ಧಾರ್ಮಿಕ ಆಚರಣೆ ಅವಶ್ಯ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಅ. 14
ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಸೌಹಾರ್ದತೆ ಮೂಡಿಸುವುದರ ಜತೆಗೆ ಭಾವೈಕ್ಯತೆ ಗಟ್ಟಿಗೊಳಿಸುತ್ತವೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಸಮೀಪದ ಗೊಗೇರಿ ಗ್ರಾಮದ ತುಳಜಾ ಭವಾನಿ ದೇಗುಲದ ನೂತನ ತೇರಿನ ರಥೋತ್ಸವ ಹಾಗೂ ದಸರಾ ಮಹೋತ್ಸಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಸಮಾಜದಲ್ಲಿ ಪರಸ್ಪರ ನಂಬಿಕೆ, ವಿಶ್ವಾಸ, ಸಹೋದರತ್ವ ಭಾವನೆಗಳು ವೃದ್ಧಿಗೊಳ್ಳುವಲ್ಲಿ ಧಾರ್ಮಿಕ ಆಚರಣೆಗಳು ಅವಶ್ಯಕ. ಈ ನಿಟ್ಟಿನಲ್ಲಿ ಗೊಗೇರಿ ಗ್ರಾಮದಲ್ಲಿ ಸರ್ವ ಧರ್ಮೀಯರು ಸೇರಿ ಪರಂಪರಾಗತವಾಗಿ ಆಚರಿಸಲ್ಪಡುವ ಧಾರ್ಮಿಕ ಸಂಪ್ರದಾಯಗಳನ್ನು ಇಂದಿನ ಯುವ ಪೀಳಿಗೆ ಮುಂದುವರೆಸುವ ಅಗತ್ಯವಿದೆ. ಜತೆಗೆ ಸಮುದಾಯದ ಸರ್ವರೂ ಕಾಯಕ ಜ್ಞಾನ ಹಾಗೂ ಏಕತಾ ಮಂತ್ರದ ತಳಹದಿಯ ಮೇಲೆ ಬದುಕಿದಾಗ ಜೀವನ ಮೌಲ್ಯ ಕಾಣಲು ಸಾಧ್ಯ ಎಂದರು.
ಹಾಲಕೇರೆ ಸಂಸ್ಥಾನ ಮಠದ ಅಭಿನವ ಅನ್ನದಾನ ಶ್ರೀಗಳು, ಮೈಸೂರು ಸಂಸ್ಥಾನ ಮಠದ ವಿಜಯ ಮಹಾಂತ ಶ್ರೀಗಳು, ರೋಣದ ಗುಲಗಂಜಿ ಶ್ರೀಮಠದ ಗುರುಪಾದ ದೇವರು, ಅಲ್ಹಾಜ ಸಯ್ಯದ್ ಅಬ್ದುಲ್ ಖಾದರ ಹುಸೇನಿ ಉಲ್ ಖಾದರಿ ಅರಿದ್ ಸಜ್ಜಾದನ್ ಹಾಗೂ ಅರ್ಚಕ ಕಲ್ಲಪ್ಪಜ್ಜನವರು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಗ್ರಾಪಂ ಅಧ್ಯಕ್ಷ ಹನುಮಪ್ಪ ಕಮ್ಮಾರ, ಗಜೇಂದ್ರಗಡ ಪುರಸಭೆ ವಿರೋಧ ಪಕ್ಷ ನಾಯಕ ಶಿವರಾಜ ಘೋರ್ಪಡೆ, ವಿ.ಆರ್. ಗುಡಿಸಾಗರ, ವೀರಣ್ಣ ಶೆಟ್ಟರ, ಚಂಬಣ್ಣ ಚವಡಿ, ಶ್ರೀಕಾಂತ ಅವದೂತ, ಗಣಪತರಾವ್ ಕಿಲ್ಲೇದಾರ, ಎಸ್.ಎಂ. ಆರಗಿದ್ದಿ, ಇಮಾಮಸಾಬ ಬಾಗವಾನ, ಕೆ.ಕೆ. ಬಾಗವಾನ, ಬಸವರಾಜ ಮೂಲಿಮನಿ, ಎಫ್.ಎಸ್. ಕರಿದುರಗನವರ, ಶಂಕ್ರಯ್ಯ ಮೇಟಿಮಠ, ಡಾ. ಬಸನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಪರಸಪ್ಪ ಹೊರಪೇಟಿ ಸ್ವಾಗತಿಸಿದರು. ಆರ್.ಕೆ. ಬಾಗವಾನ್ ನಿರೂಪಿಸಿದರು. ಮಲ್ಲಿಕಾರ್ಜುನ ಗಾರಗಿ ವಂದಿಸಿದರು.