ಗದಗ ವಾಣಿಜ್ಯೋದ್ಯಮಿಗಳಿಂದ ಸಚಿವ ಖರ್ಗೆ ಭೇಟಿ
ಕನ್ನಡಪ್ರಭ ವಾರ್ತೆ, ಗದಗ, ಅ. 14
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಶಿರೂರ ಹಾಗೂ ಸಂಸ್ಥೆಯ ರೇಲ್ವೆ ಉಪ ಸಮಿತಿ ಚೇರ್ಮನ್ ಜಿ.ಕೆ. ಆದಪ್ಪಗೌಡ್ರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಕನೂರ ಪಟ್ಟಣಕ್ಕೆ ಆಗಮಿಸಿದ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಗದಗ ಜಿಲ್ಲೆಯಲ್ಲಿ ಆಗಬೇಕಾಗಿರುವಂತಹ ರೇಲ್ವೆ ಸೌಕರ್ಯಗಳು ಹಾಗೂ ಹೊಸ ರೈಲು ಮಾರ್ಗಗಳ ರಚನೆ ಕುರಿತು ಬೇಡಿಕೆಗಳನ್ನು ಮಂಡಿಸಲಾಯಿತು.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರೈಲು ಮಾರ್ಗಗಳಾದ ಮುನಿರಾಬಾದ್-ಮೈಬೂಬನಗರ ಮತ್ತು ಕೊಪ್ಪಳ-ಆಲಮಟ್ಟಿ ರಚನೆಗೆ ಚಾಲನೆ ನೀಡುವುದು, 2010-11 ಹಾಗೂ 2011-12ರ ಕೇಂದ್ರ ಮುಂಗಡ ಪತ್ರದಲ್ಲಿ ಕರ್ನಾಟಕ ಸರ್ಕಾರದ ಸಹಭಾಗಿತ್ವದಲ್ಲಿ ಮಂಜೂರಾದ ಗದಗ-ಯಲವಗಿ, ಗದಗ-ವಾಡಿ ಮಾರ್ಗಗಳ ಕಾಮಗಾರಿಗೆ ಚಾಲನೆ ನೀಡುವುದು ಹಾಗೂ ಗದಗ-ಕೊಟ್ಟೂರ ರೈಲು ಮಾರ್ಗವನ್ನು ಮುಂಡರಗಿ, ಹಡಗಲಿ ಮೂಲಕ ಸರ್ವೆ ಕಾರ್ಯವನ್ನು ಬೇಗನೆ ಕೈಗೆತ್ತಿಕೊಳ್ಳುವುದು ಮತ್ತು ಮುಂಬರುವ ಕೇಂದ್ರ ಮುಂಗಡ ಪತ್ರದಲ್ಲಿ ಮಂಜೂರಾತಿ ನೀಡಿ ಚಾಲನೆಗೆ ಕ್ರಮ ಕೈಗೊಳ್ಳುವುದು. ಈಗಾಗಲೇ ಮಂಜೂರಾದ ರೇಲ್ವೆ ಮಾರ್ಗಗಳಿಗೆ ಹಣ ಬಿಡುಗಡೆ ಮಾಡಿ ಯೋಜನೆಗಳಿಗೆ ಚಾಲನೆ ನೀಡುವುದು. ವಾರದಲ್ಲಿ 2 ದಿನ ಮೈಸೂರ-ವಾರಣಾಸಿ ರೈಲನ್ನು ಗದಗ ಸೊಲ್ಲಾಪುರ, ಮನಮಾಡ, ಇಟಾರ್ಸಿ, ಅಲಹಾಬಾದ್ ಮೂಲಕ ಹೊಸ ರೈಲನ್ನು ಪ್ರಾರಂಭಿಸುವುದು. ವಾರದಲ್ಲಿ 3 ದಿನ ಹುಬ್ಬಳ್ಳಿ-ಚೆನ್ನೈ ರೇಲ್ವೆಯನ್ನು ಗದಗ, ಗುಂತಕಲ್ ರೇನುಗುಂಟಾ ಮಾರ್ಗವಾಗಿ ಪ್ರಾರಂಭಿಸುವುದು. ಈಗಾಗಲೇ ವಾರದಲ್ಲಿ 4 ದಿನ ವಾಯಾ ಹುಬ್ಬಳ್ಳಿ ಮೂಲಕ ಬೆಳಗಾವಿ ಚಲಿಸುತ್ತಿರುವ ಸಂಪರ್ಕ ಕ್ರಾಂತಿ ರೈಲನ್ನು ಉಳಿದ 3 ದಿನ ಹುಬ್ಬಳ್ಳಿ, ಗದಗ ಸೊಲ್ಲಾಪುರ ಮೂಲಕ ಚಲಿಸುವಂತೆ ಕ್ರಮ ಜರುಗಿಸುವುದು. ಹೊಸದಾಗಿ ಯಶವಂತಪುರದಿಂದ ಕಟ್ರಾ, (ವೈಷ್ಣವಿದೇವಿ) ರೈಲನ್ನು ಹುಬ್ಬಳ್ಳಿ ಗದಗ ಸೊಲ್ಲಾಪುರ ಮೂಲಕ ಪ್ರಾರಂಭಿಸುವುದು. ಹೊಸದಾಗಿ ಯಶವಂತಪುರ, ಹರಿದ್ವಾರ ರೈಲನ್ನು ಹುಬ್ಬಳ್ಳಿ-ಗದಗ-ಸೊಲ್ಲಾಪುರ ದೆಹಲಿ ಮೂಲಕ ಪ್ರಾರಂಭಿಸುವುದು.
ಸದ್ಯ ಸೊಲ್ಲಾಪುರ-ಗದಗ ನಡುವೆ ಚಲಿಸುತ್ತಿರುವ ಪ್ಯಾಸೆಂಜರ್ ಗಾಡಿಯು ರಾತ್ರಿ 7.30ಕ್ಕೆ ಗದಗ ನಿಲ್ದಾಣಕ್ಕೆ ಬಂದು ರಾತ್ರಿ 2.30 ರವರೆಗೆ ಗದಗ ರೇಲ್ವೆ ನಿಲ್ದಾಣದಲ್ಲಿ ನಿಲ್ಲುವುದು ಮತ್ತು ಈ ರೈಲನ್ನು ಹೊಸಪೇಟೆಯವರೆಗೆ ವಿಸ್ತರಿಸುವುದು. ಗದಗ ರೇಲ್ವೆ ನಿಲ್ದಾಣವನ್ನು ಎ ಶ್ರೇಣಿಗೆ ಅಭಿವೃದ್ಧಿಪಡಿಸಿ ಹೆಚ್ಚಿನ 4 ಮತ್ತು 5 ಪ್ಲಾಟ್ ಫಾರ್ಮ್ಗಳನ್ನು ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಪಡಿಸುವುದು ಸೇರಿದಂತೆ ಹಲವು ಯೋಜನೆಗಳ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಯಿತು. ಬೇಡಿಕೆಗಳನ್ನು ಆಲಿಸಿದ ಸಚಿವರು ಶೀಘ್ರವಾಗಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು. ನಿಯೋಗದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಶರಣಪ್ಪ ಕುರಡಗಿ, ಎಸ್.ಎಸ್. ರಡ್ಡೇರ, ಬಸವರಾಜ ಅಯ್ಯನಗೌಡ್ರ ಮುಂತಾದವರು ಉಪಸ್ಥಿತರಿದ್ದರು.