ಬನ್ನಿ ತಗೊಂಡ ಬಂಗಾರವಾಗಿರೋಣ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಅ. 14
ಶತ ಶತಮಾನಗಳಿಂದಲೂ ಆಚರಿಸಿಕೊಂಡು ಬಂದಿರುವ ನಾಡ ಹಬ್ಬಗಳಲ್ಲಿ ದಸರಾ ಹಬ್ಬವೂ ಕೂಡ ಒಂದು. ಅದರಲ್ಲೂ ನರೇಗಲ್ಲ ಭಾಗದ ಜನತೆ ಈ ವರ್ಷ ವರುಣನ ಕೃಪೆಯಿಂದ ಅತಿ ವಿಜೃಂಭಣೆಯಿಂದ ದಸರಾ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ. ಸೋಮವಾರ ದ್ಯಾಂಪುರದ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವ ಕಾರ್ಯ ಯಶಸ್ವಿಯಾಗಿ ನಡೆಯಿತು.
ಹಲವಾರು ವರ್ಷಗಳಿಂದ ವರ್ಷಕ್ಕೊಮ್ಮೆ ಆಚರಿಸುವ ಈ ನಾಡ ಹಬ್ಬಕ್ಕೆ ತನ್ನದೇ ಆದ ಹಿನ್ನಲೆ ಇದೆ. ರಾಮನಿಂದ ರಾವಣನ ಸಂಹಾರವಾಗಿದ್ದರಿಂದ, ಪಾಂಡವರ ವನವಾಸದ ವೇಳೆ ಆಯುಧಗಳನ್ನು ಬನ್ನಿ ಮರದಲ್ಲಿಟ್ಟು ಪೂಜೆ ಸಲ್ಲಿಸಿದ್ದರ ನಿಮಿತ್ತ ಈ ಸಂಪ್ರದಾಯ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗಿದೆ. ನರೇಗಲ್ಲನಲ್ಲಿಯೂ ವಿಶೇಷವಾಗಿ ಈ ಹಬ್ಬಕ್ಕೆ ಪ್ರಾಧಾನ್ಯ ನೀಡಲಾಗಿದ್ದು, ಪಟ್ಟಣದ ಸುತ್ತಮುತ್ತಲಿನ ಮಜರೆ ಹಳ್ಳಿಗಳ ಭಕ್ತರು ಒಂದೆಡೆ ಸೇರಿ ಆಚರಿಸಿಕೊಂಡು ಬಂದಿರುವುದು ದಶಕಗಳ ಇತಿಹಾವನ್ನು ಹೊಂದಿದೆ.
ಪಟ್ಟಣದ ಮಜರೆ ಹಳ್ಳಿಗಳಾದ ತೋಟಗಂಟಿ, ಕೋಚಲಾಪುರ, ಮಲ್ಲಾಪುರ, ಕೋಡಿಕೊಪ್ಪದ ಜನತೆ ಸೇರಿ ದ್ಯಾಂಪುರದಲ್ಲಿರುವ ಬನ್ನಿ ಕಟ್ಟಿಗೆ ಪೂಜೆ ಸಲ್ಲಿಸಿ ಬನ್ನಿ ಅರ್ಪಿಸಿ, ನಂತರ ಪಟ್ಟಣದಲ್ಲಿರುವ ಕಲ್ಮೇಶ್ವರ ದೇವಸ್ಥಾನದಲ್ಲಿ ಬನ್ನಿ ಅರ್ಪಿಸಿ ನಂತರ ಬಂಧು-ಮಿತ್ರರಿಗೆ ಬನ್ನಿ ನೀಡಿ ಬನ್ನಿ ತಗೊಳ್ಳಿ, ನಾವು, ನೀವು ಬಂಗಾರವಾಗಿರೋಣ ಎನ್ನುತ್ತಾ ಪರಸ್ಪರ ಬನ್ನಿ ನೀಡುವ ಕಾರ್ಯದಲ್ಲಿ ತೊಡಗುತ್ತಾರೆ. ಪಟ್ಟಣದ ಕಲ್ಮೇಶ್ವರ ದೇವಸ್ಥಾನದಿಂದ ದೇವರ ಪಾದುಕೆ ಮತ್ತು ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ದ್ಯಾಂಪುರದಲ್ಲಿರುವ ಬನ್ನಿ ಕಟ್ಟಿಗೆ ಕರಡಿ ಮಜಲು, ವಾದ್ಯ ಗೋಷ್ಠಿಗಳ ನಡುವೆ ನಗರದ ಮತ್ತು ಮಜರೆ ಹಳ್ಳಿಗಳ ಜನತೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಬನ್ನಿ ಕಟ್ಟಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಸೀಮೋಲ್ಲಂಘನ ಮಾಡಿ ಲಖಿತ ರೂಪದಲ್ಲಿ ರಚಿಸಿದ ರಾಜಪತ್ರವನ್ನು ಗ್ರಾಮಪುರೋಹಿತರು, ಕುಲಕರ್ಣಿ, ಶ್ಯಾನುಭೋಗರು, ವಾಲಿಕಾರರು ಮುಂತಾದ ಪ್ರಮುಖರ ಸಮ್ಮುಖದಲ್ಲಿ ಓದಿಸಿ ಸರ್ವರಿಗೂ ಒಳಿತನ್ನು ಮಾಡು ತಾಯಿ ಎಂದು ಬೇಡಿಕೊಂಡು ಹಿಂದಿರುಗುತ್ತಾರೆ. ಈ ಕಾರ್ಯದಲ್ಲಿ ದ್ಯಾಂಪುರದ ಸರ್ವ ಸಮಾಜ ಬಾಂಧವರು ಪಾಲ್ಗೊಳ್ಳುವುದು ಇಲ್ಲಿನ ವಿಶೇಷ. ಮೆರವಣಿಗೆಯಲ್ಲಿ ಗ್ರಾಮ ಸಹಾಯಕ(ವಾಲಿಕಾರ) ಕಳಕಪ್ಪ ತಳವಾರ, ರೈಮಾನಸಾಬ ಲತೀಫಸಾಬನವರ, ಗ್ರಾಮಪುರೋಹಿತರು, ಕುಲಕರ್ಣಿ, ಶ್ಯಾನುಭೋಗರು, ವಾಲಿಕಾರರು, ಗೌಡರು ಮುಂತಾದ ಪ್ರಮುಖರು ನರೇಗಲ್ಲ ದ್ಯಾಂಪುರ ಹಾಗೂ ಸಕಲ ಮಜರೇ ಹಳ್ಳಿಯ ದೈವದವರು ಪಾಲ್ಗೊಂಡಿರುತ್ತಾರೆ.
59 ವರ್ಷಗಳಿಂದ ಆಚರಣೆ: ಗೌಡರ ಒಡೆತನದಲ್ಲಿ ನಡೆಯುವ ಈ ಎಲ್ಲ ನಿಯಮಾವಳಿಗಳನ್ನು ಸ್ಥಳೀಯ ಅಂದಾನಗೌಡ ಪಾಟೀಲ ಕಳೆದ 59 ವರ್ಷಗಳಿಂದ ವಹಿಸಿಕೊಂಡು ನೆರವೇರಿಸುತ್ತಿದ್ದಾರೆ. ದ್ಯಾಂಪುರದಲ್ಲಿರುವ 5 ಗೌಡರ ಮನೆತನಗಳ ಪೈಕಿ ವರ್ಷಕ್ಕೊಂದು ಮನೆತನದವರು ಬನ್ನಿ ಕಟ್ಟಿಯ ಎಣ್ಣೆ ಮಜಲು ಮಾಡುವ ಸೇವೆಯನ್ನು ಸಲ್ಲಿಸುತ್ತಾರೆ. ಈ ವರ್ಷ ಸಂಗನಗೌಡ ಸಣ್ಣನಿಂಗನಗೌಡರ ಪಾಳೆಯವಿದ್ದು ಪ್ರಮುಖ ಕಾರ್ಯಗಳನ್ನು ಅವರು ನಡೆಸಿ ಕೊಡುತ್ತಾರೆ. ರಾಜ ಮಹಾರಾಜರ ಕಾಲದಿಂದಲೂ ವಿಜಯ ದಶಮಿಯ ದಿನದಂದು ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಕುಂಕುಮ, ಅರಿಶಿಣ, ಕಾಯಿ, ಕರ್ಪೂರಗಳನ್ನು ಅರ್ಪಣೆ ಮಾಡುತ್ತಾರೆ. ಆತ್ಮಿಯತೆ, ಸ್ನೇಹ ಭಾವ ಉಳಿಸುವ ನಿಟ್ಟಿನಲ್ಲಿ ನಮ್ಮ ಹಿರಿಯರು ಇಂತಹ ನಾಡ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ.
ನಿಂಗರಾಜ ಬೇವಿನಕಟ್ಟಿ