿಯನ್ನು ನೀಡುವ ಮೂಲಕ ಬನ್ನಿ ತಗೊಂಡು ಬಂಗಾರಾಗಿರೋಣ ಎಂದು ಹೇಳುತ್ತಾ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.
ಘಟಸ್ಥಾಪನಾ ಕಾರ್ಯಕ್ರಮ
ಲಕ್ಷ್ಮೇಶ್ವರ: ಪಟ್ಟಣದ ಸಣ್ಣ ದ್ಯಾಮವ್ವ ದೇವಿಯ ದೇವಸ್ಥಾನದಲ್ಲಿ ದಸರಾ ಹಬ್ಬದ ಪ್ರಯುಕ್ತ ಘಟಸ್ಥಾಪನಾ ಕಾರ್ಯಕ್ರಮ ಈಚೆಗೆ ಜರುಗಿತು. ಘಟಸ್ಥಾಪನೆಯ ಅಂಗವಾಗಿ ದೇವಸ್ಥಾನದಲ್ಲಿ ಪ್ರತಿದಿನ ಸಂಜೆ ಮಹಿಳೆಯರು 1008 ಲಲಿತ ನಾಮಾವಳಿಯನ್ನು ಪಠಣ ಮಾಡುತ್ತ ದೇವಿಯ ಆರಾಧನೆ ಮಾಡುವ ಕಾರ್ಯ ನಡೆಯುತ್ತಿದೆ. ದಸರಾ ಹಬ್ಬದಲ್ಲಿ ದೇವಿಯ ಆರಾಧನೆ ಮಾಡುವುದರಿಂದ ನಮ್ಮೆಲ್ಲ ಪಾಪ ಕರ್ಮಗಳು ದೂರಾಗುವವು ಎಂದು ದೇವಸ್ಥಾನದ ಅಧ್ಯಕ್ಷ ಸೋಮಯ್ಯ ಬಾಳಿಹಳ್ಳಿಮಠ ಹೇಳಿದರು. ಈ ಸಂದರ್ಭದಲ್ಲಿ ನಾನಾಸಾಹೇಬ ಬಹದ್ದೂರ ದೇಸಾಯಿ, ರುದ್ರಯ್ಯ ಪುರಾಣಿಕಮಠ, ಪುರಸಭೆಯ ಸದಸ್ಯ ಮಹೇಶ ಹೊಗೆಸೊಪ್ಪಿನ, ಪದ್ಮರಾಜ ಪಾಟೀಲ, ಕಳ್ಳಿಮಠ, ಯಲ್ಲಪ್ಪ ಗೌಳೇರ ಮುಂತಾದವರು ಹಾಜರಿದ್ದರು.
ಅಜೀಜಅಹ್ಮದ ಬಳಗಾನೂರ